ಕುಶಾಲನಗರ, ಅ. 31: ಕೊಡಗು ಜಿಲ್ಲೆಯ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದಿಂದ 70 ಲಕ್ಷ ರೂಗಳ ಅನುದಾನ ದೊರೆತಿರುವದಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಾಲ್ಗೊಂಡ ಅವರು ಮಾತನಾಡಿ, ಸಂಚಾರಿ ಸುರಕ್ಷತೆ ಹಾಗೂ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಲಾಖೆ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಶಾಲಾ ಕಾಲೇಜು ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದರು.

ಕುಶಾಲನಗರದಲ್ಲಿ ಸಧ್ಯದಲ್ಲಿಯೇ ಸಂಚಾರಿ ಪೊಲೀಸ್ ಠಾಣೆ ಪ್ರಾರಂಭಿಸಲಾಗುವದು ಎಂದು ತಿಳಿಸಿದ ರಾಜೇಂದ್ರಪ್ರಸಾದ್, ಸರಕಾರದಿಂದ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣವಾಗುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಏರ್ಪಡಬೇಕಾಗಿದೆ ಎಂದರು. ಉತ್ತಮ ಸಮಾಜ ಹಾಗೂ ಸ್ವಾಸ್ಥ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಜನತೆಯ ಸಹಕಾರ ಅಗತ್ಯ ಎಂದರು.

ಈ ಸಂದರ್ಭ ನೂತನ ಪೊಲೀಸ್ ಠಾಣೆ ನಿರ್ಮಾಣವಾಗುವಲ್ಲಿ ಸಹಕರಿಸಿದ ಸುಮಾರು 15 ಮಂದಿ ದಾನಿಗಳನ್ನು ಪೊಲೀಸ್ ಇಲಾಖೆ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕೂಡುಮಂಗಳೂರು ಕೈಗಾರಿಕಾ ಬಡಾವಣೆಯ ಆವರಣದಲ್ಲಿ ನಿರ್ಮಾಣಗೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಕುಶಾಲನಗರ ಡಿವೈಎಸ್ಪಿ ಸಂಪತ್‍ಕುಮಾರ್, ಲಿಂಗಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಶ್ರೀನಿವಾಸ್, ಮಂಜುಳಾ, ಉದ್ಯಮಿ ಎಸ್‍ಎಲ್‍ಎನ್ ವಿಶ್ವನಾಥ್ ಇದ್ದರು.

ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್ ಸ್ವಾಗತಿಸಿದರು. ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ವಂದಿಸಿದರು.

ಸಾರ್ವಜನಿಕರಿಗೆ ಸೂಚನೆ

ಕಳೆದ 7 ತಿಂಗಳ ಕಾಲ ಕುಶಾಲನಗರ ಬೈಚನಹಳ್ಳಿಯಲ್ಲಿ ಕಾರ್ಯನಿರ್ವಹಿಸು ತ್ತಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಇಂದಿನಿಂದ (ನವೆಂಬರ್-1 ರಿಂದ) ಕೂಡುಮಂಗಳೂರು ಕೈಗಾರಿಕಾ ಬಡಾವಣೆಯ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ. ಮಹೇಶ್ ತಿಳಿಸಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಕೋರಿದ್ದಾರೆ.