ಮಡಿಕೇರಿ, ಸೆ. 20: ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಆರೋಪಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಲಕೋಡು ಪೈಸಾರಿ ಕೆ. ಚೆಟ್ಟಳ್ಳಿ ಗ್ರಾಮದಲ್ಲಿ ವಾಸವಾಗಿರುವ ಆರೋಪಿ ಬೆಟ್ಟಕುರುಬರ ಮಣಿ ತನ್ನ ಪತ್ನಿ ಮೃತೆ ಕಾವೇರಿಯೊಂದಿಗೆ ಶೀಲ ಶಂಕಿಸಿ ಆಗಾಗ್ಗೆ ಜಗಳ ಮಾಡುತ್ತಿದ್ದು, ದಿನಾಂಕ 26.5.2014ರಂದು ರಾತ್ರಿ ತನ್ನ ವಾಸದ ಮನೆಯಲ್ಲಿ ಕಾವೇರಿಯೊಂದಿಗೆ ಜಗಳ ಮಾಡಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಬಲಾತ್ಕಾರವಾಗಿ ಔಡಿgಚಿಟಿo ಠಿhosಠಿhoಡಿus ಎಂಬ ವಿಷ ಪದಾರ್ಥಗಳನ್ನು ಬಾಯಿಗೆ ತುರುಕಿಸಿ ಕೊಲೆ ಮಾಡಿರುತ್ತಾನೆಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ನಡೆಸಿ ಆರೋಪಿಯ ವಿರುದ್ಧ ಕೊಲೆ ಅಪರಾಧಕ್ಕೆ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಸಲಾಗಿದ್ದು, ಸಾಕ್ಷಿಗಳ ವಿಚಾರಣೆಯಿಂದ ಆರೋಪಿ ತನ್ನ ಪತ್ನಿಯನ್ನು ವಿಷ ಪ್ರಾಶನ ಮಾಡಿ ಕೊಲೆ ಮಾಡಿರುವದು ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಡಿ.ಪವನೇಶ್ ತೀರ್ಪು ನೀಡಿರುತ್ತಾರೆ. ಸದರಿ ತೀರ್ಪಿನಂತೆ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಮತ್ತು ರೂ. 7500 ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಪಾವತಿಯಾಗುವ ದಂಡದ ಹಣದಲ್ಲಿ ರೂ. 5000 ವನ್ನು ಮೃತಳ ತಾಯಿ ಚೋಮಿ ಎಂಬವರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ಅವರು ಅಂತಿಮ ವಾದ ಮಂಡಿಸಿದರು.