ಮೂರ್ನಾಡು, ಅ. 14: ಕೊಯವ ಸಮಾಜದ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಜಿಲ್ಲಂಡ ಸಿ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಮಹಾಸಭೆಯನ್ನು ಹಿರಿಯರಾದ ಚೋಕಿರ ರಘು ಕಾಳಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನಾಂಗ ಬಾಂಧವರು ಒಂದೆಡೆ ಕೂಡಿ ವಿಚಾರ ವಿನಿಮಯ ಮಾಡಿಕೊಳ್ಳುವಲ್ಲಿ ಸಮಾಜ ಸಹಕಾರಿ ಆಗಿದೆ. ಸಂಸ್ಕøತಿ, ಆಚಾರ-ವಿಚಾರಗಳನ್ನು ಉಳಿಸಿ-ಬೆಳೆಸಿಕೊಂಡು ಸಾಗುವಲ್ಲಿ ಇಂದಿನ ಯುವ ಪೀಳಿಗೆ ಶ್ರಮಿಸಬೇಕು ಎಂದರು. ಕೊಯವ ಸಮಾಜದ ಉಪಾಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಮಾತನಾಡಿ, ಕೊಡವ ಪದ್ಧತಿ, ಪರಂಪರೆ, ಜಾನಪದ ಕಲೆಗಳ ಕುರಿತು ಅರಿವು ಮೂಡಿಸುವಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ನಿರಂತರ ಶ್ರಮಿಸುತ್ತಿದೆ. ಜನಾಂಗ ಬಾಂಧವರ ಇಚ್ಛಾಶಕ್ತಿ ಇದ್ದಲ್ಲಿ ಅಕಾಡೆಮಿಯಿಂದ ಆಟ್-ಪಾಟ್-ಪಡಿಪು ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಕಳೆದ ಸಾಲಿನ ಜಮಾ ಖರ್ಚು, ಮಹಾಸಭೆ ವರದಿಗಳನ್ನು ಮಂಡಿಸಿ ಅಂಗೀಕರಿಸಲಾಯಿತು. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಧನ ವಿತರಿಸಲಾಯಿತು. ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ತೋರೇರ ಕಾರ್ಯಪ್ಪ, ಖಜಾಂಚಿ ಕಳ್ಳಿರ ನಾಣಯ್ಯ, ನಿರ್ದೇಶಕರಾದ ಮುಕ್ಕಾಟಿರ ಹ್ಯಾರಿ ಪೂಣಚ್ಚ, ಮಲ್ಲಂಡ ಮಹೇಶ, ಸುಳ್ಳೇರ ಸೋಮಯ್ಯ, ಚೋಕಿರ ಡಾಲ, ಈರಮಂಡ ಯು. ವಿಜಯ, ಕಾಞಂಗಡ ಸುದೇಶ್, ಮೇಚುರ ಮಮತಾ ಲೋಕೇಶ್, ಅಚ್ಚಪಂಡ ಧರ್ಮಾವತಿ ಕುಶಾಲಪ್ಪ, ದೇಯಿರ ಭೀಮಯ್ಯ ಕಾಶಿ, ಸುಳ್ಳೇರ ಯಶೋಧ ಮುತ್ತಣ್ಣ ಇತರರು ಹಾಜರಿದ್ದರು.

ಬಳಿಕ ಕೊಡವ ಓಲಗತ್ತಾಟ್, ಕೊಡವ ಹಾಡುಗಾರಿಕೆ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.