ಮಡಿಕೇರಿ, ಜೂ. 11: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ನೂತನ ಅಧ್ಯಕ್ಷರಾಗಿ ಅಪ್ಪಚೆಟ್ಟೋಳಂಡ ಎ. ಮನುಮುತ್ತಪ್ಪ ಅವರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಪಿ. ಸುಜಾ ಕುಶಾಲಪ್ಪ ಅವರ ಅಧಿಕಾರಾವಧಿ ಮುಗಿದು ನಂತರ ಕೆಲ ಚುನಾವಣೆಗಳು ಎದುರಾದ ಕಾರಣ ನೂತನ ಅಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಇದೀಗ ಇಂದು ಮನುಮುತ್ತಪ್ಪ ಅವರನ್ನು ನೇಮಿಸಿ ಬಿಎಸ್‍ವೈ ಅಧಿಕೃತ ಘೋಷಣೆ ಮಾಡಿದ್ದಾರೆ.

ಬಿಜೆಪಿಯಲ್ಲಿ ಈ ಹಿಂದೆ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮನು ಮುತ್ತಪ್ಪ ನಾಪೋಕ್ಲು ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿಗೆ ಆಯ್ಕೆ ಆಗಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸಿದ್ದರು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ, ಬಿಜೆಪಿಯ ವಕ್ತಾರರಾಗಿ, ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮನುಮುತ್ತಪ್ಪ ಇದೀಗ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕಳೆದ 8 ವರ್ಷದಿಂದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ಜಿಲ್ಲಾ ಸಹಕಾರ ಯೂನಿಯನ್‍ನಲ್ಲೂ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಸಹಕಾರ ಯೂನಿಯನ್‍ನ ರಾಜ್ಯ ಫೆಡರೇಷನ್ ನಿರ್ದೇಶಕ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‍ನ ನಿರ್ದೇಶಕರಾಗಿಯೂ ಮನುಮುತ್ತಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಭಾಗಮಂಡಲ- ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.