ಮಡಿಕೇರಿ, ಡಿ. 11: ದಕ್ಷಿಣ ಕೊಡಗಿನ ಕೊಂಗಣ ಹೊಳೆಯಿಂದ ಕೊಲ್ಲಿ ತೋಡು ಮೂಲಕ ಹುಣಸೂರಿಗೆ ನೀರು ಹರಿಸುವ ಯೋಜನೆಯಿಂದ ಕೊಡಗಿನ ಜನರಿಗೆ ಯಾವದೇ ಸಮಸ್ಯೆ ಸೃಷ್ಟಿಯಾಗ ಬಾರದು. ಯೋಜನೆ ಅನುಷ್ಟಾನದಿಂದ ಸ್ಥಳೀಯರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದಲ್ಲಿ ಯೋಜನೆಯನ್ನು ವಿರೋಧಿಸುವದಾಗಿ ಬಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಕಡೇಮಾಡ ಅಶೋಕ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಅಣೆಕಟ್ಟೆ ಅಥವಾ ತಡೆಗೋಡೆ ನಿರ್ಮಾಣಕ್ಕೆ ಸಹಮತ ಇಲ್ಲ. ಅಲ್ಲದೆ ಸ್ಥಳೀಯವಾಗಿ ಸನಿಹದ ಪೊನ್ನಂಪೇಟೆ, ಗೋಣಿಕೊಪ್ಪಲುವಿಗೆ ಕುಡಿಯುವ ನೀರು ಪೂರೈಸುವದಾದರೆ ಈ ಕೆಲಸ ನಿರ್ವಹಿಸಲಿ.
ಇದರೊಂದಿಗೆ ತೊಂದರೆ ಯಾಗದಂತೆ ಯೋಜನೆ ಕಾರ್ಯಗತ ಗೊಳಿಸುವ ಅವಕಾಶವಿದ್ದಲ್ಲಿ ಈ ನೀರು ಹಾದು ಹೋಗುವ ಮಾರ್ಗದ ಕೊಡಗಿನ ಪ್ರದೇಶದ ಜನತೆಗೆ ಮೊದಲು ಇದು ಉಪಯುಕ್ತವಾಗ ಬೇಕು. ಇಲ್ಲಿನವರಿಗೆ ನೀರು ಬಳಕೆಗೆ ಅವಕಾಶ ನೀಡದೆ ಕೇವಲ ಹುಣಸೂರಿನ ಉದ್ದೇಶವಾದರೂ ಯೋಜನೆಗೆ ವಿರೋಧ ವ್ಯಕ್ತಪಡಿಸು ವದಾಗಿ ಅವರು ಹೇಳಿದ್ದಾರೆ. ಉದ್ದೇಶಿತ ಸ್ಥಳವಾದ ಅರ್ಜಿಗುಂಡ್ ನಿಂದ ಮನೆಯಪಂಡ ಕಟ್ಟೆಯ ಮೂಲಕ ನೀರು ಹರಿಸಬೇಕಿದೆ. ಆದರೆ ಮನೆಯಪಂಡ ಕಟ್ಟೆ ಬತ್ತಿ ಹೋಗಿದ್ದು, ಕೆಳಭಾಗದಲ್ಲಿ ಸಣ್ಣ ಪ್ರಮಾಣದ ನೀರು ಮಾತ್ರ ಹರಿಯುತ್ತಿರುವದಾಗಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅಶೋಕ್ ಅವರು ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದರು.