ಶನಿವಾರಸಂತೆ, ಡಿ. 28: ಪಟ್ಟಣದ ಸೇಕ್ರೇಡ್ ಹಾರ್ಟ್ ಸಂಯುಕ್ತ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮೇಳ ಹಾಗೂ ಕಲಾಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಕಾಲೇಜಿನವರೆಗೆ ವಿದ್ಯಾರ್ಥಿಗಳು ತಾವೇ ನಿರ್ಮಿಸಿದ ವಿಜ್ಞಾನ ಮಾದರಿಗಳು ಹಾಗೂ ಕಲಾಕೃತಿಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆ ಮೆರೆದು ವೀಕ್ಷಕರನ್ನು ಬೆರಗುಗೊಳಿಸಿದರು. ಸಂಸ್ಥೆಯ ಸಭಾಂಗಣ ಹಾಗೂ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಜೈವಿಕ ಇಂಧನ ಘಟಕ, ಏರ್ ಗನ್, ದಹಿಸುವ ಯಂತ್ರ, ಹಸಿರು ಮನೆ, ಸಾವಯವ ಗ್ರಾಮ, ನೇಗಿಲು, ಮ್ಯಾಗ್ನೆಟ್‍ನಿಂದ ವಿದ್ಯುತ್ ಉತ್ಪಾದನೆ, ಬಟ್ಟೆ ತೊಳೆಯುವ ಯಂತ್ರ, ಬ್ಯಾಟರಿ ಚಾಲಿತ ಹಿಟಾಚಿ, ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದನೆ, ನೀರು ಶುದ್ಧೀಕರಣ ಯಂತ್ರ ಇತ್ಯಾದಿ ಮಾದರಿಗಳು ವೀಕ್ಷಕರು ತಲೆದೂಗುವಂತೆ ಮಾಡಿದವು.
ಕೆಲ ವಿದ್ಯಾರ್ಥಿಗಳು ನಿರ್ಮಿಸಿದ ಬೇಲೂರು-ಹಳೇಬೀಡು ದೇವಾಲಯಗಳು, ಬೃಂದಾವನ ಜಲಾಶಯ, ಚಿಮ್ಮುವ ಕಾರಂಜಿ, ಮೈಸೂರು ಅರಮನೆ, ಬೆಂಗಳೂರಿನ ಲಾಲ್‍ಬಾಗ್ ಮಾದರಿಗಳು ನೈಜತೆಯನ್ನು ಸ್ಮರಿಸಿಕೊಳ್ಳುವಂತೆ ಮಾಡಿದವು.
ನಂತರ ನಡೆದ ವಿಚಾರವಾದಿ ಹುಲಿಕಲ್ ನಟರಾಜ್ ಅವರ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಜನಮನ ರಂಜಿಸಿತು. ಭಾನಮತಿ ಪ್ರಯೋಗ, ಮಾಟ-ಮಂತ್ರ, ದೇವರು-ದೆವ್ವ ಮೈಮೇಲೆ ಬರುವದು ಇತ್ಯಾದಿ ಮೂಢನಂಬಿಕೆಗಳ ಬಗ್ಗೆ ಪ್ರದರ್ಶನ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಸಂಪನ್ಮೂಲ ವ್ಯಕ್ತಿ ನಿರ್ಮಲಾ, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಫಾದರ್ ಸೈಜು, ಫಾದರ್ ಥಾಮಸ್, ಫಾದರ್ ಅಲೆಕ್ಸ್ ಹಾಗೂ ಇತರರು ಪಾಲ್ಗೊಂಡಿದ್ದರು.
ಪಟ್ಟಣದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡು ವೀಕ್ಷಿಸಿದರು.