ಗೋಣಿಕೊಪ್ಪಲು, ಡಿ. 22: ಅದೊಂದು ಆದಿವಾಸಿ ಕುಟುಂಬ. ಕಷ್ಟಪಟ್ಟು ದುಡಿದು ತಿನ್ನುವ ಈ ಕುಟುಂಬ ವಾಸವಿರುವದು ದೇವರಪುರ ಗ್ರಾಮ ಪಂಚಾಯ್ತಿಗೆ ಒಳಪಡುವ ತಿತಿಮತಿ ಸಮೀಪವಿರುವ 11ನೇ ಮೈಲಿನ ನೆಹರು ಕಾಲೋನಿಯಲ್ಲಿ. ಸರ್ಕಾರದಿಂದ ಮಂಜೂರಾಗಿರುವ ಜನತಾ ಮನೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಈ ಕುಟುಂಬಕ್ಕೆ ಮುದ್ದಾದ ಎರಡೂವರೆ ವರ್ಷದ ಕಂದಮ್ಮಳಿದ್ದಾಳೆ, ಸ್ಥಳೀಯ ಅಂಗನವಾಡಿಗೆ ತೆರಳುತ್ತಿರುವ ಈ ಪುಟ್ಟ ಕಂದಮ್ಮಳ ಹೆಸರು ಕೌಶಲ್ಯ. ಅಂಗನವಾಡಿಯ ಕಲಿಕಾ ಮಟ್ಟದಲ್ಲಿ ಉಳಿದ ಕಂದಮ್ಮಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ ಈ ಕೌಶಲ್ಯ.

ತಂದೆ-ಪಾಪು, ತಾಯಿ-ವಾಣಿ ಮಡಿಲಿನಲ್ಲಿ ಕೌಶಲ್ಯ ಆಟವಾಡುತ್ತಿದ್ದಳು. ದಿನನಿತ್ಯ ದುಡಿದು ಬಂದ ಕುಟುಂಬಕ್ಕೆ ತನ್ನ ಮುದ್ದಾದ ಮಗಳು ಕೌಶಲ್ಯ ಅಮ್ಮ-ಅಪ್ಪ ಎಂದು ಕರೆದಾಗ ಹೆತ್ತ ತಂದೆ-ತಾಯಿಗೆ ದುಡಿದು ಬಂದ ಆಯಾಸ ಮಾಯವಾಗುತ್ತಿತ್ತು. ಮುದ್ದಾದ ಕಂದಮ್ಮಳಿಗೆ ಅದೇಕೋ ಕಾಣೆ ಕಳೆದ 6 ತಿಂಗಳ ಹಿಂದೆ ಎಡಗಣ್ಣಿನಲ್ಲಿ ಸಣ್ಣದಾದ ಚುಕ್ಕೆ ಕಂಡುಬಂದಿತ್ತು ದಿನ ಕಳೆದಂತೆ ಈ ಸಣ್ಣ ಚುಕ್ಕಿ ಇಡೀ ಕಣ್ಣನ್ನು ಆವರಿಸಿ ದೃಷ್ಟಿ ಕಳೆದುಕೊಳ್ಳುವ ಮಟ್ಟಿಗೆ ಬಂದಿದೆ. ಕೂಲಿ ಮಾಡಿ ಬದುಕುವ ಈ ಕುಟುಂಬ ತನ್ನ ಮಗಳ ಕಣ್ಣನ್ನು ಸರಿಪಡಿಸಲು ಸಿಕ್ಕ ಸಿಕ್ಕ ಆಸ್ಪತ್ರೆಗೆ ನಡೆದಾಡಿ ತನ್ನ ಮಗಳ ಕಣ್ಣನ್ನು ಸರಿಪಡಿಸಿ ಎಂದು ವೈದ್ಯರ ಬಳಿ ಅಂಗಲಾಚಿದ್ದಾರೆ. ಆದರೆ ಕೈಯಲ್ಲಿದ್ದ ಹಣ ಖರ್ಚಾಯಿತೆ ವಿನಃ ಮಗಳ ಕಣ್ಣು ಸರಿಯಾಗಲಿಲ್ಲ. ಕೆಲವರು ದೊಡ್ಡಾಸ್ಪತ್ರೆಗೆ ತೋರಿಸಿದರೆ ಕಣ್ಣು ಸರಿಯಾಗಬಹುದೆಂದು ಸಲಹೆ ನೀಡಿದರು. ಅದರಂತೆ ಕೌಶಲ್ಯಳ ತಂದೆ, ತಾಯಿ ತನ್ನ ದಿನನಿತ್ಯದ ಕೂಲಿ ಬಿಟ್ಟು ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಾಗಿದೆ. ಈ ಬಡ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ಹೊಂದಿಸುವದು ಕಷ್ಟಸಾಧ್ಯವಾಗಿದೆ.

ನಾಡಿನ ಧಾನಿಗಳು ಈ ಪುಟ್ಟ ಕಂದಮ್ಮಳ ಸಹಾಯಕ್ಕೆ ನಿಲ್ಲಬೇಕಾಗಿದೆ. ಭವಿಷ್ಯದಲ್ಲಿ ಬಾಳಿ ಬದುಕಬೇಕಾದ ಕೌಶಲ್ಯಳ ಕಣ್ಣಿಗೆ ದೃಷ್ಟಿ ನೀಡಲು ಧಾನಿಗಳ ಸಹಾಯ ಹಸ್ತವನ್ನು ಈ ಬಡಕುಟುಂಬ ಬಯಸಿದೆ. ಸ್ಥಳೀಯ ದೇವರಪುರ ಹಾಗೂ ತಿತಿಮತಿ ಗ್ರಾಮ ಪಂಚಾಯ್ತಿ ಸಹಕಾರ ನೀಡಿದ್ದು, ಇನ್ನಷ್ಟು ಹಣದ ಅವಶ್ಯಕತೆ ಈ ಕುಟುಂಬಕ್ಕಿದೆ.

ಆಸಕ್ತರು ದೇವರಪುರದ ಕಾವೇರಿ ಗ್ರಾಮೀಣ ಬ್ಯಾಂಕಿನ ಖಾತೆ ಸಂಖ್ಯೆ 85042448292 ಗೆ ಸಹಾಯ ಹಸ್ತ ನೀಡಬಹುದು. ಮೊಬೈಲ್ 7259931119 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.