ಸೋಮವಾರಪೇಟೆ, ಆ. 24: ಇಂದಿಗೂ ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದಿರುವ ಗಿರಿಜನರ ಬದುಕಿನಲ್ಲಿ ‘ನಾವುಗಳೂ ಎಲ್ಲರಂತೆಯೇ’ ಎಂಬ ಭಾವ ಮೂಡಿಸಲು ತಾಲೂಕು ಜಯ ಕರ್ನಾಟಕ ಸಂಘಟನೆ ಮುಂದಾಗಿದ್ದು, ಹಾಡಿವಾಸಿ ಗಳೊಂದಿಗೆ ಕಲೆತು ಸಹಭೋಜನ ಮಾಡುವ ಮೂಲಕ ಸರ್ವರೂ ಸಮಾನರು ಎಂಬ ಸಂದೇಶ ಸಾರಿದರು.
ಸಮಾಜದ ಮುಖ್ಯ ವಾಹಿನಿಯಿಂದ ಬೇರೆಯಾಗಿಯೇ ಹಾಡಿಯ ಗುಡಿಸಲುಗಳಲ್ಲಿ ವಾಸಿಸುವ ಗಿರಿಜನರನ್ನು ಅಬ್ಬೂರುಕಟ್ಟೆಯ ರೋಸ್‍ವುಡ್ ಕಾಫಿ ತೋಟಕ್ಕೆ ಕರೆಸಿದ ಜಯಕರ್ನಾಟಕದ ಪದಾಧಿಕಾರಿಗಳು, ಅವರಿಗೆ ಕಂಬಳಿ ವಿತರಿಸಿ, ತೋಟದಲ್ಲೇ ಅಡುಗೆ ತಯಾರಿಸಿ ಗಿರಿಜನರೊಂದಿಗೆ ಸಹ ಭೋಜನ ಮಾಡಿದರು. ಗಿರಿಜನರ ಹೆಗಲಮೇಲೆ ಕೈಹಾಕಿ ಕುಣಿದು ನಲಿದಾಡಿದರು. ಗಿರಿಜನರೂ ಸಹ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆತು ಸಂತಸಪಟ್ಟರು. ಸಂಘಟನೆ ವತಿಯಿಂದ ಕಳೆದ ಕೆಲ ವರ್ಷಗಳಿಂದ ಸ್ವಾತಂತ್ರೋತ್ಸವದಂದು ಗಿರಿಜನರ ಕುಟುಂಬದೊಂದಿಗೆ ಸಹಭೋಜನ ಆಯೋಜಿಸಲಾಗುತ್ತದೆ. ಈ ವರ್ಷ ಕಾರ್ಯಕ್ರಮ ವಿಳಂಬವಾಗಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು. ಜಿಲ್ಲೆಯ ಮೂಲನಿವಾಸಿಗಳೆಂದು ಕರೆಸಿಕೊಳ್ಳುವ ಗಿರಿಜನರು ಸರ್ಕಾರದ ಪ್ರಾಥಮಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೆಲ ಹಾಡಿಗಳಲ್ಲಿ ಗಿರಿಜನರ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಗಿರಿಜನರಿಗೆ ಮಳೆಗಾಲದ ಬದುಕು ಶೋಚನೀಯವಾಗಿರುತ್ತದೆ. ಮರುಕಲು ಗುಡಿಸಲಿನಲ್ಲೇ ಬದುಕಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಪದಾಧಿಕಾರಿಗಳಾದ ಕೌಶಿಕ್, ದೊರೆ, ನಿತಿನ್, ಮಿಥುನ್, ರಂಗ, ದೇವಿಪ್ರಸಾದ್, ಕ್ಲೀಟಸ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.