ಮಡಿಕೇರಿ, ಜ. 23: ಮಡಿಕೇರಿ ನಗರದ ಜನರಿಗೆ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಬಹುದೊಡ್ಡ ಬಯಕೆಯಾಗಿದ್ದು, ಇರುವ ಖಾಸಗಿ ಬಸ್ ನಿಲ್ದಾಣ ಕಿಷ್ಕಿಂಧೆಯಿಂದ ಕೂಡಿರುತ್ತದೆ. ಹಲವು ದಶಕಗಳಿಂದ ಬಸ್ ನಿಲ್ದಾಣಕ್ಕೆ ಜಾಗ ಹುಡುಕುತ್ತಿದ್ದು, ಮಡಿಕೇರಿ ಎತ್ತರ, ತಗ್ಗು ಪ್ರದೇಶವಾದುದರಿಂದ, ಬಸ್ ನಿಲ್ದಾಣಕ್ಕೆ ಅವಶ್ಯವಿರುವ ಜಾಗ ಲಭ್ಯವಾಗಿದೆ. ಅಂತಿಮವಾಗಿ ಎಲ್ಲರ ಪ್ರಯತ್ನದಿಂದ ನಗರದ ವೆಬ್ಸ್ ಬಳಿ ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ ಮಡಿಕೇರಿ ನಗರಸಭೆಗೆ ಖಾಸಗಿ ಬಸ್ ನಿಲ್ದಾಣ ಉದ್ದೇಶಕ್ಕೆಂದೇ 3 ಎಕರೆ ಜಾಗ ಮಂಜೂರಾಗಿದ್ದು, ನಗರ ಸಭೆಯಲ್ಲಿ ಖಾತೆ ಕೂಡ ಆಗಿರುತ್ತದೆ.

ಜಾಗ ಮಂಜೂರಾದರೂ ಕೂಡ ಹಣದ ಕೊರತೆ ಕಂಡುಬಂದು ಬೂತ್ ಮಾದರಿ ಅಥವಾ ಪಿ.ಪಿ.ಪಿ. ಮಾದರಿಯಲ್ಲಿ ನಿರ್ಮಾಣ ಮಾಡಲು, ಕ್ರಮಕೈಗೊಳ್ಳಲು ಡಿ.ಪಿ.ಆರ್.(ಡಿಟೈಲ್ ಪ್ರೋಜೆಕ್ಟ್ ರಿಪೋರ್ಟ್) ಕೂಡ ತಯಾರಿಸಲಾಗಿದೆ.

ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಕೆಲಸಕ್ಕೆ ಟೆಂಡರ್ ಕರೆದಿದ್ದು, ಇತ್ತೀಚೆಗೆ ನಗರಸಭೆಯಲ್ಲಿ ನಡೆದ ಕೌನ್ಸಿಲ್‍ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಿ ಸರ್ಕಾರ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆಂದೇ ಮಂಜೂರು ಮಾಡಿರುವ ವೆಬ್ಸ್ ಬಳಿಯ 3 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಜನತೆಗೆ ನೀಡಲು ಉದ್ದೇಶಿಸ ಲಾಗಿದೆ. ಜನಪ್ರತಿನಿಧಿಗಳ ಎಲ್ಲಾ ಸಹಕಾರ ದೊಂದಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಿ ಜನತೆಗೆ ಬಸ್ ನಿಲ್ದಾಣ ಅರ್ಪಿಸಲಾಗುವದು. ಇದಕ್ಕೆ ಸರ್ಕಾರದ ಅನುದಾನದ ಬಿಡುಗಡೆಗೆ ಸಹಕರಿಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನತೆಗೆ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿ ಅರ್ಪಿಸುವ ಬಗ್ಗೆ ಉತ್ಸುಕರಾಗಿದ್ದು, ಎಲ್ಲಾ ರೀತಿಯ ಸಹಕಾರ ನಗರಸಭೆಗೆ ನೀಡುವದಾಗಿ ಸ್ಪಂದಿಸಿರುತ್ತಾರೆ. ಇದರಿಂದ ಖಾಸಗಿ ಬಸ್ ನಿಲ್ದಾಣ ನಗರದ ಜನತೆಗೆ ಅರ್ಪಿಸುವ ಬಹುಕಾಲದ ಬೇಡಿಕೆ ಈಡೇರಿಕೆಯು ಸನ್ನಿಹಿತದಲ್ಲಿದೆ. ನಗರಕ್ಕೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವದರಿಂದ ಖಾಸಗಿ ಬಸ್ ನಿಲ್ದಾಣದ ಸ್ಥಳಾಂತರ ಅನಿವಾರ್ಯತೆಯನ್ನು ಮನಗಂಡು ಎಲ್ಲಾ ಜನಪ್ರತಿನಿಧಿಗಳು ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕಾಗಿದೆ ಎಂದು ನಗರಸಭಾ ಸದಸ್ಯರಾದ ಚುಮ್ಮಿ ದೇವಯ್ಯ ಕೋರಿದ್ದಾರೆ.