ಶ್ರೀಮಂಗಲ, ಜ. 3 : ಕೊಡವ ಸಂಸ್ಕøತಿ ನಶಿಸಿ ಹೋಗುವ ಸಂಸ್ಕøತಿ ಅಲ್ಲ. ಅದು ಪ್ರವರ್ಧಮಾನಕ್ಕೆ ಬರುತ್ತಿರುವ ಸಂಸ್ಕøತಿ. ಕೊಡವ ಸಂಸ್ಕøತಿ ಹಾಗೂ ಹೋರಾಟದಲ್ಲಿ ಯುವಕರು ಹಾಗೂ ಮಕ್ಕಳು ತೊಡಗಿಸಿಕೊಂಡಿರುವದನ್ನು ಗಮನಿಸಿದರೆ, ಭವಿಷ್ಯದಲ್ಲಿ ಕೊಡವ ಉತ್ತಮ ಬೆಳವಣಿಗೆ ಕಾಣಲಿದೆ. ಕೊಡವ ಸಂತತಿ ಉಳಿದರೆ ದೇಶಕ್ಕೆ ಲಾಭ-ಕೊಡವರ ಕೃಷಿ ಉಳಿದರೆ ರಾಜ್ಯಕ್ಕೆ ಸಮೃದ್ದಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೊ. ಮಧುಸೂದನ್ ಅಭಿಪ್ರಾಯಪಟ್ಟರು.ಮೂರ್ನಾಡ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ಯುಕೊ ಸಂಘಟನೆಯ ಆಶ್ರಯದಲ್ಲಿ ನಡೆದ ಕೊಡವ ಮಂದ್ ನಮ್ಮೆ 2017 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತಕ್ಕೆ ಯಾರು ಬೇಕಾದರೂ, ಎಲ್ಲಿ ಬೇಕಾದರೂ ಸಿಗುತ್ತಾರೆ. ಆದರೆ ದೇಶದ ರಕ್ಷಣೆಗೆ, ಶತ್ರುಗಳೊಂದಿಗೆ ಹೋರಾಟ ಮಾಡಿ ದೇಶಕ್ಕಾಗಿ ದೈರ್ಯದಿಂದ ಪ್ರಾಣ ನೀಡುವ ಯೋಧ ಸಂತತಿಯ ಕೊಡವರು ಸಿಗುವದಿಲ್ಲ. ಆದ್ದರಿಂದ ಕೊಡವ ಸಂತತಿ ನಾಶವಾಗದೆ ಸಮೃದ್ದವಾಗಬೇಕು. ಇದರಿಂದ ದೇಶಕ್ಕೆ ಲಾಭವಿದೆ. ಹಾಗೆಯೇ ಕೊಡವರು ತಮ್ಮ ಸಂಸ್ಕøತಿಯೊಂದಿಗೆ ಕೃಷಿ ಸಂಸ್ಕøತಿಯನ್ನು ಮೈಗೂಡಿಸಿ ಕೊಂಡಿದ್ದು, ಕಾಫಿ ತೋಟ ಹಾಗೂ ಭತ್ತದ ಗದ್ದೆಗಳತ್ತ ವಿಶೇಷ ಗಮನ ಹರಿಸಬೇಕು. ಕೊಡವರು ತಮ್ಮ ಕೃಷಿಯಿಂದ ವಿಮುಖವಾದರೆ ಸಂಸ್ಕøತಿ ನಾಶವಾಗುತ್ತದೆ. ಹಾಗೆಯೇ ಕೊಡಗು ಜಿಲ್ಲೆ ಪರಿಸರ ಬರಡಾಗುತ್ತದೆ. ಇದರಿಂದ ಮೈಸೂರು-ಬೆಂಗಳೂರುಗಳಿಗೆ ನೀರು ನೀಡುವ ಕಾವೇರಿ ಬರಡಾಗಿ ರಾಜ್ಯದ ಜನತೆಗೂ ನಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡವ ಗಂಡು ಹಾಗೂ ಹೆಣ್ಣು ಮಕ್ಕಳು ಅಂತರ್ಜಾತಿ ಮದುವೆಯಾಗು ವದಿಲ್ಲವೆಂದು ಸಂಕಲ್ಪ ತೊಡಬೇಕು. ಕೊಡವ ಜನಾಂಗದ ಯೋಧ ಪರಂಪರೆಯ ವಂಶವಾಹಿನಿ ಅಂತರ್ಜಾತಿ ವಿವಾಹದ ಮೂಲಕ ಮಿಶ್ರವಾಗುತ್ತದೆ. ಇಂದು ನಾಯಿ, ಕುದುರೆ ಖರೀದಿಸುವಾಗ ಅದರ ತಂದೆ ತಾಯಿ ಹಾಗೂ ಅದರ ಮೂಲವನ್ನು ಹುಡುಕುತ್ತೇವೆ. ಹಾಗೂ ತೋಟಕ್ಕೆ ಕಾಫಿ ನರ್ಸರಿ ಮಾಡಲು ಕಾಫಿ ಬೀಜ ಖರೀದಿಸುವಾಗಲೂ ಗಿಡದ ಗುಣಮಟ್ಟದ ಬಗ್ಗೆ ಮೂಲ ಹುಡುಕುತ್ತೇವೆ. ಹಾಗಿರುವಾಗ ಕೊಡವರು ಮದುವೆಯಾಗುವಾಗ ತಮ್ಮ ಜಾತಿಯಲ್ಲದೆ, ಬೇರೆ ಜಾತಿಯ ಬಗ್ಗೆ ಯಾವದೇ ಪೂರ್ವಾಪರ ಚಿಂತಿಸದೆ ಅಂತರ್ಜಾತಿ ವಿವಾಹ ವಾಗುವದು ಯೋಧ ಪರಂಪರೆಯ ಕೊಡವ ಜನಾಂಗದ ಮೂಲ ಕಲುಷಿತವಾಗುವಂತೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಮಾತನಾಡಿ, ಮಂದ್‍ಗಳು ಕೊಡವ ಸಂಸ್ಕøತಿಯ ತಾಯಿ ಬೇರು ಆಗಿದೆ. ಮಂದ್‍ಗಳಿಗೆ ಕಾಯಕಲ್ಪ ನೀಡಿದಾಗ ಕೊಡವ ಸಂಸ್ಕøತಿ ಉಳಿಯಲು ಸಾಧ್ಯ. ಮಂದ್ ನಮ್ಮೆ ಪೈಪೋಟಿಯಿಂದ ಕಿರಿಯರಿಗೆ ಕಲಾ ಸಂಸ್ಕøತಿಗಳು ಅದರ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ, ಮಕ್ಕಳಿಗೆ ಒಳ್ಳೆಯ ದಾರಿ ತೋರಿಸುವ ಮೂಲಕ ಅವರ ಭವಿಷ್ಯಕ್ಕೆ ಕೊಡಗನ್ನು ಕೊಡಗಾಗಿಯೇ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಆಗಿದೆ. ಕೊಡವರಾಗಿ ಹುಟ್ಟಿ, ಕೊಡವರಾಗಿಯೇ ಜೀವನ ಸಾಗಿಸಲು ಕೊಡಗನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು, ಮೂರು ವರ್ಷದ ಹಿಂದೆ ಕೊಡವರ ಸಾಂಸ್ಕøತಿಕ ಹಾಗೂ ಧಾರ್ಮಿಕ ಕೇಂದ್ರವಾದ ಮಂದ್‍ಗಳ ಪುನಶ್ಚೇತನಕ್ಕೆ ನಿರ್ಧರಿಸಿ ಮಂದ್ ನಮ್ಮೆ ಹಮ್ಮಿಕೊಳ್ಳಲಾಯಿತು. ಯುಕೊ ಸಂಘಟನೆ ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ 3 ವರ್ಷದ ಹಿಂದೆ ಜಿಲ್ಲೆಯಲ್ಲಿ 10 ಮಂದ್ ಮಾತ್ರ ಅಸ್ತಿತ್ವದಲ್ಲಿತ್ತು. ಮಂದ್ ನಮ್ಮೆ ಕಾರ್ಯಕ್ರಮದ ಪರಿಶ್ರಮದ ಫಲಿತಾಂಶವಾಗಿ ಇಂದಿನ ಮಂದ್ ನಮ್ಮೆಯಲ್ಲಿ 45 ಮಂದ್‍ಗಳು ಭಾಗವಹಿಸಿವೆ ಎಂದು ಅವರು ಹೇಳಿದರು. ಕೊಡವ ಜನಾಂಗೀಯ ಅಸ್ತಿತ್ವ ಹಾಗೂ ಸಾಂಸ್ಕøತಿಕ ಅಸ್ತಿತ್ವಕ್ಕೆ ಧÀಕ್ಕೆ ಉಂಟಾದಾಗಲೆಲ್ಲ ಯುಕೊ ಪಲಾಯನಗೈಯದೆ ಎದುರಿಸಿ ನಿಂತಿದೆ. ಮುಂದೆಯೂ ಎದುರಿಸಿ ನಿಲ್ಲುತ್ತದೆ. ಆದರೆ ಕೊಡವರು ಸಂಸ್ಕøತಿ, ಸಂಸ್ಕಾರಕ್ಕೆ ಒತ್ತು ನೀಡದಿದ್ದರೆ ಅವನತಿ ಹೊಂದಬೇಕಾಗುತ್ತದೆ ಎಂದು ಎಚ್ಚರಿಸಿದರು. 8-10 ಸಾವಿರ ಜನ ಮಂದ್ ನಮ್ಮೆಯಲ್ಲಿ ಸೇರಿರುವದು ಐತಿಹಾಸಿಕ ದಾಖಲೆ. ಸರಕಾರ ಹಾಗೂ ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ಇದಕ್ಕಿಂತ ಹೆಚ್ಚು ಜನ ಸೇರಿರಬಹುದು. ಆದರೆ ಮಂದ್ ನಮ್ಮೆಯಲ್ಲಿ ಇಷ್ಟು ಜನ ಸೇರಿದ್ದು ದಾಖಲೆಯಾಗಿದೆ. ಮುಂದೆಯೂ ಜನಾಂಗದ ಉಳಿವಿಗಾಗಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕೊಡವ ಯುವತಿಯರು ಹಾಗೂ ಯುವಕರು ಅಂತರ್ಜಾತಿ ವಿವಾಹದ ಬಗ್ಗೆ ಪ್ರಸ್ತಾಪಿಸಿದ ಮಂಜು ಚಿಣ್ಣಪ್ಪ ಅವರು, ಇಡೀ ಬಾಹ್ಯ ಜಗತ್ತು ಕೊಡವ ಜನಾಂಗದ ಬಗ್ಗೆ ಆಕರ್ಷಣೆ ಹಾಗೂ ಕುತೂಹಲ ಬೆಳೆಸಿಕೊಳ್ಳುತ್ತಿದೆ. ಆದರೆ ಆಂತರ್ಯದ ಸ್ವಾಭಿಮಾನದ ಕೊರತೆಯಿಂದ ಜನಾಂಗದಲ್ಲಿ ಎಲ್ಲವನ್ನು ಪಡೆದು ದುರಾಸೆ ಹಾಗೂ ಮೋಹಕ್ಕೆ ಒಳಪಟ್ಟು ಕೆಲವು ಯುವಕ ಯುವತಿಯರು ಅಂತರ್ಜಾತಿ ವಿವಾಹವಾಗುತ್ತಿರುವದು ಕೊಡವ ಜನಾಂಗದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಹೀಗೆ ದುರಾಸೆ ಹಾಗೂ ಮೋಹಕ್ಕೆ ಸಿಲುಕಿ ಅಂತರ್ಜಾತಿ ವಿವಾಹವಾದ ಕೊಡವ ಯುವಕ, ಯುವತಿಯರು ದುರಂತ ಅಂತ್ಯ ಕಂಡಿರುವದೇ ಹೆಚ್ಚು ಎಂದು ಹೇಳಿದರು.

ಮುಂದಿನ ವರ್ಷದಿಂದ ಪ್ರತಿ ವರ್ಷ ಡಿ. 25ಕ್ಕೆ ಕೊಡವ ಮಂದ್ ನಮ್ಮೆ ಆಚರಿಸಲು ನಿರ್ಧರಿಸಲಾಗಿದೆ. ಕಳೆದ 3 ವರ್ಷದಿಂದ ನಶಿಸಿ ಹೋಗುತ್ತಿದ್ದ ಮಂದ್‍ಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ಪುನಶ್ಚೇತನಕ್ಕೆ ಪ್ರಯತ್ನಿಸಲಾಯಿತು. ಮುಂದಿನ 3 ವರ್ಷಗಳಲ್ಲಿ ಕೊಡವ ಮಂದ್ ನಮ್ಮೆಯನ್ನು ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಚಕ್ಕೇರ ಪಂಚಮ್ ತ್ಯಾಗರಾಜ್ ಪ್ರಾರ್ಥಿಸಿ, ತಿರ್ಕಚೇರಿರ ಲಾಸ್ಯ ತೇಜಸ್ವಿ ಸ್ವಾಗತಿಸಿ, ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ಚೆಪ್ಪುಡಿರ ಸುಜು ಕರುಂಬಯ್ಯ ವಂದಿಸಿದರು.

ವೇದಿಕೆಯಲ್ಲಿ ನಾಡ್‍ತಕ್ಕ ಪಳಗಂಡ ಗಪ್ಪು ಗಣಪತಿ, ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ, ಕೋಟೇರ ರಘು ಕಾರ್ಯಪ್ಪ, ಮಡೆಯಂಡ ವಿಠಲ್ ಬೆಳ್ಯಪ್ಪ, ಪಳಂಗಡ ಪೊನ್ನು ಮುತ್ತಪ್ಪ, ಕೋಟೇರ ಪ್ರಕಾಶ್ ಕಾರ್ಯಪ್ಪ, ಕೋಟೇರ ರಷ್ಯ ಮೇದಪ್ಪ, ಮಡೆಯಂಡ ಮಿಟ್ಟು ತಿಮ್ಮಯ್ಯ, ಮಣಿ ಮುದ್ದಪ್ಪ, ಮಚ್ಚುರ ಸೋಮಯ್ಯ ಪುದಿಯೊಕ್ಕಡ ದಿನೇಶ್, ನೆಲ್ಲಮಕ್ಕಡ ದರಣು, ತೀತಿಮಾಡ ಬೋಸು, ಮಡೆಯಂಡ ಸಬಿತಾ. ಮುಂಡಂಡ ವಿಜು, ಪಾಂಡಂಡ ಸ್ವಾತಿ, ಮಂಡೇಪಂಡ ಶಶಿ, ಬಾರಿಯಂಡ ಸುನಿಲ್, ಅವರೆಮಾದಂಡ ಅನಿಲ್ ನಿತಿನ್, ಮಡೆಯಂಡ ಅರುಣ್, ಬೊಳ್ಳಚಟ್ಟಿರ ಪ್ರವೀಣ್ ಮಾದಪ್ಪ ಮತ್ತಿತರರು ಹಾಜರಿದ್ದರು.