ಶ್ರೀಮಂಗಲ, ಡಿ. 8: ಕೊಡವ ಸಮಾಜ ಇಂದು ಕಲ್ಯಾಣ ಮಂಟಪಕ್ಕೆ ಸೀಮಿತವಾಗುತ್ತಿದೆ ಎನ್ನುವ ಆರೋಪಗಳಿವೆ. ಕೊಡವ ಸಮಾಜಗಳು ಕೊಡವರ ಮೂಲ ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸುವ ಕೇಂದ್ರವಾಗಬೇಕು. ಜನಾಂಗದಲ್ಲಿ ಆರ್ಥಿಕ ಅಭಿವೃದ್ಧಿ, ಉನ್ನತ ವಿದ್ಯಾಭ್ಯಾ ಸದತ್ತ ದೃಷ್ಟಿ ಹರಿಸು ವಂತೆಯೇ ಜನಾಂಗದ ತಾಯಿಬೇರಾದ ಭಾಷೆ, ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಕೊಳ್ಳಬೇಕು. ಈ ಬಗ್ಗೆ ಅಭಿಮಾನ ಪೂರ್ವಕವಾಗಿ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು ಎಂದು ದೇಶತಕ್ಕ ಹಾಗೂ ಅಖಿಲ ಕೊಡವ ಸಮಾಜದ ಗೌರವ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಪ್ರತಿಪಾದಿಸಿದರು.

ಅವರು, ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ರೂ. 70 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ,

(ಮೊದಲ ಪುಟದಿಂದ) ಕೊಡವ ಸಮಾಜಗಳು ಕೊಡವ ಸಂಸ್ಕøತಿ ಬಿಂಬಿಸುವ ವೇದಿಕೆಯಾಗಬೇಕೇ ಹೊರತು ಕಲ್ಯಾಣ ಮಂಟಪ ಆಗಬಾರದು. ಕೊಡವ ಸಮಾಜದ ನಿರ್ವಹಣೆಗಾಗಿ ಖರ್ಚು ವೆಚ್ಚ ಸರಿದೂಗಿಸಲು ಅನಿವಾರ್ಯವಾಗಿ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಬೇಕಾಗುತ್ತದೆ. ಕೊಡವ ಸಮಾಜ ಒಕ್ಕೂಟ 31 ಕೊಡವ ಸಮಾಜಗಳನ್ನು ಒಳಗೊಂಡಿರುವ ಸಂಸ್ಥೆಯಾಗಿದೆ ಎಂದರು.

ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೋ. ಇಟ್ಟೀರ ಬಿದ್ದಪ್ಪ ಅವರು ಮಾತನಾಡಿ, ಕೊಡವರ ಹಕ್ಕು ಬಾಧÀ್ಯತೆ, ಅಸ್ತಿತ್ವಕ್ಕೆ ದಕ್ಕೆ ಬಂದಾಗ ಐನ್ ಮನೆಯ ಕನ್ನಿಕಂಬದಂತೆ ಹೆಗಲು ಕೊಡುವ ಕೇಂದ್ರವಾಗಿ ಕೊಡವ ಸಮಾಜಗಳು ಕಾರ್ಯನಿರ್ವಹಿಸಬೇಕು ಎಂದರು.

ಶಾಸಕ ಕೊಂಬಾರನ ಜಿ. ಬೋಪಯ್ಯ ಮಾತನಾಡಿ, ಬಹಳಷ್ಟು ಕೊಡವ ಸಮಾಜಗಳಲ್ಲಿ ರಿಕ್ರೀಯೇಷನ್ ಕ್ಲಬ್ ಸ್ಥಾಪಿಸಿ ದಿನಪೂರ್ತಿ ಜೂಜಾಟ ಹಾಗೂ ಮದ್ಯ ಸೇವನೆಗೆ ಒತ್ತು ನೀಡುತ್ತಿರುವದು ಸರಿಯಲ್ಲ. ಇದರಿಂದ ಜನಾಂಗದ ಯುವಕರ ಸಮಯ, ಹಣ ಹಾಗೂ ಆರೋಗ್ಯ ಹಾಳಾಗುವದ ರೊಂದಿಗೆ ತೋಟ ಗದ್ದೆಗಳು ಸಹನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಇದು ಕೊಡವ ಜನಾಂಗದ ವಿನಾಶಕ್ಕೆ ಕಾರಣವಾಗಿದೆ. ಇದನ್ನು ತಡೆಹಿಡಿಯುವ ಕೆಲಸವನ್ನು ಕೊಡವ ಸಮಾಜಗಳು ಮಾಡಬೇಕು. ಕೊಡವರು ಸರಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೆ ಉಳಿದಿದ್ದಾರೆ. ಮದುವೆಗೆ ಮಾತ್ರ ಕೊಡವ ಸಮಾಜಗಳು ಸೀಮಿತವಾಗದೆ ಜನಾಂಗದ ಹಿತಾಸಕ್ತಿಗೆ ಹಾಗೂ ಅಭಿವೃದ್ದಿಗೆ ಒತ್ತು ನೀಡುವ ಹಾಗೂ ಸಾಂಸ್ಕøತಿಕ ಚಟುವಟಿಕೆಯ ಕೇಂದ್ರವಾಗಬೇಕು. ಚಾರಿತ್ರಿಕ ಹಿನ್ನೆಲೆಯಿರುವ ನ್ಯಾಯಪೀಠದ ಬಗ್ಗೆ ಯುವ ಜನಾಂಗಕ್ಕೆ ಮಾಹಿತಿ ನೀಡಬೇಕು. ಈ ಭಾಗದಲ್ಲಿ ಸ್ಥಾಪನೆಯಾಗಿರುವ ಕೊಡವ ಸಾಂಸ್ಕøತಿಕ ಕೇಂದ್ರದ ಈ ಕಟ್ಟಡ ಜನಾಂಗಕ್ಕೆ ದುರುಪಯೋಗವಾಗಲಿ ಎಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಮಾತನಾಡಿ, ನೂತನ ಈ ಕೇಂದ್ರದಲ್ಲಿ ಸ್ಥಾಪನೆ ಯಾಗಿರುವ ನ್ಯಾಯಪೀಠ ಪೌರಾಣಿಕ ಹಿನ್ನೆಲೆಯುಳ್ಳದಾಗಿದ್ದು, ಕೊಡವರ ನಡುವಿನ ಭಿನ್ನಾಬಿಪ್ರಾಯ, ವಿವಾದ, ಮನಸ್ತಾಪಗಳನ್ನು ಈ ಪೀಠದ ಮುಂದೆ ಬಗೆಹರಿಸಿಕೊಳ್ಳಬೇಕು. ಈ ಮೂಲಕ ತಮ್ಮಲ್ಲಿ ಒಗ್ಗಟ್ಟು ಬೆಳೆಸಿಕೊಳ್ಳಬೇಕು. ಕೊಡವರಿಗೆ ಗೌರವ ತರುವಂತಹ ತಮ್ಮ ಸಂಸ್ಕøತಿ, ಕಲೆ, ಭಾಷೆ, ಪರಂಪರೆ ಹಾಗೂ ಕೃಷಿ ಪದ್ಧತಿಗೆ ವಿಶೇಷ ಒತ್ತು ನೀಡಿ ಕಾಪಾಡಿಕೊಂಡು ಬಲಪಡಿಸಬೇಕು ಎಂದು ಹೇಳಿದರು.

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ಕೊಡವ ಜನಾಂಗದಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಾಂಪ್ರದಾಯಿಕ ಕೃಷಿ ಹಾಗೂ ತೋಟಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ತೋಟ, ಗದ್ದೆ, ಮನೆ ಕೆಲಸಗಳನ್ನು ತಾವು ಸ್ವತ: ಮಾಡದಿದ್ದರೂ ಅದನ್ನು ನಿರ್ವಹಿಸುವ ಬಗ್ಗೆ ತಿಳಿದುಕೊಂಡಿರ ಬೇಕು. ಇದರಿಂದ ಇಂದು ಎದುರಾಗಿರುವ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರು, 1980ರಲ್ಲಿ ಸಮಾಜ ಸ್ಥಾಪನೆಯಾದ ನಂತರ ಹಳೆಯ ಕಟ್ಟಡ ಹಾಗೂ ಹೊಸ ಕಟ್ಟಡ ನಿರ್ಮಾಣದ ಹಾದಿ ಬಗ್ಗೆ ವಿವರಿಸಿದರು. ಪ್ರಸ್ತುತ ನೂತನ ಕಟ್ಟಡಕ್ಕೆ ಮಚ್ಚಮಾಡ ಮುತ್ತಣ್ಣ ಅವರು 90 ಸೆಂಟು ಉದಾರ ಜಾಗ ನೀಡಿದ್ದಾರೆ. ಮಾಯಣಮಾಡ ಪೂಣಚ್ಚ 15.20 ಲಕ್ಷ, ಮಚ್ಚಮಾಡ ಉತ್ತಯ್ಯ 3 ಲಕ್ಷ ಸೇರಿದಂತೆ ಹಲವರು ನೀಡಿದ ದೇಣಿಗೆ ಹಣದಲ್ಲಿ, ಸಾಂಸ್ಕøತಿಕ ಕೇಂದ್ರವನ್ನು 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಕೇಂದ್ರಕ್ಕೆ ಇನ್ನು 6 ಲಕ್ಷ ಸಾಲವಿದ್ದು, ಬಾಕಿ ಉಳಿದ ಕೆಲಸಕ್ಕೆ 10 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಕೇಂದ್ರಕ್ಕೆ ಜಾಗ ದಾನ ನೀಡಿದ ಮಚ್ಚಮಾಡ ಮುತ್ತಣ್ಣ, ದಾನಿಗಳಾದ ಮಾಯಣಮಾಡ ಪೂಣಚ್ಚ, ಶ್ರೀಮತಿ ಪೂಣಚ್ಚ, ಮಚ್ಚಮಾಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ. ಮಾಜಿ ಸದಸ್ಯ ಕಟ್ಟೇರ ಜಾಜಿ ಉತ್ತಪ್ಪ ಅವರು 25 ಕೆ.ವಿ.ಯ ಜನರೇಟರ್ ಅನ್ನು ಕೇಂದ್ರಕ್ಕೆ ಉಚಿತವಾಗಿ ನೀಡುವದಾಗಿ ಈ ಸಂದರ್ಭ ಘೋಷಿಸಿದರು. ಕೊಡವ ಸಮಾಜ ಹಾಗೂ ಸರಕಾರಿ ಪ್ರೌಢಶಾಲೆಗೆ ಜಾಗ ದಾನ ಹಾಗೂ ಆರ್ಥಿಕ ನೆರವು ನೀಡಿದ ಮಾಯಣಮಾಡ ಪೂಣಚ್ಚ ಅವರ ಹೆಸರನ್ನು ಟಿ.ಶೆಟ್ಟಿಗೇರಿ ವೃತ್ತಕ್ಕೆ ನಾಮಕರಣ ಮಾಡುವಂತೆ ಸಭೆಯ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಲಾಗಿದ್ದು, ಈ ಬಗ್ಗೆ ಗ್ರಾ.ಪಂ.ಗೆ ಮನವಿ ಸಲ್ಲಿಸಲು ತೀರ್ಮಾನಿಸ ಲಾಯಿತು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್ ಹಾಜರಿದ್ದರು. ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಸಮಾಜದ ಉಪಾಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಅವರು ಸ್ವಾಗತಿಸಿ, ನಿರ್ದೇಶಕ ಚೊಟ್ಟೆಯಂಡಮಾಡ ವಿಶು ವಂದಿಸಿ, ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿದರು.

ಈ ಸಂಧರ್ಭ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್, ನಿರ್ದೇಶಕರಾದ ತಡಿಯಂಗಡ ಕರುಂಬಯ್ಯ, ಕಟ್ಟೇರ ಈಶ್ವರ, ತಡಿಯಂಗಡ ರಮೇಶ್, ಆಂಡಮಾಡ ಸತೀಶ್, ನಾಡ್ ತಕ್ಕರಾದ ಕೈಬುಲಿರ ಹರೀಶ್, ಸಲಹೆಗಾರ ಮಚ್ಚಮಾಡ ಸೋಮಯ್ಯ, ತೀತಿರ ಧರ್ಮಜ ಉತ್ತಪ್ಪ ಮತ್ತಿತರರು ಹಾಜರಿದ್ದರು.

ಹೊಸ ಕಟ್ಟಡ ಉದ್ಘಾಟನೆ.

ಆರಂಭದಲ್ಲಿ ಕೊಡವ ಸಮಾಜದ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಕೊಡವ ಸಂಪ್ರದಾಯದಂತೆ ಹೊಸ ಮನೆಗೆ ಸೇರುವ ಪದ್ಧತಿಯಂತೆ ನಡೆಸಲಾಯಿತು. ಈ ಸಂದರ್ಭ ಪದ್ಧತಿಯಂತೆ ಕೋವಿಯಲ್ಲಿ ಗುಂಡು ಹಾರಿಸಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ತೊಟ್ಟಿಲಿನಲ್ಲಿ ಮಗು ಸಹಿತ, ಕೋವಿ, ಒಡಿಕತ್ತಿ, ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್‍ನೊಂದಿಗೆ ಆಗಮಿಸಿ ಹೊಸ ಕಟ್ಟಡಕ್ಕೆ ಸೇರಿದರು. ಕಟ್ಟಡವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇಶತಕ್ಕ ಮಾತಂಡ ಮೊಣ್ಣಪ್ಪ ಪೀಚೆಕತ್ತಿಯಲ್ಲಿ ತೆಂಗಿನಕಾಯಿ ಹೊಡೆದು ಉದ್ಘಾಟಿಸಿ ದರು. ಸಭಾ ಕಾರ್ಯಕ್ರಮವನ್ನು ದಾನಿಗಳಾದ ಮಚ್ಚಮಾಡ ಮುತ್ತಣ್ಣ, ಮಾಯಣಮಾಡ ಪೂಣಚ್ಚ, ಮಚ್ಚಮಾಡ ಉತ್ತಯ್ಯ ಜಂಟಿಯಾಗಿ ಉದ್ಘಾಟಿಸಿದರು.