ಮಡಿಕೇರಿ, ನ. 8: ಕೊಡವ ಜನಾಂಗದವರು ಇತರ ಯಾರನ್ನೂ ತುಳಿದು ಮುಂದೆ ಬಂದಿಲ್ಲ... ಆದರೆ ಪ್ರಸ್ತುತ ಜನಾಂಗದವರು ತಮ್ಮ ಉದಾಸೀನದಿಂದಲೇ ಮೂಲೆ ಗುಂಪಾಗುತ್ತಿದ್ದು, ತಮ್ಮತನವನ್ನು ಉಳಿಸಿಕೊಳ್ಳಲು ಭಿನ್ನಾಭಿಪ್ರಾಯ ಬಿಟ್ಟು ಎಲ್ಲರೂ ಒಂದಾಗಬೇಕೆಂದು ಮಡಿಕೇರಿಯ ಇಗ್ಗುತಪ್ಪ ಕೊಡವ ಕೇರಿಯ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪಿ.ಡಿ. ಪೊನ್ನಪ್ಪ ಅವರು ಅಭಿಪ್ರಾಯಪಟ್ಟರು.

ಇಗ್ಗುತಪ್ಪ ಕೊಡವ ಕೇರಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಸಂತೋಷಕೂಟ ಹಾಗೂ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಹಿರಿಯರಾದ ಮೊಣ್ಣಂಡ ಶೋಭಾ ಸುಬ್ಬಯ್ಯ ಕನ್ನಡ-ಇಂಗ್ಲಿಷ್ ಪದಕ್ಕೆ ಇರುವ ಕೊಡವ ಪದ ಹೇಳುವ ಸ್ಪರ್ಧೆಯ ಮೂಲಕ ಗಮನ ಸೆಳೆದರು. ಪರಸ್ಪರ ಪರಿಚಯ, ಸಹಕಾರ, ಒಗ್ಗಟ್ಟಿಗೆ ಕೇರಿ ಪೂರಕವಾಗಬೇಕು ಎಂದು ಅವರು ಹೇಳಿದರು.

ಕೇರಿಯ ಹಿರಿಯರಾದ ಚೇಂದ್ರಿಮಾಡ ಪೊನ್ನಪ್ಪ ಅವರು ಮಾತನಾಡಿ, ಎಲ್ಲರೂ ಪ್ರೀತಿ-ವಿಶ್ವಾಸದಿಂದ, ಸಾಮರಸ್ಯದ ಬದುಕು ಸಾಗಿಸುವಂತೆ ಕರೆ ನೀಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಬಲ್ಯಂಡ ಪ್ರಕಾಶ್, ಚೌರೀರ ಕಾವೇರಿ, ಕಾರ್ಯದರ್ಶಿ ಚೆಯ್ಯಂಡ ಸತ್ಯ, ಖಜಾಂಚಿ ಪಡೆಯಟ್ಟಿರ ಹರೀಶ್, ಮಂಡೇಡ ಕುಮಾರ್, ಮುಕ್ಕಾಟಿರ ಮಿಟ್ಟು ಕಾವೇರಪ್ಪ, ಕೂಪದೀರ ಗೊಂಬೆ ಮತ್ತಿತರರು ಉಪಸ್ಥಿತರಿದ್ದರು.

ಮುಕ್ಕಾಟಿರ ವಿಮಲ ಪ್ರಾರ್ಥಿಸಿ, ಮಂಡೇಡ ಕುಮಾರ್ ಸ್ವಾಗತಿಸಿದರು. ಬಲ್ಯಂಡ ಪ್ರಕಾಶ್ ಲೆಕ್ಕಪತ್ರ ವರದಿ ನೀಡಿದರು. ಚೆಯ್ಯಂಡ ಸತ್ಯ ನಿರೂಪಿಸಿ, ಪಡೆಯಟ್ಟಿರ ಹರೀಶ್ ವಂದಿಸಿದರು.

ನೂತನ ಅಧ್ಯಕ್ಷರಾಗಿ ಕಾವೇರಿ

ಇಗ್ಗುತಪ್ಪ ಕೇರಿಯ ನೂತನ ಅಧ್ಯಕ್ಷರಾಗಿ ಚೌರೀರ ಕಾವೇರಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಲ್ಯಂಡ ಪ್ರಕಾಶ್, ಕಾರ್ಯದರ್ಶಿ ಯಾಗಿ ಬೊಳ್ಳಾರ್‍ಪಂಡ ಲೀಲಾ, ಖಜಾಂಚಿಯಾಗಿ ಪಡೆಯಟ್ಟಿರ ಹರೀಶ್, ಸಮಿತಿ ಸದಸ್ಯರಾಗಿ ಮಂಡೇಡ ಕುಮಾರ್, ಓಡಿಯಂಡ ದಿನೇಶ್, ನೆರವಂಡ ಬಬೀನ, ಮುಕ್ಕಾಟಿರ ವಿಮಲ, ಚೆಯ್ಯಂಡ ಸತ್ಯ, ಮಾತಂಡ ದಮಯಂತಿ, ಕುಂಚೆಟ್ಟಿರ ಅಯ್ಯಪ್ಪ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಮಾತಂಡ ಸುರೇಶ್ ಚಂಗಪ್ಪ ಕಾರ್ಯನಿರ್ವಹಿಸಿದರು.