ಕುಶಾಲನಗರ, ಆ. 11: ಸ್ವಾತಂತ್ರ್ಯ ಹೋರಾಟದಲ್ಲಿಮಹತ್ವದ ಆಂದೋಲನ ಕ್ವಿಟ್ ಇಂಡಿಯಾ ಚಳುವಳಿಯಾಗಿದೆ ಎಂದು ಉಪನ್ಯಾಸಕ ಸಬಲಂ ಭೋಜಣ್ಣರೆಡ್ಡಿ ಹೇಳಿದರು.
ಎಂಎಚ್ಆರ್ಡಿ ಮತ್ತು ಎಐಸಿಟಿ ಯ ನಿರ್ದೇಶನದಂತೆ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ ಅವಲೋಕನ ಎಂಬ ವಿಷಯವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟೀಷರ ಗುಲಾಮಗಿರಿಯಿಂದ ಹೊರಬರಲು ಪ್ರಯತ್ನಪಟ್ಟು ನಡೆಸಿದ ಚಳುವಳಿಗಳು ಪ್ರಮುಖವಾಗಿವೆ. ಗಾಂಧೀಜಿಯವರ ಅಸಹಕಾರ-ಅಹಿಂಸಾ ಚಳುವಳಿ, ಸುಭಾಸ್ಚಂದ್ರಬೋಸ್, ಬಾಲ ಗಂಗಾಧರ ತಿಲಕ್ ರವರ ಪುರೋಗಾಮಿ ಭಾವನೆಯ ಚಳುವಳಿಗಳು ನಡೆಸಿದ ಹೋರಾಟ ಗಳಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರಕದೆ ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು. ಭಾರತದ ಬಿಡುಗಡೆಯ ಸಂಕಲ್ಪ ಸಹಕಾರ ಗೊಳ್ಳಲು ಲಕ್ಷಾಂತರ ಜನ ಹೋರಾಟದಲ್ಲಿ ಹುತಾತ್ಮರಾದರು. ಈ ಚಳುವಳಿ ಹತ್ತಿಕ್ಕಲು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮಿಸ ಬೇಕಾಯಿತು. ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಒಂದು ಕಡೆಯಾದರೆ, ಬ್ರಿಟೀಷರನ್ನು ಸಾಯಿಸಿ, ನೀವೇಕೆ ಸಾಯುತ್ತೀರಿ ಎಂಬ ಲಾಲ್ ಬಹದ್ದೂರು ಶಾಸ್ತ್ರಿಯವರ ಮಾತುಗಳು ಆಯಾ ವರ್ಗಗಳಿಗೆ ಅನುಗುಣವಾಗಿ ಕ್ರಿಯಾತ್ಮಕವಾದವು ಎಂದರು.
ಚಳುವಳಿಯಲ್ಲಿ ವಿದ್ಯಾರ್ಥಿಗಳು ರೈತರು, ವರ್ತಕರು, ಕಾರ್ಮಿಕರು, ಇಂಜಿನಿಯರ್ಗಳು, ವೈದ್ಯರು ಪಾಲ್ಗೊಂಡಿದ್ದರು. ಅಂದಿನ ಸರ್ಕಾರದ ಅಂಕಿಅಂಶಗಳಂತೆ 942 ಜನರ ಬಲಿದಾನ ನಡೆಯಿತು ಎನ್ನುವ ವರದಿಯಾಗಿದ್ದು ನೈಜವಾಗಿ 10,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದರು.
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲು ಹಾಕಿದ ಆಂದೋಲನ ಈ ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯದ ಪ್ರಮುಖ ಘಟ್ಟವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ವಿ.ಶಿವಪ್ಪ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದ ಹೋರಾಟಗಾರರ ನೆನಪುಗಳನ್ನು ಅವರ ಪರಿಶ್ರಮವನ್ನು ನಾವು ಮೆಲುಕು ಹಾಕಿದರು. ಇಂದಿನ ಯುವಪೀಳಿಗೆ ಆರೋಗ್ಯ ಪೂರ್ಣ ಸಮಾಜ ಸ್ಥಾಪನೆಗೆ ಕಾರಣರಾಗಬೇಕು. ಮೌಲ್ಯಯುಕ್ತ ಸಮಾಜ ನಿರ್ಮಾಣವಾಗಬೇಕಾದಲ್ಲಿ ಮಹಾನುಭಾವರ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಸುನಿತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.