ಕುಶಾಲನಗರ, ನ. 7 : ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಮನೋಭಾವನೆ ಮೂಡಿಸುವದರೊಂದಿಗೆ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ ಯುವ ಪೀಳಿಗೆಯಲ್ಲಿ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಸಂಘಟನೆಗಳು ಮುಂದಾಗಬೇಕೆಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಈ ಮಹೇಶ್ ಕರೆ ನೀಡಿದ್ದಾರೆ. ಅವರು ಕುಶಾಲನಗರ ಸಮೀಪ ನಂಜರಾಯಪಟ್ಟಣದ ನಂಜುಂಡೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆದ ದ್ವಿತೀಯ ವರ್ಷದ ಮುಕ್ತ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಸಂಘಟನೆಗಳ ಮೂಲಕ ನಡೆಯುವ ಗ್ರಾಮೀಣ ಕ್ರೀಡೆಗಳು ನಾಯಕತ್ವದ ಗುಣ ಹೊಂದಲು ಪೂರಕವಾಗಿದೆ. ಇತ್ತೀಚೆಗೆ ನಡೆದ ವಿಶ್ವ ಕಬಡ್ಡಿ ಪಂದ್ಯಾಟದಲ್ಲಿ ಭಾರತ ಪ್ರಥಮ ಸ್ಥಾನಗಳಿಸಿದೆ. ಈ ಬಾರಿಯ ಒಲಂಪಿಕ್‍ನಲ್ಲಿ ಭಾರತಕ್ಕೆ ಕೇವಲ 3 ಪದಕಗಳು ಮಾತ್ರ ಲಭಿಸಿದ್ದು, ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸುವಂತಹ ಕಾರ್ಯಗಳು ನಡೆಯಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಪ್ರೇಮಾನಂದ ಮಾತನಾಡಿ, ಕೊಡಗಿನಲ್ಲಿ ಜಾತಿ ಬೇಧ ಮರೆತು ಎಲ್ಲರೂ ಒಗ್ಗೂಡಿ ಭಾಗವಹಿಸುವ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಚಿಂತನೆ ಹರಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಜೈನಭ ಮಾತನಾಡಿ, ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜುಡೇಶ್ವರ ಯುವಕ ಸಂಘದ ಅಧ್ಯಕ್ಷ ಚೆಟ್ಟಡ್ಕ ಎಲ್. ವಿಶ್ವ ವಹಿಸಿದ್ದರು.

ಪ್ರದರ್ಶನ ಪಂದ್ಯಾವಳಿಯು ನಂಜರಾಯಪಟ್ಟಣದ ಸೆವೆನ್ ಟೈಗರ್ಸ್ ಮತ್ತು ಪೈಸಾರಿ ಬ್ರದರ್ಸ್ ನಡುವೆ ನಡೆಯಿತು. ತೀರ್ಪುಗಾರರಾಗಿ ಮೂಸಾ ಮತ್ತು ಕೃಷ್ಣ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಗೌಡ ಸಮಾಜದ ಅಧ್ಯಕ್ಷ ಕೆದಂಬಾಡಿ ಚೇತನ್, ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯ, ನಂಜರಾಯಪಟ್ಟಣ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಎಂ.ಎಂ. ರಮೇಶ್, ಎನ್.ಎಸ್ ಚಂದ್ರಶೇಖರ್, ರಾಮು, ಯುವಕ ಸಂಘದ ಕಾರ್ಯದರ್ಶಿ ಪಂಚಾಕ್ಷರಿ ಮತ್ತಿತರರು ಇದ್ದರು.