ವೀರಾಜಪೇಟೆ, ಆ. 6: ಕೊಡವರು ಇತರರೊಂದಿಗೆ ಹೊಂದಿ ಕೊಂಡು ಬದುಕನ್ನು ರೂಢಿಸಿ ಕೊಂಡವರು. ಸೇನಾ ವೃತ್ತಿಯನ್ನು ಕರಗತ ಮಾಡಿಕೊಂಡವರಾಗಿದ್ದಾರೆ. ಇಲ್ಲಿನ ಮಹಿಳೆಯರ ವಿಶಿಷ್ಟತೆ ಸೇರಿದಂತೆ ಅನೇಕ ವಿಚಾರದಲ್ಲಿ ಕೊಡವರನ್ನು ಪ್ರಶಂಸಿಸಿರುವದು ಸರ್ಕಾರವೇ ಕೊಡವರಿಗೆ ನೀಡಿದ ಪ್ರಶಸ್ತಿಯಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಕುವೆಂಪು ಇನ್‍ಸ್ಟಿಟ್ಯೂಟ್ ಆಫ್ ಕನ್ನಡ ಸ್ಟಡೀಸ್‍ನ ಉಪನ್ಯಾಸಕ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡವ ಸಮಾಜ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಡವ ಸಮಾಜದ ಜಿಮ್ಮಿ ಕಲಾವೇದಿಕೆಯಲ್ಲಿ ಅಯೋಜಿಸಿದ್ದ ಕೊಡವ ಸಾಹಿತ್ಯ ಪಡಿಪು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ರಾಜ್ಯವಾಗಬೇಕು ಎಂಬ ನಿಲುವಿನ ಬಗ್ಗೆ ಓದಿದ್ದೇನೆ. ನಮ್ಮ ಉತ್ತರ ಕರ್ನಾಟಕದಲ್ಲಿಯೂ ಸಹ ಪ್ರತ್ಯೇಕತೆ ಬಗ್ಗೆ ಕೂಗು ಇದೆ, ತುಳು ನಾಡಿನಲ್ಲಿಯೂ ಇದೇ ಕೂಗು ಕೇಳಿ ಬರುತ್ತಿದೆ. ಸ್ಥಳೀಯ ಅಭಿವೃದ್ಧಿ ಭಾಷೆ ಬೆಳವಣಿಗೆಗಾಗಿ, ಯಾವದೇ ಜಿಲ್ಲೆಯಾದರೂ ತನ್ನ ತನವನ್ನು ಉಳಿಸಿಕೊಳ್ಳಲು ಗುಡುಗುವದು ಅನಿವಾರ್ಯ. ಆದರೆ ಪ್ರತ್ಯೇಕ ರಾಜ್ಯವೇ ಬೇಕು ಎಂಬ ನಿಲವು ಸರಿಯಲ್ಲ. ಕರ್ನಾಟಕ ರಾಜ್ಯ ಬಹು ಸಂಸ್ಕøತಿಗಳು ಸೇರಿ ಗುರುತಿಸಿಕೊಂಡ ರಾಜ್ಯವಾಗಿದೆ ಎಂದರು.
ಕೊಡಗಿನ 42 ಕಾದಂಬರಿಯಲ್ಲಿ 32 ಕಾದಂಬರಿಯನ್ನು ಮಹಿಳೆಯರೇ ಬರೆದಿದ್ದಾರೆ. ಅದರಲ್ಲಿ ‘ಪಟ್ಟೋಳೆ ಪಳಮೆ’ ಎಂಬ ಕೃತಿ ಕೊಡವ ಸಾಹಿತ್ಯಕ್ಕೆ ಸಿಕ್ಕಿದ ತಿರುವು. ಅನೇಕ ಕೊಡವ ನಾಟಕ, ಕೊಡವ ಕೃತಿ ರಚಿತವಾಗಿದ್ದು, ಹರದಾಸ ಅಪ್ಪಚ್ಚ ಕವಿ ಉತ್ತಮ ಸಾಹಿತ್ಯವನ್ನು ನೀಡಿದ್ದಾರೆ. ಐ.ಮಾ. ಮುತ್ತಣ್ಣ ಕೊಡವ ಸಾಹಿತ್ಯ ಮಾಲೆಯ ಸರದಾರನಾಗಿ ಕನ್ನಡ, ಕೊಡವ ಹಾಗೂ ಆಂಗ್ಲ ಭಾಷೆಯಲ್ಲಿ ಕೃತಿ ರಚಿಸಿದ್ದಾರೆ ಎಂದರು.
ಬಹುಭಾಷ ಸಾಹಿತಿ ನಾಗೇಶ್ ಕಾಲೂರು ಅನುಕ್ರಮವಾಗಿ ಕೊಡವ ಸಾಹಿತ್ಯ ಅಕಾಡೆಮಿ ಹೊರ ತಂದಿರುವ ಕನ್ನಡ ಹಾಗೂ ಕೊಡವ ಪುಸ್ತಕಗಳ ವಿಮರ್ಶೆಯನ್ನು ಮಾಡಿದರು. ಇದೇ ಸಂದರ್ಭ ಐ.ಮಾ. ಮುತ್ತಣ್ಣನವರ ದಕ್ಷಿಣ ‘ಭಾರತ್‍ರ ಓರ್ ಚೆರಿಯ ಆದರ್ಶ ರಾಜ್ಯ’ ಎಂಬ ಅಂಗ್ಲ ಭಾಷೆಯಿಂದ, ಮೊಣ್ಣಂಡ ಶೋಭಾ ಸುಬ್ಬಯ್ಯ ಅನುವಾದಿಸಿದ ಕೃತಿಯನ್ನು ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿದೇರ್ಶಕ ಎನ್. ಮಲ್ಲಿಕಾರ್ಜುನ ಸ್ವಾಮಿ ಬಿಡುಗಡೆಗೊಳಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಅಕಾಡೆಮಿ ಆರಂಭದಿಂದಲೇ ಪುಸ್ತಕ ವಿಮರ್ಶೆ ಕಾರ್ಯಕ್ರಮ ಅಯೋಜಿಸಬೇಕೆಂಬ ಅಭಿಲಾಷೆ ಇಂದು ನೆರವೇರಿದೆ. ಅಕಾಡಮಿಯಿಂದ ಪ್ರಥಮ ಯತ್ನ ಇದಾಗಿದ್ದು, ಸಾರ್ವಜನಿಕರು ಪುಸ್ತಕಗಳನ್ನು ಕೊಂಡು ಓದಿದಾಗ ಲೇಖಕರ ಪರಿಶ್ರಮಕ್ಕೆ ಸಾರ್ಥಕತೆ ಬರುತ್ತದೆ. ಎಲ್ಲಾ ಜನಾಂಗದವರಿಗೂ ಕೊಡವ ಭಾಷೆ ಕಲಿಯುವದರೊಂದಿಗೆ ಇಲ್ಲಿನ ಅಚಾರ ವಿಚಾರ ಉಳಿಸಿ ಬೆಳೆಸುವಂತೆ ತಮ್ಮಯ್ಯ ಕರೆನೀಡಿದರು.
ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ, ಚುಟುಕು ಸಾಹಿತಿ ದುಂಡಿರಾಜ್, ಕೊಡವ ಸಮಾಜದ ತ್ರಿವೇಣಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚೆರುಮಂದಂಡ ನಾಣಯ್ಯ, ರಂಗಾಯಣ ಮೈಸೂರಿನ ನಿವೃತ್ತ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಕಾಡೆಮಿ ಸದಸ್ಯ ಹಾಗೂ ಶಿಬಿರದ ಸಂಚಾಲಕ ಮಾದೇಟಿರ ಬೆಳ್ಯಪ್ಪ ಸ್ವಾಗತಿಸಿ- ವಂದಿಸಿದರು. ನಂತರ ಸಾಹಿತಿಗಳ ಜೊತೆ ಶಿಬಿರಾರ್ಥಿಗಳ ಸಾಹಿತ್ಯ ಸಂವಾದ, ಕವಿಗೋಷ್ಠಿ, ಕೊಡವ ಸಾಹಿತ್ಯ ಕಲಿಕಾ ಶಿಬಿರಗಳು ನಡೆದವು.