ಮಡಿಕೇರಿ, ಅ.27 : ನಗರದ ಗಾಂಧಿ ಮೈದಾನವನ್ನು ನಗರಸಭೆ ವ್ಯಾಪಾರೀಕರಣಗೊಳಿಸುತ್ತಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾ ವಕ್ತಾರ ಪಿ.ಎಸ್.ಭರತ್ ಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ ಡಾ.ಮನೋಜ್ ಬೋಪಯ್ಯ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು ಆಟದ ಮೈದಾನವನ್ನು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳಂತಹ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವದು ಖಂಡನೀಯ ವೆಂದು ಹೇಳಿದ್ದಾರೆ. ಪಕ್ಕದಲ್ಲೇ ಶಾಲೆಯೊಂದಿದ್ದು, ಶಾಲಾ ವಿದ್ಯಾರ್ಥಿ ಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಕ್ರೀಡಾ ಚಟುವಟಿಕೆಗಳಿಗಾಗಿ ಸೀಮಿತವಾಗಿದ್ದ ಮೈದಾನ ಇತ್ತೀಚಿನ ದಿನಗಳಲ್ಲಿ ನಗರಸಭೆಯ ದುರುದ್ದೇಶದ ಫಲವಾಗಿ ಇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಖಾಸಗಿ ವಾಹನಗಳ ನಿಲುಗಡೆಯಿಂದ ಮೈದಾನ ಸಂಪೂರ್ಣವಾಗಿ ಹದಗೆಟ್ಟು ತೀವ್ರ ವಿರೋಧದ ಹಿನ್ನೆಲೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆಟದ ಮೈದಾನದ ಸಂರಕ್ಷಣೆಯ ದೃಷ್ಟಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ನಿರ್ಣಯಗಳಾಗಿದೆ. ಆದರೆ ನಿರ್ಣಯ ಮಾಡಿದವರೇ ನಿರ್ಣಯವನ್ನು ಉಲ್ಲಂಘಿಸುವ ಮೂಲಕ ಸಂಶಯಗಳನ್ನು ಹುಟ್ಟು ಹಾಕಿದ್ದಾರೆ. ನಗರದ ಜನರನ್ನು ಕತ್ತಲೆಯಲ್ಲಿಟ್ಟು ಆಡಳಿತ ನಡೆಸುತ್ತಿರುವ ನಗರಸಭೆ ಇದೀಗ ಮತ್ತೆ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಿದೆ ಎಂದು ಪಿ.ಎಸ್.ಭರತ್ ಕುಮಾರ್ ಹಾಗೂ ಡಾ.ಮನೋಜ್ ಬೋಪಯ್ಯ ಆರೋಪಿಸಿದ್ದಾರೆ.
ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಮೈದಾನಗಳ ಕೊರತೆಯಿದ್ದು, ಇದರ ನಡುವೆಯೇ ಇರುವ ಮೈದಾನವನ್ನು ಕೂಡ ವಾಣಿಜ್ಯ ಉದ್ದೇಶಗಳಿಗೆ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಸಕ್ತರಿಗೆ ಅನ್ಯಾಯವಾಗುತ್ತಿದ್ದು, ಗಾಂಧಿ ಮೈದಾನವನ್ನು ಇತರ ಚಟುವಟಿಕೆ ಗಳಿಗೆ ನೆಲ ಬಾಡಿಗೆ ಆಧಾರದಲ್ಲಿ ನೀಡುವ ಸಂದರ್ಭ ನಗರಸಭೆ ಕಾನೂನನ್ನು ಉಲ್ಲಂಘಿಸು ತ್ತಿದೆ. ಕಳೆದ ಕೆಲವು ದಿನಗಳಿಂದ ಮತ್ತೆ ಮಳಿಗೆ ನಿರ್ಮಾಣವಾಗುತ್ತಿದ್ದು, ಮೈದಾನ ಹದಗೆಡುತ್ತಿದೆ. ಈ ಬಗ್ಗೆ ನಗರಸಭಾಧ್ಯಕ್ಷರನ್ನು ಪ್ರಶ್ನಿಸಿದರೆ ತಾನು ಅನುಮತಿ ನೀಡಿಲ್ಲವೆಂದು ಹೇಳುತ್ತಿದ್ದಾರೆ. ಮಳಿಗೆ ನಿರ್ಮಾಣ ಮಾಡುತ್ತಿರುವವರ ಬಳಿ ನಗರಸಭೆಯ ಯಾವದೇ ಅಧಿಕೃತ ಅನುಮತಿ ಪತ್ರವಿರುವದಿಲ್ಲ. ಮೂಲವೊಂದರ ಪ್ರಕಾರ ನಗರಸಭೆಯ ಉಪಾಧ್ಯಕ್ಷರು ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಳಿಗೆ ನಿರ್ಮಿಸಿಕೊಳ್ಳಲು ಮೌಖಿಕ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಈ ಆರೋಪ ನಿಜವೇ ಆಗಿದ್ದರೆ ಜೆಡಿಎಸ್ ಇದನ್ನು ತೀವ್ರವಾಗಿ ಖಂಡಿಸಲಿದೆ. ಕ್ಷುಲ್ಲಕ ರಾಜಕಾರಣ ದಿಂದ ನಗರಸಭೆ ಈಗಾಗಲೇ ನಲುಗಿ ಹೋಗಿದ್ದು, ಕಾಂಗ್ರೆಸ್ ಅಧ್ಯಕ್ಷರು, ಬಿಜೆಪಿ ಉಪಾಧ್ಯಕ್ಷರು ಎನ್ನುವ ಕಾರಣಕ್ಕಾಗಿ ಆಡಳಿತದಲ್ಲೂ ರಾಜಕೀಯ ಪೈಪೋಟಿ ನಡೆಯುತ್ತಿರು ವಂತೆ ಕಂಡು ಬರುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರುಗಳು ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯ ಪ್ರತಿನಿಧಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಅನಿವಾರ್ಯತೆ ಇದೆ. ಗಾಂಧಿ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಳಿಗೆಯ ಬಗ್ಗೆಯೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡು ತ್ತಿದ್ದು, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ಗಮನಿಸುವದಿಲ್ಲ ಎನ್ನುವ ಮನೋಸ್ಥಿತಿಯನ್ನು ನಗರ ಸಭೆಯ ಪ್ರಮುಖರು ಪ್ರದರ್ಶಿಸುತ್ತಿ ದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಗಾಂಧಿ ಮೈದಾನದಲ್ಲಿ ಎಷ್ಟು ಮಳಿಗೆಗಳಿಗೆ ಅನುಮತಿಯನ್ನು ನೀಡಲಾಗಿದೆ ಮತ್ತು ಈ ಮಳಿಗೆಗಳಿಂದ ನಗರಸಭೆಗೆ ಬಂದಿರುವ ಆದಾಯವೆಷ್ಟು ಎನ್ನುವದನ್ನು ನಗರಸಭೆ ಬಹಿರಂಗ ಪಡಿಸಬೇಕೆಂದು ಅವರು ಒತ್ತಾಯಿಸಿ ದ್ದಾರೆ. ಪ್ರಸ್ತುತ ನಿರ್ಮಾಣ ಗೊಳ್ಳುತ್ತಿರುವ ಮಳಿಗೆಯನ್ನು ತೆರವುಗೊಳಿಸಿ ಮೈದಾನವನ್ನು ಸುಸ್ಥಿತಿಯಲ್ಲಿಡದಿದ್ದಲ್ಲಿ ಜೆಡಿಎಸ್ ವತಿಯಿಂದ ನಗರಸಭೆ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿರುವ ಪಿ.ಎಸ್. ಭರತ್ ಕುಮಾರ್ ಹಾಗೂ ಡಾ.ಮನೋಜ್ ಬೋಪಯ್ಯ ಇನ್ನು ಮುಂದೆ ಕ್ರೀಡಾ ಚಟುವಟಿಕೆಗಳು ಹೊರತು ಪಡಿಸಿದಂತೆ ಇತರ ಯಾವದೇ ವಾಣಿಜ್ಯ ಚಟುವಟಿಕೆಗಳಿಗೆ ಮೈದಾನ ವನ್ನು ನೀಡಬಾರದೆಂದು ಒತ್ತಾಯಿಸಿ ದ್ದಾರೆ.