ಮಡಿಕೇರಿ, ಅ. 27: ಸರ್ಕಾರ ಕ್ರೈಸ್ತ ಸಮಾಜದ ಅಭಿವೃದ್ಧಿಗಾಗಿ ರೂ. 125 ಕೋಟಿ ಮೀಸಲಿಟ್ಟಿದ್ದು, ಅದನ್ನು ಬಳಸಿಕೊಳ್ಳುವತ್ತ ಗಮನಹರಿಸುವಂತೆ ಕ್ರೈಸ್ತ ಸಮುದಾಯಕ್ಕೆ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೋ ಸಲಹೆ ಮಾಡಿದ್ದಾರೆ. ನಗರದ ಸಂತ ಮೈಕಲರ ಶಾಲೆಯಲ್ಲಿ ಜಿಲ್ಲೆಯ ಕ್ರೈಸ್ತ ಸಮಾಜದ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ ಎಲ್ಲಾ ಸಮಾಜಗಳ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶೇಷ ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಿದೆ.
ಸರ್ಕಾರ ಕ್ರೈಸ್ತ ಸಮುದಾಯಗಳ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರಾಗಿ ತನ್ನನ್ನು ನಿಯೋಜಿಸಿದೆ. ಹಾಗೆಯೇ ಉಪ ಸಮಿತಿಯನ್ನು ರಚನೆ ಮಾಡಿದ್ದು, ಉಪ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದು, ಚರ್ಚ್‍ಗಳ ದುರಸ್ತಿ, ನವೀಕರಣ, ಸ್ಮಶಾನ ಭೂಮಿ, ತಡೆಗೋಡೆ, ಕೌಶಲ್ಯ ತರಬೇತಿ ಮತ್ತಿತರ ಸಮಾಜದ ಅಭಿವೃದ್ಧಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ರಾಜ್ಯದ ಜನಸಂಖ್ಯೆಯಲ್ಲಿ 3.6 ರಷ್ಟು ಕ್ರಿಶ್ಚಿಯನ್ ಸಮುದಾಯವಿದ್ದು, ಸರ್ಕಾರ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ದಿಗಾಗಿ ವಿಶೇಷ ಒತ್ತು ನೀಡಿದೆ. ಆದರೆ ಕ್ರೈಸ್ತ ಸಮುದಾಯ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಹಿಂದೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಸರ್ಕಾರದ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರೈಸ್ತ ಸಮುದಾಯ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.
ಸರ್ಕಾರದ ಕಾರ್ಯಕ್ರಮಗಳ ಮಾಹಿತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸುವಂತಾಗಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೋಟಿ ರೂ.ವರೆಗೆ, ಪುರಸಭೆ, ನಗರಸಭೆ, ಪಟ್ಟಣ ವ್ಯಾಪ್ತಿಯಲ್ಲಿ ರೂ. 50 ಲಕ್ಷ ವರೆಗೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತದೆ. ವೃದ್ಧಾಶ್ರಮದ ನಿರ್ವಹಣೆಗೂ ಸಹ ಅನುದಾನ ಒದಗಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯ, ಆರೋಗ್ಯ ಕೇಂದ್ರಗಳು ಸೇರಿದಂತೆ ಸಮಾಜಕ್ಕೆ ಉಪಯೋಗವಾಗುವ ಯೋಜನೆಗಳಿಗೆ ಅನುದಾನ ಒದಗಿಸಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಸಮಾಜದ ಪ್ರತಿನಿಧಿಗಳಾದ ಕೆ.ಟಿ. ಬೇಬಿ ಮ್ಯಾಥ್ಯೂ ಅವರು ಚರ್ಚ್‍ಗಳ ದುರಸ್ತಿ ಹಾಗೂ ನವೀಕರಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತಾಗಬೇಕು. ಬಡ ಕ್ರಿಶ್ಚಿಯನ್ನರಿಗೆ ಸಹಾಯಧನ ಕಲ್ಪಿಸಬೇಕು. ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ಸಮಿತಿ ಇರುವಂತೆ ಜಿಲ್ಲಾ ಮಟ್ಟದಲ್ಲಿಯೂ ಸಹ ಸಮಿತಿ ರಚನೆ ಮಾಡುವಂತಾಗಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಕಾಲದಲ್ಲಿ ಸಾಲ ಸೌಲಭ್ಯಗಳು ದೊರೆಯಬೇಕು. ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಯೋಜನೆಗಳು ಒದಗಿಸುವಂತಾಗಬೇಕು ಎಂದು ಜೋಕಿಂ ರೋಡ್ರಿಗಸ್ ಮನವಿ ಮಾಡಿದರು.
ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ ಎಂಬ ಕೂಗು ಸಹ ಸಭೆಯಲ್ಲಿ ಕೇಳಿ ಬಂದಿತು. ಬಿದಾಯಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಬಳಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಹಲವರು ಹೇಳಿದರು.
ಕೆ.ಇ. ಮ್ಯಾಥ್ಯೂ ಅವರು ಸರ್ಕಾರದ ಸೌಲಭ್ಯಗಳ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಬೇಕಿದೆ. ವಿದ್ಯಾರ್ಥಿ ವೇತನ, ಚರ್ಚ್‍ಗಳ ನವೀಕರಣ, ಪ್ರಮಾಣ ಪತ್ರಗಳನ್ನು ನೀಡುವದು ಮತ್ತಿತರ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರು.
ಸಮಿತಿಯ ಉಪ ಕಾರ್ಯದರ್ಶಿ ಅಂಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಜಿ.ಪಂ.ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್.ಬಸವರಾಜು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ನಾಗೇಂದ್ರ ಪ್ರಸಾದ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಫಾದರ್ ಮುತ್ತುಸ್ವಾಮಿ ಮತ್ತಿತರರು ಇದ್ದರು.