ಮಡಿಕೇರಿ, ಡಿ. 11: ಕೊಡವ ಬೈರೇಸ್ ಹಾಗೂ ಜಮ್ಮಾಹಕ್ಕಿನನ್ವಯ ಕೊಡವರು ಕೋವಿ ವಿನಾಯಿತಿ ಪತ್ರಹೊಂದಲು ಸಲ್ಲಿಸಿದಂತ ಹಲವು ಅರ್ಜಿಗಳು ವಿಳಂಬವಾಗುತ್ತಿರುವ ಬಗ್ಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗು ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರನ್ನು ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಬೇಟಿ ಮಾಡಿ ಕೋವಿ ವಿನಾಯಿತಿ ಪತ್ರಕ್ಕಾಗಿ ಸಲ್ಲಿಸಿದ ಅರ್ಜಿಗಳು ವಿಲೇವಾರಿ ತಡವಾಗುತ್ತಿದ್ದು, ಅರ್ಜಿದಾರರು ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವರಿಕೆ ಮಾಡಲಾಯಿತು. ಈ ಹಿಂದೆ ಹಲವು ಕಾರ್ಯಕ್ರಮ ಗಳಿದ್ದುದರಿಂದ ತಡವಾಗಿದೆ, ಈಗಾಗಲೇ ಅರ್ಜಿ ಗಳನ್ನೆಲ್ಲಾ ಪರಿಶೀಲಿಸಿ ಜಿಲ್ಲಾಧಿಕಾರಿಗಳ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಸತೀಶ್‍ಕುಮಾರ್ ತಿಳಿಸಿದರು. ಹಿಂದಿನ ಜಿಲ್ಲಾಧಿಕಾರಿಗಳು ಅರ್ಜಿಗಳನ್ನೆಲ್ಲ ತಡೆಹಿಡಿದಿರುವ ಬಗ್ಗೆ ಮಾಹಿತಿ ಹಕ್ಕಿನಡಿ ಅರ್ಜಿಗಳ ಮಾಹಿತಿ ಪಡೆದು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.