ಸೋಮವಾರಪೇಟೆ,ಆ.18: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣ ಪತ್ತೆಹಚ್ಚಿದ ಕಂದಾಯ ಇಲಾಖಾಧಿಕಾರಿಗಳು, ಒತ್ತುವರಿದಾರರಿಂದ ಒಂದೂಕಾಲು ಏಕರೆ ಜಾಗವನ್ನು ತೆರವುಗೊಳಿಸಿದರು.

ಗರಗಂದೂರು ಗ್ರಾಮದ ಸರ್ವೆ ನಂಬರ್ 231/1ರ ಒಂದೂಕಾಲು ಎಕರೆ ಜಾಗವನ್ನು ವೇದಾವತಿ ಎಂಬವರ ಕುಟುಂಬ ಒತ್ತುವರಿ ಮಾಡಿಕೊಂಡು ಸಿಲ್ವರ್ ಹಾಗೂ ಪಾನವಾಳ ಮರಗಳನ್ನು ಬೆಳೆದಿದ್ದರು. ಇದನ್ನು ಪತ್ತೆಹಚ್ಚಿದ ಕಂದಾಯ ಇಲಾಖಾಧಿಕಾರಿಗಳು ಜಿಲ್ಲಾಡಳಿತದ ನಿರ್ದೇಶನದಂತೆ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದರು.

ಕಂದಾಯ ನಿರೀಕ್ಷಕ ಚಂದ್ರಶೇಖರಯ್ಯ, ಗ್ರಾಮ ಲೆಕ್ಕಿಗ ಎಂ.ಟಿ. ನಾಗೇಶ್‍ರಾವ್, ಹೋಬಳಿ ಭೂ ಮಾಪಕ ಕಿಶೋರ್ ಪಾಟೀಲ್, ಗ್ರಾಮ ಸಹಾಯಕರಾದ ಮಾಂಕು, ಬೊಗ್ರಪ್ಪ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.