ಸೋಮವಾರಪೇಟೆ, ಅ. 16: ಬಟ್ಟೆ ಒಗೆಯುತ್ತಿದ್ದ ಸಂದರ್ಭ ಮಗಳ ಕಣ್ಣಿಗೆ ಕಂಡ ಮೀನನ್ನು ಹಿಡಿಯುವ ಧಾವಂತದಲ್ಲಿ ಎಚ್ಚರ ತಪ್ಪಿ ತಾಯಿ ಮತ್ತು ಮಗಳು ಕೆರೆಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಲ್ಲಾರೆ ಎಂಬ ಪ್ರದೇಶದ ಕಲ್ಲುಕೋರೆಯಲ್ಲಿ ನಡೆದಿದೆ.ಮೂಲತಃ ಹೊಳೆ ನರಸೀಪುರದ ನಿವಾಸಿಯಾಗಿದ್ದು ಕಳೆದ ಕೆಲ ಸಮಯದಿಂದ ಕೊಡ್ಲಿಪೇಟೆಯ ಕಲ್ಲಾರೆಯಲ್ಲಿ ನೆಲೆಸಿರುವ ಆನಂದ ಎಂಬವರ ಪತ್ನಿ ಶೋಭಾ (29) ಮತ್ತು ಕೊಡ್ಲಿಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ಓದುತ್ತಿರುವ ಮಗಳು ವಿದ್ಯಾಶ್ರೀ 11 ಎಂಬವರುಗಳೇ ಕೆರೆಯಲ್ಲಿ ಮುಳುಗಿ ದುರಂತ ಅಂತ್ಯ ಕಂಡವರಾಗಿದ್ದು, ಇಂದು ಪೂರ್ವಾಹ್ನ 10.30 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಇಂದು ಬೆಳಿಗ್ಗೆ ತನ್ನಿಬ್ಬರು ಮಕ್ಕಳೊಂದಿಗೆ ಶೋಭಾ ಅವರು ಬಟ್ಟೆ ಒಗೆಯಲೆಂದು ಕಲ್ಲಾರೆಯ ಕಲ್ಲುಕೋರೆ ಕೆರೆಗೆ ತೆರಳಿದ್ದು, ತಾಯಿ ಶೋಭಾ ಅವರು ಬಟ್ಟೆ ಒಗೆಯುತ್ತಿದ್ದ ಸಂದರ್ಭ ಮಗಳು ವಿದ್ಯಾಶ್ರೀ ಪಕ್ಕದಲ್ಲಿಯೇ ಇದ್ದಳು ಎನ್ನಲಾಗಿದೆ. ಈ ಹೊತ್ತಿನಲ್ಲಿ ಕೆರೆಯ ಒಳಗೆ ಮೀನೊಂದು ಕಾಣಿಸಿದ್ದು, ಇದನ್ನು ಹಿಡಿಯಲೆಂದುವಿದ್ಯಾಶ್ರೀ ತನ್ನ ವೇಲನ್ನು ನೀರಿನ ಒಳಗೆ ಹಾಕಿದ್ದಾಳೆ.
ಕಲ್ಲಿಗೆ ಸಿಲುಕಿಕೊಂಡ ವೇಲನ್ನು ಹಿಂದಕ್ಕೆ ಎಳೆಯುವ ಧಾವಂತದಲ್ಲಿ ವಿದ್ಯಾಶ್ರೀ ಆಯತಪ್ಪಿ ಕೆರೆಯೊಳಗೆ ಬಿದ್ದಿದ್ದಾಳೆ. ಇದನ್ನು ಕಂಡ ತಾಯಿ ಶೋಭಾ ಅವರು ತಕ್ಷಣ ವಿಚಲಿತರಾಗಿ ಮಗಳ ರಕ್ಷಣೆಗೆ ಮುಂದಾಗಿದ್ದು, ತಾನೂ ಸಹ ಕೆರೆಗೆ ಇಳಿದಿದ್ದಾಳೆ. ಕೆರೆಯ ದಡದಲ್ಲಿದ್ದ ಮಗ ಕುಶಾಲ್ನ ಕಣ್ಣೆದುರೇ ಈ ಘಟನೆ ಸಂಭವಿಸಿದ್ದು, ಈತ ಮತ್ತೊಂದು ವೇಲನ್ನು ತನ್ನ ತಾಯಿಯೆಡೆಗೆ ಹಾಕಲು ಕೆರೆಗೆ ಇಳಿಯುವ ಸನ್ನಾಹದಲ್ಲಿದ್ದುದನ್ನು ಗಮನಿಸಿದ ತಾಯಿ ಶೋಭಾ, ‘ನೀನು ಇಲ್ಲಿಂದ ಹೋಗು’ ಎಂದು ಹೇಳಿ ಕೆರೆಯ ನೀರೊಳಗೆ ಕಣ್ಮರೆಯಾಗಿದ್ದಾಳೆ.
ತಕ್ಷಣ ಮಗ ಕುಶಾಲ್ ಜನವಸತಿ ಪ್ರದೇಶಕ್ಕೆ ಬಂದು ತನ್ನ ತಾಯಿ ಮತ್ತು ಸಹೋದರಿ ಕೆರೆಯೊಳಗೆ ಮುಳುಗಿದ ವಿಷಯವನ್ನು ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಸ್ಥಳೀಯರು ಧಾವಿಸಿದರಾದರೂ ಅಷ್ಟರೊಳಗೆ ಎಲ್ಲವೂ ಮುಗಿದ ಅಧ್ಯಾಯವಾಗಿತ್ತು. ಒಂದು ವೇಳೆ ಮಗ ಕುಶಾಲ್ ತನ್ನ ತಾಯಿಯ ಮಾತು ಕೇಳದೇ ಕೆರೆಯೊಳಗೆ ಇಳಿದಿದ್ದರೆ ಮತ್ತೊಂದು ದುರಂತ ಸಂಭವಿಸುತ್ತಿತ್ತು.
ಈ ಬಗ್ಗೆ ಶನಿವಾರಸಂತೆ ಪೊಲೀಸರಿಗೆ ವಿಷಯ ಮುಟ್ಟಿಸಿದ ಮೇರೆ ಸ್ಥಳಕ್ಕೆ ಕೊಡ್ಲಿಪೇಟೆಯ ಹೊರ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿ, ಮೃತ ದೇಹಗಳ ಹುಡುಕಾಟಕ್ಕಾಗಿ ಕುಶಾಲನಗರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. 10.30ಕ್ಕೆ ಘಟನೆ ನಡೆದಿದ್ದರೂ ಅಪರಾಹ್ನ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ ಈರ್ವರ ಮೃತದೇಹವನ್ನೂ ಹೊರತೆಗೆದು ಸಂಬಂಧಿಕರಿಗೆ ಒಪ್ಪಿಸಿದರು.
ತಾಯಿ ಮತ್ತು ಮಗಳ ಮೃತದೇಹಗಳೆರಡೂ ಒಂದೇ ಸ್ಥಳದಲ್ಲಿ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿತ್ತು. ಬಹಳ ಪ್ರಯಾಸಪಟ್ಟು ದೇಹಗಳನ್ನು ಹೊರತೆಗೆಯಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೂಲತಃ ಹೊಳೆನರಸೀಪುರ ದವರಾಗಿರುವ ಆನಂದ ಅವರು ಕಳೆದ ಕೆಲ ತಿಂಗಳ ಹಿಂದಷ್ಟೇ ಕೊಡ್ಲಿಪೇಟೆಗೆ ಆಗಮಿಸಿದ್ದು, ಅಲ್ಲಿನ ಅಂಗಡಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಪತ್ನಿ ಮತ್ತು ಮಗಳನ್ನು ಕಳೆದುಕೊಂಡಿರುವ ಇವರ ಆಕ್ರಂದನ ಮುಗಿಲುಮುಟ್ಟಿದ್ದು, ಎಳೆಯ ವಯಸ್ಸಿನ ಮಗ ಕುಶಾಲ್ನ ಕಣ್ಣೆದುರೇ ದುರ್ಘಟನೆ ಸಂಭವಿಸಿರುವದರಿಂದ ಕುಶಾಲ್ ಸಹ ಭಯಾತಂಕದಲ್ಲಿಯೇ ಇದ್ದಾನೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. - ವಿಜಯ್