ಸುಂಟಿಕೊಪ್ಪ, ಡಿ. 8: ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸುಂಟಿಕೊಪ್ಪ ಹೋಬಳಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಬಿಲ್ಲವ ಕ್ರೀಡಾಕೂಟ ತಾ. 10, 11 ಮತ್ತು 12 ರಂದು ನಡೆಯಲಿದೆ ಎಂದು ಇಲ್ಲಿನ ಸಂಘದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್ ತಿಳಿಸಿದ್ದಾರೆ.
ಮಣಿ ಮುಖೇಶ್ ಮಾತನಾಡಿ, ತಾ. 10 ರಂದು ಬೆಳಿಗ್ಗೆ 6 ಗಂಟೆಗೆ ಇಲ್ಲಿನ ರಾಮ ಮಂದಿರದಲ್ಲಿ ಗಣಹೋಮ ನಡೆಯಲಿದೆ. ನಂತರ 7.30 ಕ್ಕೆ ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಕೆಳಗಿನ ಮೈದಾನದಲ್ಲಿ ನಾರಾಯಣ ಗುರುಗಳ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8.30 ಕ್ಕೆ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ವೈ. ಆನಂದ ರಘು ನೆರವೇರಿಸಲಿದ್ದಾರೆ ಎಂದರು.
ತಾ. 11 ರಂದು ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷ-ಮಹಿಳೆಯರಿಗೆ ಬಾರದ ಗುಂಡು ಎಸೆತ, ಪುರುಷ-ಮಹಿಳೆಯರಿಗೆ ಹಗ್ಗ ಜಗ್ಗಾಟ, 1 ರಿಂದ 4ನೇ ತರಗತಿ ಒಳಗಿನ ಮಕ್ಕಳಿಗೆ 50 ಮೀ. ಓಟ, 5 ರಿಂದ 7 ನೇ ತರಗತಿ ಬಾಲಕ-ಬಾಲಕಿಯರಿಗೆ 100 ಮೀ. ಓಟ, ಪ್ರೌಢ ಶಾಲಾ ಬಾಲಕ-ಬಾಲಕಿಯರಿಗೆ 200 ಮೀ. ಓಟ, ಕಾಲೇಜು ಬಾಲಕ ಬಾಲಕಿಯರಿಗೆ 400 ಮೀ. ಓಟ, ವಯಸ್ಕರಿಗೆ 100 ಮೀ. ಓಟ, 50 ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ ಸ್ಪರ್ಧೆ ನಡೆಯಲಿದೆ.
ತಾ. 12 ರಂದು ಬೆಳಿಗ್ಗೆ 8.30 ಗಂಟೆಯಿಂದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯುವ ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪೊಲೀಸ್ ಠಾಣಾಧಿಕಾರಿ ಅನೂಪ್ ಮಾದಪ್ಪ, ಕೊಡಗು ಬಿಲ್ಲವ ಸಮಾಜದ ಗೌರವಾಧ್ಯಕ್ಷ ಬಿ.ಎಂ. ಪೂವಪ್ಪ, ಕಾನೂನು ಸಲಹೆಗಾರ ಬಿ.ಸಿ.ರಮೇಶ್, ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು, ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಲ್ಲಿನ ಸಂಘದ ಅಧ್ಯಕ್ಷ ಮಣಿ ಮುಖೇಶ್ ವಹಿಸಲಿದ್ದಾರೆ. ಆನಂತರ ವಾಲಿಬಾಲ್ ಮತ್ತು ಥ್ರೋಬಾಲ್ ಫೈನಲ್ ಪಂದ್ಯಾಟ ಹಾಗೂ 5 ವರ್ಷ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವದು, ಮಹಿಳೆಯರಿಗೆ ಬಾಂಬ್ ಇನ್ ಸಿಟಿ ಸ್ಪರ್ಧೆ ನಡೆಯಲಿದೆ. ಬೆ. 10 ಕ್ಕೆ ಜಿಯಂಪಿ ಶಾಲಾ ಮೈದಾನದಿಂದ ನಾರಾಯಣ ಗುರು ಮತ್ತು ಕೋಟಿ ಚೆನ್ನಯ್ಯ ಅವರ ಭಾವಚಿತ್ರ ಅಲಂಕೃತ ಮಂಟಪ, ಸಾಂಸ್ಕøತಿಕ ಕಲಾ ತಂಡಗಳ ಶೋಭಯಾತ್ರೆಮುಖ್ಯ ರಸ್ತೆಯಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತರಾಮ್ ನೆರವೇರಿಸಲಿದ್ದು, ಮುಖ್ಯ ಭಾಷಣಕಾರರಾಗಿ ಮಂಗಳೂರಿನ ಕುದ್ರೋಳಿಯ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ. ಕೇಶವ ಬಂಗೇರ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಬಿಲ್ಲವ ಸಮಾಜದ ಖಜಾಂಚಿ ಬಿ.ಕೆ. ಮೋಹನ್, ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಉಪಾಧ್ಯಕ್ಷ ಬಿ.ಎಸ್. ಸದಾನಂದ, ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಕೊಡಗು ತಾಲೂಕು, ಹೋಬಳಿ ಘಟಕದ ಅಧ್ಯಕ್ಷರುಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ವೈ. ಆನಂದ ರಘು ವಹಿಸಲಿದ್ದಾರೆ ಎಂದು ಮಣಿ ಮುಖೇಶ್ ತಿಳಿಸಿದರು. ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಭಾಗವಹಿಸುವವರು. ತಾ. 9 ರಂದು ಮಧ್ಯಾಹ್ನದೊಳಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭ ಸುಂಟಿಕೊಪ್ಪ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಕಾರ್ಯದರ್ಶಿ ಹರೀಶ್ ಪೂಜಾರಿ, ಉಪಾಧ್ಯಕ್ಷ ದೇವಪ್ಪ ಪೂಜಾರಿ, ಗೀತಾ ವಿಶ್ವನಾಥ್, ಸಹಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಕ್ರೀಡಾ ಸಂಚಾಲಕರಾದ ಸತೀಶ್ ಮಳೂರು ಮತ್ತು ಸತೀಶ್ ಟಿಸಿಎಲ್ ಇದ್ದರು.