ಮಡಿಕೇರಿ, ಸೆ.14: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತನ್ನ ಕಾರ್ಯ ಯೋಜನೆಯಲ್ಲಿ ಅಳವಡಿಸಿಕೊಂಡಿರುವ ಮಹತ್ವದ ಯೋಜನೆಗಳಲ್ಲಿ “ಕೊಡವ ನಾಟಕ ಪಡಿಪು ಶಿಬಿರ” ಒಂದಾಗಿದೆ. ಇದರ ಅನ್ವಯ “ಕೊಡವ ನಾಟಕ ಪಡಿಪು ಶಿಬಿರ “(ಕೊಡವ ನಾಟಕ ಕಲಿಕಾ ಶಿಬಿರ) ವನ್ನು ನಡೆಸಲು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಡಿಕೇರಿ ತಾಲೂಕಿನ ಮೂರ್ನಾಡಿನ ಮೂರ್ನಾಡು ವಿದ್ಯಾಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಸಂಸ್ಥೆಯ ಪದವಿ ಹಾಗೂ ಪಿ.ಯು.ಸಿ. ವಿಭಾಗದ ಆಯ್ದ ಆಸಕ್ತಿವುಳ್ಳ ವಿದ್ಯಾರ್ಥಿಗಳನ್ನು ಬಳಸಿಕೊಂಡು 25 ದಿನಗಳ ಶಿಬಿರ ನಡೆಸಲಾಗುವದು.
ಈ “ಕೊಡವ ನಾಟಕ ಪಡಿಪು ಶಿಬಿರ”ದ ಉದ್ಘಾಟನೆಯನ್ನು ತಾ. 15 ರಂದು ಮಧ್ಯಾಹ್ನ 2.30 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮತ್ತು ಎಲ್ಲಾ ಸದಸ್ಯರು, ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚ್ಚೇಟಿರ ಜಿ.ಮಾದಪ್ಪ, ಪದಾಧಿಕಾರಿಗಳು, ಪ್ರಾಂಶುಪಾಲರುಗಳು, ಸಿಬ್ಬಂದಿ ವರ್ಗ ಹಾಗೂ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಅವರು ತಿಳಿಸಿದ್ದಾರೆ.