ಸುಂಟಿಕೊಪ್ಪ, ಡಿ. 12: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವದರಿಂದ ವ್ಯಕ್ತಿಯ ಮಾನಸಿಕ ಹಾಗೂ ಶಾರೀರಿಕಾ ಸದೃಢತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಭಿಪ್ರಾಯ ಪಟ್ಟರು. ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸಮಾಜ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಂಟಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಬಿಲ್ಲವ ಕ್ರೀಡಾಕೂಟದ 2ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿಲ್ಲವ ಸಮಾಜದವರು ಒಗ್ಗೂಡಿ ಕ್ರೀಡಾಕೂಟ ಆಯೋಜಿಸಿರುವದು ಸಂತಸದ ವಿಷಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಎಲ್ಲಾ ಸಮಾಜದವರು ಇತ್ತೀಚೆಗೆ ಸಮಾವೇಶ ಕ್ರೀಡಾಕೂಟ ನಡೆಸಿಕೊಂಡು ಬರುತ್ತಿರುವದು ಉತ್ತಮ ಬೆಳವಣಿಗೆ ಯಾಗಿದೆ. ಬಿಲ್ಲವ ಬಾಂಧವರು ಸೌಮ್ಯ ಸ್ವಭಾವದವರಾಗಿದ್ದು, ಪರಸ್ಪರ ಸೌಹಾರ್ದತೆಯಿಂದ ಜೀವನ ಸಾಗಿಸಿಕೊಂಡು ಹೋಗುತ್ತಿರುವದು ಕಾಣಬಹುದಾಗಿದೆ ಎಂದರು.

ಕೊಡಗು ಬಿಲ್ಲವ ಸಮಾಜದ ಅಧ್ಯಕ್ಷ ಆನಂದ ರಘು ಮಾತನಾಡಿ, ಬಿಲ್ಲವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈ ಜೋಡಿಸಬೇಕೆಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರೀಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿಮುಖೇಶ್ ಮಾತನಾಡಿದರು.

ವೇದಿಕೆಯಲ್ಲಿ ದೇಯಿ ಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಮಡಿಕೆರಿ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಬಿಲ್ಲವ ಸಮಾಜದ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಂಗೇರ, ಸೋಮವಾರಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ, ಸಮಾಜದ ಕಾನೂನು ಸಲಹೆಗಾರ ಬಿ.ಸಿ.ರಮೇಶ್ ಉಪಸ್ಥಿತರಿದ್ದರು. ಜಯಂತಿ ಕೃಷ್ಣಪ್ಪ ಪ್ರಾರ್ಥನೆಯೊಂದಿಗೆ ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.

ಕೋಟಿ ಜೆನ್ನಯ್ಯ ಬಿಲ್ಲವ ಕ್ರೀಡಾಕೂಟದ ಪುರುಷ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿ ರಾಯಲ್ ಪೂಜಾರಿ ತಂಡ ಪ್ರಥಮ, ಸುಂಟಿಕೊಪ್ಪ ಕಿಂಗ್ಸ್ ತಂಡ ದ್ವಿತೀಯ ಸ್ಥಾನ ಮುಡಿಗೇರಿಸಿಕೊಂಡಿತು.