ಮಡಿಕೇರಿ, ಅ. 23: ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನ. 18 ರಿಂದ 21 ರವರೆಗೆ ಮಂಜೇಶ್ವರ ಎಸ್.ಎ.ಟಿ. ವಿದ್ಯಾಲಯದ ಪರಿಸರದಲ್ಲಿ ನಡೆಯಲಿರುವ ಗಡಿ ಜಾನಪದ ಉತ್ಸವದ ಅಂಗವಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಪೂರ್ಣ ಸಹಕಾರ, ಸಾನಿಧ್ಯ ಕುರಿತು ಮಡಿಕೇರಿಯಲ್ಲಿರುವ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಾಲಯದಲ್ಲಿ ಚರ್ಚೆ ನಡೆಯಿತು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಹಮ್ಮಿಕೊಳ್ಳುತ್ತಿರುವ ಗಡಿ ಉತ್ಸವಕ್ಕೆ ಕೊಡವ ಸಾಹಿತ್ಯ ಪರಿಷತ್ ಪೂರ್ಣ ಬೆಂಬಲ ಹಾಗೂ ಸಹಕಾರ ನೀಡಲಿದೆ. ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ ಮನಸ್ಸುಗಳೊಡನೆ ಕೊಡವ ಸಾಹಿತ್ಯ, ಸಾಂಸ್ಕøತಿಕತೆಯನ್ನು ಹಂಚುವಲ್ಲಿ ಉತ್ಸುಕರಾಗಿದ್ದು, ಇಂತಹ ಪ್ರಯತ್ನಗಳು ಭೌಗೋಳಿಕ, ಸಾಮಾಜಿಕ ಏಕತೆಯನ್ನು ಮತ್ತೆ ಪುನರ್ ಸ್ಥಾಪಿಸುವಲ್ಲಿ ಫಲಪ್ರದವಾಗಲಿದೆ ಎಂದು ತಿಳಿಸಿದರು.
ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಮಾತನಾಡಿ, ಹೊಸ ತಲೆಮಾರಿನ ಅರಿವಿನ ವಿಸ್ತಾರತೆ ಮತ್ತು ಪ್ರಾದೇಶಿಕ ವೈವಿಧ್ಯಗಳನ್ನು ಗುರುತಿಸುವಲ್ಲಿ ಗಡಿ ಜಾನಪದ ಉತ್ಸವಗಳಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದು, ಸರಕಾರ ಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ವಿಭಿನ್ನ ಬಹು ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡು ಹಿಂದಿನಿಂದಲೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತನ್ನದೇ ಛಾಪು ಮೂಡಿಸಿದ್ದು, ಕೊಡವ ಸಾಹಿತ್ಯ ಪರಂಪರೆಯೊಡನೆ ನಿಕಟ ಸಂಪರ್ಕದಲ್ಲಿದ್ದದ್ದು ದಾಖಲೆಗಳಿಂದ ಲಭ್ಯವಾಗುತ್ತಿದ್ದು, ಇದನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು, ಪ್ರಧಾನ ಕಾರ್ಯದರ್ಶಿ ಎ.ಆರ್. ಸುಬ್ಬಯ್ಯ ಕಟ್ಟೆ, ಕಾರ್ಯದರ್ಶಿಗಳಾದ ಕೇಳು ಮಾಸ್ತರ್ ಆಗಲ್ಪಾಡಿ ಮತ್ತು ಲಕ್ಷ್ಮಣ ಪ್ರಭು ಕುಂಬಳೆ, ಅಖಿಲೇಶ್ ಯಾದವ್, ಪೀಚೇರ ಡಾ. ರೇಖಾ, ಮಾಚೇರ ಡಾ. ಸುಭಾಷ್ ನಾಣಯ್ಯ, ಮಾಚೇರ ಬೆಳ್ಳಿಯಪ್ಪ, ಚೇವಂಡೆ ಬೋಪಯ್ಯ, ಮುಲ್ಲೇಂಗರ ಬೇಬಿ ಚೋಂದಮ್ಮ, ಕುಡಿಯರ ಬೋಪಯ್ಯ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಗಡಿ ಉತ್ಸವದ ಅಂಗವಾಗಿ 2 ದಿನಗಳ ಕೊಡವ ಕವಿಗೋಷ್ಠಿ, ನಾಟಕ, ನೃತ್ಯ ಸಹಿತ ವೈವಿಧ್ಯಮಯ ಕೊಡವ ಸಾಂಸ್ಕøತಿಕತೆಯ ಅನಾವರಣದ ಕಾರ್ಯಕ್ರಮ ನೀಡಲು ಈಗಾಗಲೇ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯೋನ್ಮುಖವಾಗಿದೆ.
ಗಡಿ ಉತ್ಸವದ ಉದ್ಘಾಟನೆಯಂದು ಕಾಸರಗೋಡಿನ ಜಾನಪದ ವೈವಿಧ್ಯಗಳು ಹಾಗೂ ಸಮಾರೋಪದಂದು ತೆಂಕುತಿಟ್ಟನ ಅಗಮಾನ್ಯ ಕಲಾವಿದರಿಂದ ಯಕ್ಷಗಾನ ಬಯಲಾಟ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.
ಡಾ. ಸುಭಾಷ್ ನಾಣಯ್ಯ ಸ್ವಾಗತಿಸಿ, ಲಕ್ಷ್ಮಣ ಪ್ರಭು ಕುಂಬಳೆ ವಂದಿಸಿದರು.