ಬೆಂಗಳೂರು, ಆ. 23: ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಬ್ಯಾರಿ, ಬಂಜಾರ, ಕೊಂಕಣಿ ಭಾಷಾ ಚಿತ್ರಗಳ ಕಲಾವಿದರು, ತಂತ್ರಜ್ಞರನ್ನು ವೈಯಕ್ತಿಕ ಪ್ರಶಸ್ತಿಗಳಿಗೆ ಸರ್ಕಾರ ಪರಿಗಣನೆ ಮಾಡಬೇಕೆಂದು ಕರ್ನಾಟಕ ಚಲನ ಚಿತ್ರ ನೀತಿ ನಿರೂಪಣಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಹಾಗೂ ನಿರ್ಮಾಪಕ, ನಿರ್ದೇಶಕ ಕಲಾವಿದರ ಸಂಘದ ಪ್ರತಿನಿಧಿಗಳನ್ನೊಳಗೊಂಡ ಕರ್ನಾಟಕ ಚಲನ ಚಿತ್ರ ನೀತಿ ನಿರೂಪಣಾ ಸಮಿತಿ ಕನ್ನಡ ಚಲನ ಚಿತ್ರ ರಂಗದ ಅಭಿವೃದ್ಧಿ ಸಂಬಂಧ ಸರ್ಕಾರಕ್ಕೆ ಹಲವು ಶಿಫಾರಸ್ಸುಗಳನ್ನು ಮಾಡಿದ್ದು, ವಿವರ ಇಂತಿದೆ.

ರಾಜ್ಯದಲ್ಲಿ ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಸಹಾಯಧನ, ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ನಿಬಂಧನೆ ಯೊಂದಿಗೆ ನಿರ್ಮಿಸುವ ಜನತಾ ಚಿತ್ರಮಂದಿರಗಳಿಗೆ ತಲಾ ರೂ. 50ಲಕ್ಷ ರೂ. ಸಹಾಯ ಧನ ನೀಡುವದು. ಹಳೆಯ ಚಿತ್ರಮಂದಿರ ನವೀಕರಣಕ್ಕೆ ರೂ. 25ಲಕ್ಷ, ಜನತಾ ಚಿತ್ರಮಂದಿರ ಗಳಿಗೆ ಸರಳ ನಿಯಮ ರೂಪಿಸುವದು, ಮಲ್ಟಿಫ್ಲೆಕ್ಸ್, ಮಿನಿಫ್ಲೆಕ್ಸ್ ಹಾಗೂ ಜನತಾ ಚಿತ್ರಮಂದಿರಗಳಿಗೆ ಲೈಸನ್ಸಿಂಗ್ ನಿಯಮಾವಳಿಗಳು ಸರಳವಾಗುವಂತೆ ನೋಡಿಕೊಳ್ಳು ವದು, ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರವೇಶ ಶುಲ್ಕ ರೂ. 120 ಮೀರದಂತೆ ನಿಯಮ ರೂಪಿಸುವದು, ಮಲ್ಟಿಫ್ಲೆಕ್ಸ್‍ಗಳ ಎರಡು ಪರದೆಗಳಲ್ಲಿ ಪ್ರೈಂ ಟೈಂನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯಗೊಳಿಸು ವದು. ಗುಣಾತ್ಮಕ ಚಲನಚಿತ್ರಗಳಿಗೆ ಸಹಾಯಧನ ಹೆಚ್ಚಿಸುವದು.

ರಾಷ್ಟ್ರಮಟ್ಟದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರಗಳಿಗೆ ರೂ. 25 ಲಕ್ಷ, ರಾಷ್ಟ್ರಮಟ್ಟದ ರಜತ ಕಮಲ ಪ್ರಶಸ್ತಿ ಪಡೆದ ಚಿತ್ರಗಳಿಗೆ ರೂ. 20 ಲಕ್ಷ, ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದ ಚಿತ್ರಗಳಿಗೆ ರೂ. 20 ಲಕ್ಷ, ಅತ್ಯುತ್ತಮ ಕಥೆ, ಕಾದಂಬರಿ ಆಧರಿಸಿದ 5 ಚಿತ್ರಗಳಿಗೆ ರೂ. 20 ಲಕ್ಷ, ಇತರ ಚಿತ್ರಗಳಿಗೆ ರೂ. 15 ಲಕ್ಷ ಸಹಾಯಧನ ನೀಡಬೇಕು. ಜೀವಿತಾವಧಿ ಸಾಧನೆ ಮಾಡಿದ ಚಲನಚಿತ್ರರಂಗದ ವಿವಿಧ ವಲಯಗಳಲ್ಲಿರುವವರಿಗೆ ಎರಡು ಹೊಸ ಪ್ರಶಸ್ತಿ ಸ್ಥಾಪನೆ. ಈ ಎಲ್ಲಾ ಸಾಧಕ ಪ್ರಶಸ್ತಿಗಳ ಮೊತ್ತವನ್ನು ಎರಡರಿಂದ ಮೂರು ಲಕ್ಷಕ್ಕೆ ಹೆಚ್ಚಿಸುವದು, ಕನ್ನಡ ನಿರ್ಮಾಪಕರಿಗೆ ನೆರವಾಗುವ ದೃಷ್ಟಿಯಿಂದ ಪರಭಾಷಾ ಚಿತ್ರಗಳಿಗೆ ಪ್ರದರ್ಶನ ತೆರಿಗೆ ರೂ. 5ರಷ್ಟು ಹೆಚ್ಚಿಸಬೇಕು. ಅದನ್ನು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಬಳಸಬೇಕು, ಕನ್ನಡ ಚನಲಚಿತ್ರಗಳನ್ನು ನಕಲು ಮಾಡುವ ವಿದ್ಯಮಾನ ತಡೆಗೆ ಗೂಂಡಾಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ರಾಜ್ಯದ ಎರಡು ಕೇಂದ್ರಗಳಲ್ಲಿ ಪೈರಸಿ ತಡೆ ಕೇಂದ್ರಗಳನ್ನು ತೆರೆಯಬೇಕು, ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಆನ್‍ಲೈನ್ ಟಿಕೆಟ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು, ಮೈಸೂರು ಚಿತ್ರನಗರಿ ಸಮೀಪ ಚಲನಚಿತ್ರ ರಂಗದವರ ವಸತಿ ಯೋಜನೆಗಾಗಿ 50 ಎಕರೆ ಜಮೀನು ಮೀಸಲಿಡಬೇಕು.

ಕನ್ನಡ ಚಿತ್ರರಂಗದ ಇತಿಹಾಸ ಚಿತ್ರೀಕರಿಸುವಾಗ ಸಕಾರಣಗಳಿದ್ದು, ಶೇ. 50 ಕ್ಕಿಂತಲೂ ಚಿತ್ರೀಕರಣದ ಅಗತ್ಯವಿದ್ದರೆ ಸರ್ಕಾರದ ಪೂರ್ವಾನು ಮತಿ ಪಡೆದು ಚಿತ್ರೀಕರಿಸಲು ಅವಕಾಶ ಕೊಡುವದು, ಕರ್ನಾಟಕದಿಂದ ಹೊರಗೆ ಹೊರಾಂಗಣದಲ್ಲಿ ಮತ್ತು ಲಭ್ಯವಿಲ್ಲದ ಸೌಲಭ್ಯಗಳಿಗಾಗಿ ಮಾತ್ರ ಒಳಾಂಗಣದಲ್ಲಿ (ಚಿತ್ರನಗರಿಯೂ ಸೇರಿದಂತೆ) ಚಿತ್ರೀಕರಿಸುವಾಗ ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪೂರ್ವಾನುಮತಿ ಪಡೆಯಲು ಸೂಚಿಸುವದು, ಚಲನಚಿತ್ರ ಫಿಲಂ ಇನ್ಸ್‍ಟಿಟ್ಯೂಟ್‍ಗಳನ್ನು ಸ್ಥಾಪಿಸುವದು, ಶಾಲೆಗಳಲ್ಲಿ ಸಿನಿಮಾ ಶಿಕ್ಷಣ ಅಳವಡಿಸುವದು, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಜಾರಿಗೊಳಿಸು ವದು, ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.