ಮಡಿಕೇರಿ, ಆ. 5: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ಸಲಹೆಯಂತೆ ಏಕ ತನಿಖೆಗೆ ಪರಿವರ್ತನೆಯಾಗಿದ್ದು, ಸಿಐಡಿಯಿಂದಲೇ ತನಿಖೆ ಕೈಗೊಳ್ಳ ಲಾಗುವದು. ತನಿಖಾ ವರದಿಯನ್ನು ಸೆ. 19ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಧಾನ ಸಿವಿಲ್ ಜಡ್ಜ್ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಆದೇಶ ನೀಡಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಕೊಡಗು ರಂಗಸಮುದ್ರ ನಿವಾಸಿ, ಮಂಗಳೂರಿನಲ್ಲಿ ಡಿವೈಎಸ್‍ಪಿ ಯಾಗಿದ್ದ ಎಂ.ಕೆ. ಗಣಪತಿ ಅವರು ಜು. 7ರಂದು ಮಡಿಕೇರಿಯಲ್ಲಿ ಸ್ಥಳೀಯ ಹಾಗೂ ರಾಜ್ಯಮಟ್ಟದ ಸುದ್ದಿವಾಹಿನಿಗೆ ಸಂದರ್ಶನ ನೀಡಿ ಸಚಿವ ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ಅವರುಗಳ ವಿರುದ್ಧ ಕಿರುಕುಳದ ಆರೋಪ ಹೊರಿಸಿ ನಗರದ ಲಾಡ್ಜ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಜ್ಯ ಸರ್ಕಾರ ಅಂದೇ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ತಾ. 8ರಂದೇ ಜಿಲ್ಲೆಗೆ ಆಗಮಿಸಿದ ಐಜಿ ಹೇಮಂತ್ ನಿಂಬಾಳ್ಕರ್ ನೇತೃತ್ವದ ಸಿಐಡಿ ತಂಡದಲ್ಲಿ ಸಿಐಡಿ ಎಸ್‍ಪಿ ಕುಮಾರ್‍ಸ್ವಾಮಿ ಹಾಗೂ ಇಬ್ಬರು ಡಿವೈಎಸ್‍ಪಿಗಳೊಂದಿಗೆ ತನಿಖೆ ಆರಂಭಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮೂಲ ಗಳಿಂದ ತನಿಖೆ ನಡೆಸಲಾಯಿತು. ಸ್ಥಳೀಯ ಹಾಗೂ ರಾಜ್ಯಮಟ್ಟದ ಸುದ್ದಿವಾಹಿನಿ, ಆಟೋ ಚಾಲಕ, ಆತ್ಮಹತ್ಯೆ ಮಾಡಿಕೊಂಡ ವಸತಿ ಗೃಹದ ಸಿಬ್ಬಂದಿಗಳನ್ನು ಕರೆಸಿ ವಿಚಾರಿಸಲಾಗಿತ್ತು.
ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯದ ಬಂದೂಕು ತಜ್ಞರು ರಿವಾಲ್ವರ್‍ನಿಂದ ಗುಂಡು ಸಿಡಿದ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪತಿ ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿನ ಅಭಿಪ್ರಾಯ ನೈಜವಾಗಿದ್ದು, ಈ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗಣಪತಿ ಅವರ ಪತ್ನಿ ಪಾವನಾ ಅವರು ಕುಶಾಲನಗರದಲ್ಲಿ ದೂರು ದಾಖಲಿಸಿದ್ದರು. ಆದರೆ ಎಫ್‍ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಸಂಕೇತ್‍ಪೂವಯ್ಯ ನೇತೃತ್ವದಲ್ಲಿ ಠಾಣೆ ಎದುರು ಧರಣಿ ನಡೆಸಲಾಯಿತು.
ಬಳಿಕ ಎಫ್‍ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿರುವದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ದೇಶನದಂತೆ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಗಣಪತಿ ಅವರ ಪುತ್ರ ನೇಹಾಲ್ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದಲ್ಲಿ ಪೊಲೀಸರು ಮೊಕದ್ದಮೆ ಹೂಡಲು ಸೂಚಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಜು. 18ರಂದು ಇರಿಸಿತ್ತು. ಈ ಸಂದರ್ಭ ವಿಧಾನ ಮಂಡಲದಲ್ಲಿಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ, ಕೋಲಾಹಲ ನಡೆಯಿತು. ಸದನವನ್ನು ಹಲವು ಬಾರಿ ಮುಂದೂಡಲಾಯಿತು. ಈ ಮಧ್ಯೆ ಎಫ್‍ಐಆರ್ ದಾಖಲಿಸುವಂತೆ ಕೊಡಗು ಬಂದ್ ಕೂಡಾ ನಡೆಯಿತು.
ತಾ. 18ರಂದು ಪ್ರಧಾನ ಸಿವಿಲ್ ಜಡ್ಜ್ ಜೆಎಂಎಫ್‍ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಭಾರತೀಯ ದಂಡ ಸಂಹಿತೆ 306/ ಖW 34 ರಂತೆ ಮೂವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶ ನೀಡಿದ್ದರು. ಆ ಬಳಿಕ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ತೀರ್ಪು ಹೊರಬೀಳುತ್ತಿದ್ದಂತೆ ಹಿರಿಯ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣಬ್ ಮೊಹಾಂತಿ ಅವರುಗಳು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮಡಿಕೇರಿ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇದಕ್ಕೆ ಸಮ್ಮತಿ ನೀಡದÀ ನ್ಯಾಯಾಲಯ ಅರ್ಜಿದಾರರ ವಕೀಲರು ದೂರುದಾರರಾದ ನೇಹಾಲ್ ಅವರಿಗೆ ಮೇಲ್ಮನವಿಯ ಪ್ರತಿ ಕಳುಹಿಸುವಂತೆ ಸೂಚಿಸಿದರು. ಅಲ್ಲದೆ ನೇಹಾಲ್ ಅವರು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿತ್ತು.
ತಾ. 19ರಂದು ಮಡಿಕೇರಿ ನ್ಯಾಯಾಲಯದ ಆದೇಶದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಯಿತು. ಈ ಮಧ್ಯೆ ಶೇ. 80 ತನಿಖೆ ಮುಗಿಸಿದ ಸಿಐಡಿ ಅಧಿಕಾರಿಗಳು ಮಡಿಕೇರಿ ನ್ಯಾಯಾಲಯದ ಆದೇಶದಿಂದಾಗಿ ತಮ್ಮ ತನಿಖೆಯನ್ನು ಸಧ್ಯಕ್ಕೆ ಕೈ ಬಿಟ್ಟು ಬೆಂಗಳೂರಿಗೆ ತೆರಳಿದ್ದರು. ಬಳಿಕ ಮಡಿಕೇರಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಗಳು ಮಡಿಕೇರಿ ನ್ಯಾಯಾಲಯದ ಆದೇಶವನ್ನು ತಡೆಕೋರಿ ಸಲ್ಲಿಸಿದ್ದ ಮೇಲ್ಮನವಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ಮೇಲ್ಮನವಿ ಜುಲೈ 28ರಂದು ವಜಾಗೊಂಡಿತ್ತು. ಅದಕ್ಕೂ ಮುನ್ನ ನ್ಯಾಯಾಧೀಶರು ಸರ್ಕಾರಕ್ಕೆ ನಿರ್ದೇಶಿಸಿದಂತೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನಿಖೆಯು ಕ್ರಮಬದ್ಧವಾಗಿ ನಡೆಯಬೇಕಾದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಏಕ ತನಿಖೆಯ ಅಗತ್ಯದ ಬಗ್ಗೆ ನ್ಯಾಯಾಧೀಶರು ನೀಡಿದ ಸಲಹೆ ಆಧಾರದಲ್ಲಿ ನ್ಯಾಯಾಲಯಕ್ಕೆ ಅಂದು ಮಧುಸೂದನ್ ನಾಯಕ್ ಸ್ಪಷ್ಟನೆಯಿತ್ತು ಸಿಐಡಿಯೊಂದಿಗೆ ಮಡಿಕೇರಿ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿರುವದರಿಂದ ಇದನ್ನು ಒಂದೇ ತನಿಖೆಯಾಗಿ ಪರಿವರ್ತಿಸಲಾಗುವದು. ಸಿಐಡಿ ಹಾಗೂ ಮಡಿಕೇರಿ ಪೊಲೀಸರ ತನಿಖೆಯನ್ನು ಒಂದುಗೂಡಿಸಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯನ್ನು ನಡೆಸಲು ಬದ್ಧವಿರುವದಾಗಿ ಖಚಿತ ಪಡಿಸಿದ್ದರು.
ಅದರಂತೆ ಕಾರ್ಯಪ್ರವೃತ್ತರಾದ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದರು. ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಈ.ಬಿ. ಶ್ರೀಧರ್ ತನಿಖಾಧಿಕಾರಿಗಳಾಗಿ ನೇಮಕ ಗೊಂಡಿದ್ದು, ಇಂದು ಮಡಿಕೇರಿ ನ್ಯಾಯಾಲಯದಲ್ಲಿ ಮಡಿಕೇರಿ ಪೊಲೀಸರು ವರದಿ ಮಾಡಿಕೊಳ್ಳಬೇಕಾಗಿತ್ತು. ಇದೇ ಸಂದರ್ಭ ನ್ಯಾಯಾಲಯಕ್ಕೆ ಆಗಮಿಸಿದ ತನಿಖಾಧಿಕಾರಿ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಏಕ ತನಿಖೆ ಕೈಗೊಳ್ಳಲು ಅವಕಾಶ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ಪ್ರಧಾನ ಸಿವಿಲ್ ಜಡ್ಜ್ ಜೆಎಂಎಫ್‍ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಸಿಐಡಿ ಅಧಿಕಾರಿಗಳಿಂದ ಏಕ ತನಿಖೆ ನಡೆಸಿ ಸೆ. 19ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದರು.
ದೂರುದಾರ ನೇಹಾಲ್ ಪರ ವಕೀಲ ಅಮೃತ್‍ಸೋಮಯ್ಯ ನ್ಯಾಯಾಲಯದಲ್ಲಿ ಹಾಜರಿದ್ದರು. ಎಫ್‍ಐಆರ್ ದಾಖಲಾದ ಬಳಿಕ ತನಿಖೆ ಆರಂಭಿಸಿದ್ದ ಮಡಿಕೇರಿ ಪೊಲೀಸರು ವೃತ್ತ ನಿರೀಕ್ಷಕ ಮೇದಪ್ಪ ಅವರ ನೇತೃತ್ವದಲ್ಲಿ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಗಣಪತಿ ಅವರ ಪುತ್ರ ನೇಹಾಲ್ ಅವರೊಂದಿಗೆ ಚರ್ಚಿಸಿ ಹಲವು ಮಾಹಿತಿ ಕಲೆ ಹಾಕಿದ್ದರು. ಸಿಐಡಿ ತನಿಖಾಧಿಕಾರಿ ಈ.ಬಿ. ಶ್ರೀಧರ್ ನಗರ ಠಾಣೆಗೆ ಆಗಮಿಸಿ, ಪೊಲೀಸರ ಬಳಿ ಇದ್ದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡರು ಎನ್ನಲಾಗಿದೆ.
- ವರದಿ : ಚಂದ್ರ ಉಡೋತ್