ನಾಪೆÇೀಕ್ಲು, ಜು. 13: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ, ಟಿಪ್ಪು ಜಯಂತಿ ಆಚರಣೆ ಮತ್ತಿತರ ಬಲವಂತದ ಕಾನೂನು ಹೇರಿಕೆಯ ಮೂಲಕ ಕೊಡಗಿನ ಜನರ ಅಸ್ಥಿತ್ವವನ್ನು ಸರಕಾರ ಕಸಿದುಕೊಳ್ಳಲು ಯತ್ನಿಸುತ್ತಿದೆ. ಇದರಿಂದ ಜಿಲ್ಲೆಯ ಜನತೆ ಪಾರಾಗಬೇಕಾದರೆ ಕೊಡಗು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಕರೆ ನೀಡಿದ್ದಾರೆ.
ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಬಲವಂತವಾಗಿ ಹೇರಿ ಇಬ್ಬರು ಅಮಾಯಕರ ಸಾವಿಗೆ ಸರಕಾರ ಕಾರಣವಾಗಿದೆ. ರಾಜ್ಯದ ಎಲ್ಲೆಡೆ ಪ್ರಾಮಾಣಿಕ ಅಧಿಕಾರಿಗಳು ಸರಕಾರದ ದುರಾಡಳಿತದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಧಿಕಾರಿಗಳ ಸಮಾಧಿಯ ಮೇಲೆ ಸರಕಾರದ ಮುಖ್ಯ ಮಂತ್ರಿಗಳು, ರಾಜಕಾರಣಿ ಗಳು ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕುಟುಂಬದವರ ಹೇಳಿಕೆಯನ್ನು ಸರಕಾರ ಪಡೆಯದೆ ತಮಗೆ ಸಾಧಕವಾಗುವಂತೆ ಬರೆಸಿಕೊಂಡು ಗಣಪತಿ ಮರಣ ಪೂರ್ವ ಹೇಳಿಕೆಯಲ್ಲಿ ಆರೋಪಿಸಿ ರುವಂತೆ ಮಂತ್ರಿ ಕೆ.ಜೆ. ಜಾರ್ಜ್ ಮತ್ತು ಪೆÇಲೀಸ್ ಅಧಿಕಾರಿಗಳಾದ ಮೊಂಹತಿ ಮತ್ತು ಪ್ರಸಾದ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದೆ ಮೃತ ಗಣಪತಿ ಅವರ ಪತ್ನಿಯ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ಗೃಹ ಮಂತ್ರಿ ನೀಡುತ್ತಿರುವದು ರಾಜ್ಯದ ಮಹಿಳೆಯರಿಗೆ ಮಾಡಿದ ಅಪಮಾನವಾಗಿದ್ದು, ಅವರು ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ತಮ್ಮಯ್ಯ ಅವರನ್ನು ಅಮಾನತುಗೊಳಿಸಿ: ನೀಚ ಸರಕಾರ ದದೊಂದಿಗೆ ಮೃತ ಗಣಪತಿ ಸಹೋದರ ಡಿವೈಎಸ್ಪಿ ತಮ್ಮಯ್ಯ ಪಾಲುದಾರರಾಗಿದ್ದಾರೆ. ಗಣಪತಿ ಸಾವಿಗೆ ಶರಣಾದ ಸಂದರ್ಭ ಅವರೊಂದಿಗೆ ಸೌಹಾರ್ಧದಿಂದ ಇರದ ತಮ್ಮಯ್ಯ ನೀಡಿದ ಹೇಳಿಕೆಯಿಂದ ಇದು ಸ್ಪಷ್ಟವಾಗುತ್ತಿದೆ. ಗಣಪತಿಯವರಿಗೆ ಸಂಸಾರ ಇರುವಾಗ ಅವರ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಹೇಳಿಕೆ ನೀಡಲು ಅವರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನತೆಯ ಬಗ್ಗೆ ಗೌರವವಿದ್ದರೆ, ನೈತಿಕತೆಯಿದ್ದರೆ ಕೂಡಲೇ ಮಂತ್ರಿ ಕೆ.ಜೆ. ಜಾರ್ಜ್, ಪೆÇಲೀಸ್ ಅಧಿಕಾರಿಗಳಾದ ಪ್ರಣಬ್ ಮೊಂಹತಿ ಮತ್ತು ಎ.ಎಂ.ಪ್ರಸಾದ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ ಅವರು ತಪ್ಪಿದ್ದಲ್ಲಿ ಕೊಡಗು ಪ್ರತೇಕ ರಾಜ್ಯದ ಹೋರಾಟವನ್ನು ಆರಂಭಿಸಲಾಗುವದು ಎಂದು ಎಚ್ಚರಿಸಿದರು. ತಾ. 14ರಂದು (ಇಂದು) ಕರೆಯಲಾಗಿರುವ ಕೊಡಗು ಬಂದ್ಗೆ ಸಂಪೂರ್ಣ ಬೆಂಬಲ ನೀಡಲಾಗುವದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ನೆಡುಮಂಡ ಕೃತಿ, ಬಾಳೆಯಡ ಜಗ ಅಯ್ಯಪ್ಪ ಇದ್ದರು.