ಸಿದ್ದಾಪುರ, ಜ.23: ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ ಪಾಲಿಬೆಟ್ಟದ ಅನುಗ್ರಹ ಸಭಾಂಗಣದಲ್ಲಿ ಗಿರಿಜನರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.ಸಭೆಯನ್ನುದ್ದೇಶಿಸಿ ಮಾತನಾಡಿದ ಗಿರಿಜನ ಮುಖಂಡರಾದ ಇಂದಿರ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಮಿತಿ ರಚನೆಯಾಗಿದ್ದರೂ, ಸಮಿತಿಯ ಗಮನಕ್ಕೆ ತಾರದೆ ಯಾವದೇ ಮಾನದಂಡವನ್ನು ಪಾಲಿಸದೆ ದಿಡ್ಡಳ್ಳಿಯಲ್ಲಿ ಏಕಾಏಕಿ ಗುಡಿಸಲು ನಿರ್ಮಾಣ ಮಾಡಿರುವದು ಸರಿಯಾದ ಕ್ರಮವಲ್ಲ. ಅರಣ್ಯ ಪ್ರದೇಶದಲ್ಲಿ ಮರಗಳನ್ನು ನಾಶಪಡಿಸಿ ಗುಡಿಸಲು ನಿರ್ಮಾಣ ಮಾಡಿದರೂ ಕೂಡ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿರುವ ದರಿಂದ ಪ್ರಾಣಿ ಸಂಕುಲಕ್ಕೂ ತೊಂದರೆಯಾಗಿದೆ. ಏಕಾಏಕಿ ನೂರಾರು ಏಕರೆಯಷ್ಟು ಅರಣ್ಯವನ್ನು ಒತ್ತುವರಿ ಮಾಡಿಕೊಂಡು ಅರಣ್ಯ ನಾಶ ಮಾಡಿದ್ದರೂ, ಸರಕಾರ ಹಾಗೂ ಜಿಲ್ಲಾಡಳಿತ ಈವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಬುಡಕಟ್ಟು ಕೃಷಿಕರ ಸಂಘ ಆದಿವಾಸಿಗಳ ಹಕ್ಕಿಗಾಗಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿದೆ. ಈವರೆಗೂ ಯಾವದೇ ಹಣವನ್ನು ಸಂಗ್ರಹಿಸಿಲ್ಲ. ದಿಡ್ಡಳ್ಳಿಯಲ್ಲಿ ಭೂಮಿ ನೀಡುವದಾಗಿ ಇಬ್ಬರು

(ಮೊದಲ ಪುಟದಿಂದ) ಗಿರಿಜನ ಮುಖಂಡರು ಮುಗ್ದರಿಂದ ಲಕ್ಷಾಂತರ ರೂ ಹಣವನ್ನು ಒಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಬೆತ್ತಲೆ ಪ್ರತಿಭಟನೆ ನಡೆಸಿದ್ದಕ್ಕೆ 1 ಕೋಟಿ ರೂ ಸರಕಾರ ನೀಡಿದೆ. ಇದರಿಂದಾಗಿ ಮುಂದೆ ರಾಜ್ಯದ ಎಲ್ಲಾ ಕಡೆಗಳಲ್ಲೂ ಬೆತ್ತಲೆ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದಂತಾಗಿದೆ ಎಂದರು. ಎ.ಕೆ ಸುಬ್ಬಯ್ಯ ಅವರು ಬುಡಕಟ್ಟು ಜನಾಂಗಕ್ಕೆ ಭೂಮಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದಿಡ್ಡಳ್ಳಿ ಘಟನೆಗೂ ಹಿಂದೆ ಅವರಿಗೆ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ ಅವರು, ನಿರ್ವಾಣಪ್ಪ ಈ ಹಿಂದೆ ಎಷ್ಟು ಮಂದಿಗೆ ನಿವೇಶನಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದು ಪ್ರಶ್ನಿಸಿದರು. ನಿರಾಶ್ರಿತರಿಗೆ ಸರಕಾರ ಜಾಗ ಗುರುತಿಸಿದ್ದರೂ, ದಿಡ್ಡಳ್ಳಿ ಅರಣ್ಯದಲ್ಲೇ ಜಾಗ ನೀಡಬೇಕೆಂದು ಪಟ್ಟು ಹಿಡಿಯುತ್ತಿದ್ದು, ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ. ಮುಖಂಡರು ಮುಗ್ದ ಗಿರಿಜನರನ್ನು ದಾರಿತಪ್ಪಿಸುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಜೆ.ಕೆ ರಾಮು ಮಾತನಾಡಿ, ಆರಂಭದಲ್ಲಿ 15 ಕುಟುಂಬಗಳಿದ್ದ ಗುಡಿಸಲು ದಿಢೀರನೆ 577 ಕ್ಕೆ ಏರಿಕೆಯಾಯಿತ್ತು. ಸಾಕಷ್ಟು ಆದಿವಾಸಿ ಮಂದಿಗಳು ನಿವೇಶನ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸಂಕಷ್ಟದಲ್ಲಿದ್ದಾರೆ. ಅಂತಹಾ ಆದಿವಾಸಿಗಳಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಕಳೆದ ಹಲವಾರು ವರ್ಷಗಳಿಂದ ಆದಿವಾಸಿಗಳು ಹೋರಾಟ ನಡೆಸುತ್ತಿದ್ದರೂ ಅಶ್ಲೀಲ ಪ್ರದರ್ಶನಗಳನ್ನು ಈವರೆಗೂ ಮಾಡದೆ, ಉತ್ತಮ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕೆಟ್ಟ ಹೋರಾಟಗಳು ಮರುಕಳಿ¸ Àದಂತೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದರು. ನೈಜ ಆದಿವಾಸಿಗಳಿಗೆ ಪೌಷ್ಟಿಕ ಆಹಾರ ನೀಡದೆ ಇತ್ತೀಚೆಗೆ ಬಂದವರಿಗೆ ಪೌಷ್ಟಿಕ ಆಹಾರ ನೀಡುತ್ತಿರುವದು ಸರಿಯಾದ ಕ್ರಮವಲ್ಲ ಎಂದರು.

ಜಿಲ್ಲಾ ಬುಡಕಟ್ಟು ಸಂಘದ ಅಧ್ಯಕ್ಷ ಜೆ.ಪಿ ರಾಜು ಮಾತನಾಡಿ, 1984 ರಿಂದ ಬುಡಕಟ್ಟು ಕೃಷಿಕರ ಸಂಘ ಸಂಘಟಿತರಾಗಿ ಹೋರಾಟ ನಡೆಸುತ್ತಿದ್ದು, ಈವರೆಗೂ ಯಾರಿಂದಲೂ ಹಣ ವಸೂಲಿ ಮಾಡಿಲ್ಲ. ಸಾಕಷ್ಟು ಆದಿವಾಸಿಗಳಿಗೆ ಹಕ್ಕುಪತ್ರ ನೀಡದ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಟೀಕಿಸಿದರು. ದಿಡ್ಡಳ್ಳಿಯಲ್ಲಿ ನಿರಾಶ್ರಿತರನ್ನು ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಿವಾಸಿಗಳಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಗಿರಿಜನ ಮುಖಂಡ ರಾಮ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 10 ವರ್ಷ ಕಳೆದರೂ ಕೂಡ ಸರಕಾರದ ಸೌಲಭ್ಯಗಳು ಸಾಕಷ್ಟು ಮಂದಿಗೆ ದೊರೆಯುತ್ತಿಲ್ಲ. ಕಳೆದ ಆರು ತಿಂಗಳ ಹಿಂದೆ ದಿಡ್ಡಳ್ಳಿಗೆ ಆಗಮಿಸಿ ಗುಡಿಸಲು ನಿರ್ಮಿಸಿ ಕೊಂಡಿರುವ ಮಂದಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ತಲತಲಾಂತರಗಳಿಂದ ಕಾಡನ್ನು ರಕ್ಷಿಸಿ, ಉಳಿಸಿಕೊಂಡು ಬರುತ್ತಿರುವ ತಮಗೆ ಕನಿಷ್ಟ ವಿದ್ಯುತ್ ಸೌಲಭ್ಯವೂ ಕೂಡ ಇಲ್ಲವಾಗಿದೆ.

ಕಾರ್ಡ್ ಸಂಸ್ಥೆಯ ಮುಖಂಡ ರಾಯ್ ಡೇವಿಡ್ ಮಾತನಾಡಿ, ಆರಂಭದಲ್ಲಿ 56 ಕುಟುಂಬಗಳು ದಿಡ್ಡಳ್ಳಿ ಅರಣ್ಯ ವಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರು. ತದನಂತರ 150 ಗುಡಿಸಲು ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದೀಗ 611 ಕುಟುಂಬಗಳು ಮೀಸಲು ಅರಣ್ಯದಲ್ಲಿ ವಾಸವಾಗಿದ್ದಾರೆ. ಬುಡಕಟ್ಟು ಕೃಷಿಕ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಗಿರಿಜನರಿಂದ ಹಣ ಸಂಗ್ರಹ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ನಿಜವಾದ ನಿರಾಶ್ರಿತರು ಹಾಗೂ ಜೀತದಾಳುಗಳಿಗೆ ಸರಕಾರ ಪುನರ್‍ವಸತಿ ಕಲ್ಪಿಸಬೇಕು ಎಂದರು.

ಅರಣ್ಯ ಹಕ್ಕು ಕಾಯ್ದೆಯಲ್ಲಿ 2005 ಕ್ಕಿಂತ ಹಿಂದೆ ವಾಸವಾಗಿದ್ದವರಿಗೆ ಮಾತ್ರ ಭೂಮಿ ನೀಡಬಹುದು. ಆದರೇ ದಿಡ್ಡಳ್ಳಿಯ ನಿರಾಶ್ರಿತರು ಕಳೆದ 6 ತಿಂಗಳಿಂದ ವಾಸವಿರುವದಾಗಿ ಸ್ವತಃ ಅವರೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ದಿಡ್ಡಳ್ಳಿ ಅರಣ್ಯದಲ್ಲಿ ಭೂಮಿ ನೀಡುವದು ಕಾಯ್ದೆಯಲ್ಲಿ ಅವಕಾಶ ಇಲ್ಲ. ದಿಡ್ಡಳ್ಳಿಯಲ್ಲಿ ಕಾನೂನು ಮೀರಿ ಜಾಗ ನೀಡಿದರೆ ರಾಜ್ಯದ ಅಲ್ಲಲ್ಲಿ ನೂರಾರು ದಿಡ್ಡಳ್ಳಿಗಳು ಹುಟ್ಟಿಕೊಳ್ಳುತ್ತದೆ. ಹೀಗಾಗಿ ಕಾನೂನು ಹಾಗೂ ಅರಣ್ಯವನ್ನು ರಕ್ಷಿಸಲು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು. ದಿಡ್ಡಳ್ಳಿಯಲ್ಲಿ ಗಿರಿಜನರಿಂದ ಸುಮಾರು 40 ಲಕ್ಷ ರೂ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ದಿಡ್ಡಳ್ಳಿ ನಿವಾಸಿ ಸರಸು ಮಾತನಾಡಿ, ಕಳೆದ ಮೂರು ತಲೆಮಾರಿನಿಂದ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಮೂಲ ಆದಿವಾಸಿಗಳಿಗೆ ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ, ಬೆತ್ತಲೆ ಪ್ರದರ್ಶನ ಮಾಡಿದ ಕಾರಣಕ್ಕೆ ಸರಕಾರ 1 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಆದರೇ ತಲತಲಾಂತರ ಗಳಿಂದ ಕಾಡಿನಲ್ಲೇ ವಾಸಿಸುವ ತಾವುಗಳು ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಎಲ್ಲಾ ಸರಕಾರಗಳು ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ದಿಡ್ಡಳ್ಳಿಯ ಆಶ್ರಮ ಶಾಲೆಯ ಎದುರು ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿ ಕೊಂಡು ವಾಸವಾಗಿರುವ ಕಾರಣ ಅಲ್ಲಿನ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಹಾಗೂ ರೋಗಗಳು ಹರಡುವ ಭೀತಿ ಇದ್ದು, ಕೂಡಲೇ ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಮಾಲ್ದಾರೆ ಗ್ರಾ.ಪಂ. ಉಪಾಧ್ಯಕ್ಷ ರಾಜು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರು ಹಾಗೂ ಮಾಲಿಕರು ಉತ್ತಮ ಬಾಂದವ್ಯವನ್ನು ಹೊಂದಿದ್ದು, ಪರಸ್ಪರ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಆದರೇ ದಿಡ್ಡಳ್ಳಿಯಲ್ಲಿ ಕೆಲ ಶಕ್ತಿಗಳು ವಿನಾಕಾರಣ ಗೊಂದಲ ಸೃಷ್ಠಿಸಿ, ಕಾರ್ಮಿಕರು ಹಾಗೂ ಬೆಳೆಗಾರರ ನಡುವೆ ಕಂದಕವನ್ನು ಸೃಷ್ಟಿ ಮಾಡಿದ್ದಾರೆ. ಕಾಡಿನಲ್ಲೇ ಹುಟ್ಟಿ ಬೆಳೆದ ತಾವು ಹೋರಾಟದ ಮೂಲಕ ಅರಣ್ಯ ಹಕ್ಕು ಕಾಯ್ದೆಯನ್ನು ಪಡೆದುಕೊಂಡಿದ್ದೇವೆ ಎಂದರು.

ಜಿ.ಪಂ. ಸದಸ್ಯೆ ಲೀಲಾವತಿ ಮಾತನಾಡಿ, ಸರಕಾರ ಈಗಾಗಲೇ ಪೈಸಾರಿ ಜಾಗವನ್ನು ಗುರುತಿಸಿದ್ದು, ನಿವೇಶನ ರಹಿತರಿಗೆ ಸೂರು ಒದಗಿಸಲು ಮುಂದಾಗಿದೆ. ಮಾಲ್ದಾರೆ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 500 ಕ್ಕೂ ಹೆಚ್ಚು ನಿವೇಶನ ರಹಿತರಿದ್ದು, ಸ್ಥಳೀಯರಿಗೆ ಆದ್ಯತೆ ನೀಡಿ, ಬಳಿಕ ಹೊರಗಿನವರಿಗೆ ನೀಡಲಿ ಎಂದರು.

ಜಿ.ಪಂ ಸದಸ್ಯೆ ಪಂಕಜ ಮಾತನಾಡಿ, ಹಲವಾರು ವರ್ಷ ಗಳಿಂದ ಕಾಡಿನಲ್ಲಿ ವಾಸವಾಗಿರುವ ಮೂಲ ಆದಿವಾಸಿಗಳಿಗೆ ಈವರೆಗೂ ಸರಕಾರ ಭೂಮಿಯನ್ನು ನೀಡಿಲ್ಲ. ಅರಣ್ಯ ಹಕ್ಕು ಕಾಯ್ದೆ ಜಾರಿಯಾದರೂ, ಆದಿವಾಸಿಗಳಿಗೆ ಮೂಲಭೂತ ಸೌಕರ್ಯ ಲಭ್ಯವಾಗಿಲ್ಲ. ಆದರೇ ಇತ್ತೀಚೆಗೆ ಅರಣ್ಯದಲ್ಲಿ ಬಂದು ವಾಸವಾಗಿರುವವರಿಗೆ ಸರಕಾರ 1 ಕೋಟಿ ನೀಡಿದೆ. ಮೂಲ ಆದಿವಾಸಿಗಳು ಕಾಡನ್ನು ಉಳಿಸಿ ಬೆಳೆಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಮೂಲ ಆದಿವಾಸಿಗಳಿಗೆ ಸೂರನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಎಂ ಗಣಪತಿ ಬೆತ್ತಲೆ ಪ್ರತಿಭಟನೆ ನಡೆಸಿದವರಿಗೆ ಒಂದು ಕೋಟಿ ರೂ ಹಣ ನೀಡಿರುವದು ನಾಚಿಕೆಯ ವಿಚಾರ. ನಿಜವಾದ ಮೂಲ ಆದಿವಾಸಿಗಳಿಗೆ ಸೂರು ಒದಗಿಸಬೇಕು ಎಂದರು.

ಮಾಲ್ದಾರೆಯ ಮುಖಂಡ ಚೆಮ್ಮಂಡ ವಿಜು ಬಿದ್ದಪ್ಪ ಮಾತನಾಡಿ, ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 700 ಕ್ಕೂ ಹೆಚ್ಚು ಕುಟುಂಬದವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಎಲ್ಲಾ ದಾಖಲಾತಿಗಳು ಇದೆ. ಅಂತವರಿಗೆ ಮೊದಲ ಆದ್ಯತೆ ನೀಡಬೇಕು. ಸರಕಾರ ಒಂದು ತಿಂಗಳವರೆಗೆ ದಿಡ್ಡಳ್ಳಿ ಜನರಿಗೆ ಗಡುವು ನೀಡಿತ್ತು. ಆದರೆ ಒಂದು ತಿಂಗಳು ಕಳೆದರೂ ಅವರನ್ನು ತೆರವುಗೊಳಿಸಿಲ್ಲ. ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಜಾಗ ಗುರುತಿಸಿ, ನೀಡಲು ಮುಂದಾದರೂ ದಿಡ್ಡಳ್ಳಿಯಲ್ಲಿಯೇ ಜಾಗ ಬೇಕೆಂದು ಪಟ್ಟು ಹಿಡಿಯುತ್ತಿರುವದು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಎ ಕರುಂಬಯ್ಯ, ದಿಡ್ಡಳ್ಳಿ ಹೋರಾಟದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ಸುದ್ಧಿ ಬರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಚಿವ ಆಂಜನೇಯರನ್ನು ಕಳುಹಿಸಿ, 1 ಕೋಟಿ ಹಣ ನೀಡಿದ್ದಾರೆ. ಇದರಲ್ಲಿ ಅರ್ಧದಷ್ಟು ಭಾಗ ಅಧಿಕಾರಿಗಳು ದುರುಪಯೋಗ ಪಡಿಸುವ ಸಾದ್ಯತೆ ಇದೆ. ಜಿಲ್ಲೆಯಲ್ಲಿ 25 ಏಕರೆ ಭೂಮಿಯನ್ನು ಗುರುತಿಸಿದ್ದರೂ, ದಿಡ್ಡಳ್ಳಿಯ ಅರಣ್ಯದಲ್ಲೇ ಸೂರು ನೀಡಲು ಕೆಲ ನಾಯಕರು ಪ್ರಚೋದನೆ ನೀಡುತ್ತಿದ್ದಾರೆ. ದಕ್ಷಿಣ ವಲಯ ಐ.ಜಿ.ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಿಡ್ಡಳ್ಳಿಗೆ ಭೇಟಿ ನೀಡಿ ನಕ್ಸಲ್ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗುವದು ಎಂದು ತಿಳಿಸಿದ್ದಾರೆ. ಹೀಗಾಗಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂದೇಹಗಳು ಸತ್ಯವಾಗಿದ್ದು, ಕೆಲ ಸಮಾಜಘಾತುಕ ಶಕ್ತಿಗಳು ಕಾರ್ಮಿಕರು ಹಾಗೂ ಮಾಲೀಕರ ನಡುವಿನ ಬಾಂಧವ್ಯವನ್ನು ಕೆಡಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸದ್ಯದಲ್ಲೇ ದಿಡ್ಡಳ್ಳಿ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವದು ಎಂದು ತಿಳಿಸಿದರು.

ಡಾ|| ಎ.ಸಿ ಗಣಪತಿ ಪ್ರ್ರಾಸ್ತಾವಿಕ ನುಡಿಯಾನ್ನಾಡಿದರು. ಚೇರಂಡ ನಂದ ಸುಬ್ಬಯ್ಯ, ಯರವರ ಸಂಜೀವ, ಸಿದ್ದಪ್ಪಾಜಿ, ಸ್ವಾಮಿ ಸೇರಿದಂತೆ ವಿವಿಧ ಪ್ರದೇಶದಿಂದ ನೂರಾರು ಆದಿವಾಸಿಗಳು ಹಾಗೂ ಕಾಫಿ ಬೆಳೆಗಾರರು ಆಗಮಿಸಿದ್ದರು. ವಿಚಾರ ಸಂಕಿರಣದಲ್ಲಿ ಒಟ್ಟು 10 ನಿರ್ಣಯಗಳನ್ನು ಕೈಗೊಂಡು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಕಳುಹಿಸಲು ತೀರ್ಮಾನಿಸಲಾಯಿತು.