ಶ್ರೀಮಂಗಲ, ಆ.1: ಕೊಡಗು ಜಿಲ್ಲೆಯ ಕಾವೇರಿ-ಲಕ್ಷ್ಮಣ ತೀರ್ಥ ನದಿ ಪಾತ್ರದ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸುವದನ್ನು ಜಿಲ್ಲಾ ಬೆಳೆಗಾರ ಒಕ್ಕೂಟ ಹಾಗೂ ಜಿಲ್ಲಾ ರೈತ ಸಂಘ ತೀವ್ರವಾಗಿ ವಿರೋಧಿಸಿದೆ. ಜಿಲ್ಲೆಯಲ್ಲಿ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತಿದೆ ಎನ್ನುವ ಸಂಶಯ ಉಂಟಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಈ ಬಗ್ಗೆ ಸೂಕ್ತ ಮಾಹಿತಿಯನ್ನು ಜನತೆಗೆ ನೀಡಬೇಕೆಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ. ಶ್ರೀಮಂಗಲದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪರವರು ಈ ಹಿಂದೆ ಮಳೆ ಕೊರತೆ ಎದುರಾದಾಗ ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸಿದ ದುಷ್ಪರಿಣಾಮದಿಂದ ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ ಎಲ್ಲ ಬೆಳೆಗಳ ಮೇಲೆ ಕೊಳೆರೋಗ ಕಾಣಿಸಿಕೊಂಡು ವ್ಯಾಪಕವಾಗಿ ಹಾನಿ ಉಂಟಾಗಿತ್ತು. ಸ್ಬಾಭಾವಿಕವಾಗಿ ಸುರಿಯುವ ಅತಿಹೆಚ್ಚು ಮಳೆಯಿಂದ ಹೆಚ್ಚಿನ ನಷ್ಟ ಉಂಟಾಗುವದಿಲ್ಲ. ಆದರೆ ರಾಸಾಯನಿಕ ಸಿಂಪಡಿಸಿ ಬಲವಂತವಾಗಿ ಸುರಿಸುವ ಮಳೆಯಿಂದ ಪರಿಸರದ ಮೇಲೆ ಹಾಗೂ ರೈತರ ಫಸಲಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.

2014-15 ರ ಸಾಲಿನಲ್ಲಿ ಹೀಗೆ ನಷ್ಟವಾದ ಸಂದರ್ಭ ಪರಿಹಾರಕ್ಕಾಗಿ ರೈತರು ಸರಕಾರಕ್ಕೆ ಸಲ್ಲಿಸಿದ್ದ ಅರ್ಜಿಗಳಿಗೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ರೂ. 22 ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದರೂ ಬಿಡುಗಡೆ ಮಾಡಿಲ್ಲ. ಸರಕಾರ ಮೋಡ ಬಿತ್ತನೆಗೆ ಖರ್ಚು ಮಾಡುವ ಹಣವನ್ನು ಜಿಲ್ಲೆಯ ಬೆಳೆಗಾರರಿಗೆ ಪರಿಹಾರವಾಗಿ ನೀಡಲಿ ಎಂದು ಒತ್ತಾಯಿಸಿದರು. ಕಳೆದ 15 ವರ್ಷಗಳಿಂದ ಮಳೆ ಕೊರತೆ ಹಿನ್ನೆಲೆಯಲ್ಲಿ ಕಾವೇರಿ-ಲಕ್ಷ್ಮಣ ತೀರ್ಥ ನದಿಪಾತ್ರದ ಪ್ರದೇಶಗಳಲ್ಲಿ ಹಲವಾರು ವರ್ಷ ಕೃತಕ ಮಳೆ ಸುರಿಸಿದ್ದು ಇದರಿಂದ ಈ ವ್ಯಾಪ್ತಿಯಲ್ಲಿ ಅಪಾರ ನಷ್ಟ ಉಂಟಾಗಿದೆ. ಕೃತಕ ಮಳೆಗೆ ತುತ್ತ್ತಾಗಿ ಬೆಳೆ ನಷ್ಟಗೊಳಿಸಿರುವ ಸರಕಾರವೇ ಇದರ ಹೊಣೆ ಹೊತ್ತು ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿರುವ ರೈತ-ಬೆಳೆಗಾರರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಮುಂದಿನ ದಿನಗಳಲ್ಲಿ ಕೃತಕ ಮಳೆ ಸುರಿಸದಂತೆ ಸರಕಾರವನ್ನು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ರಮೇಶ್‍ರವರು ಮಾತನಾಡಿ ಸರಕಾರ ಏಕಪಕ್ಷೀಯ ವಾಗಿ ಕೃತಕ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಮುಂದಾಗಿರುವದು ಸರಿಯಲ್ಲ. ಈ ಬಗ್ಗೆ ಆಯಾ ಭಾಗದ ರೈತರನ್ನು ಜಿಲ್ಲಾಧಿಕಾರಿ ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಕೇಳಬೇಕು. ರಾಜ್ಯ ಸರ್ಕಾರ ಮೋಡ ಬಿತ್ತನೆ ಮೂಲಕ ರಾಸಾಯನಿಕ ಸಿಂಪಡಿಸಿ ಕೃತಕ ಮಳೆ ಸುರಿಸುವದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಪ್ರಕೃತಿಗೆ ವಿರೋಧವಾಗಿ ಜಿಲ್ಲೆಯ ಮೂಲಕ ಲಕ್ಷಾಂತರ ಮರಗಳನ್ನು ಹನನ ಮಾಡಿ ಹೈಟೆನ್ಷನ್ ವಿದ್ಯುತ್ ಮಾರ್ಗ ಅಳವಡಿಸಿ ದುಷ್ಪರಿಣಾಮ ವನ್ನು ಮಳೆ ಕೊರತೆ ಎದುರಿಸುವ ಮೂಲಕ ಎದುರಿಸುತ್ತಿದ್ದೇವೆ. ಇನ್ನೊಂದು ಕಡೆ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಮರ ಹನನ ನಡೆಯುತ್ತಿದ್ದು ಈ ಮೂಲಕ ಸ್ವಾಭಾವಿಕ ಮಳೆ ತರಿಸುವ ಅರಣ್ಯಗಳು ನಾಶವಾಗಿ ಮಳೆ ಕ್ಷೀಣವಾಗಿದೆ ಹಾಗೂ ಹವಾಮಾನ ವೈಪರೀತ್ಯ ಉಂಟಾಗಿದೆ. ಸರಕಾರ ಕೃತಕ ಮಳೆಸುರಿಸುವ ತಾತ್ಕಾಲಿಕ ಪರಿಹಾರದ ಬದಲು ಸಮರ್ಪಕ ಮಳೆಯಾಗಲು ಜಿಲ್ಲೆಯ ಪರಿಸರವನ್ನು ಮಾರಕ ಯೋಜನೆಗಳಿಂದ ಕಾಪಾಡುವ ಮೂಲಕ ಮರ ಹನನಗಳನ್ನು ತಡೆಗಟ್ಟಿ ಪರಿಸರವನ್ನು ಸಂರಕ್ಷಿಸಬೇಕು. ಹೀಗಾದಾಗ ಮಳೆ ಕೊರತೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು. ಸರಕಾರ ಕೃತಕ ಮೋಡ ಬಿತ್ತನೆ ಮೂಲಕ ಮಳೆ ಸುರಿಸುವ ಯೋಜನೆಯಿಂದ ಪರಿಸರದ ಮೇಲೆ ದೀರ್ಘಕಾಲಿಕ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರೈತರ ಅಭಿಪ್ರಾಯವನ್ನು ಕಡೆಗಣಿಸಿ ಸರ್ವಾಧಿಕಾರಿಗಳಂತೆ ವರ್ತಿಸಿದರೆ ಪರಿಸರವೇ ಸೂಕ್ತ ಉತ್ತರ ನೀಡುತ್ತದೆ ಎಂದು ಎಚ್ಚರಿಸಿದರು.

ಶ್ರೀಮಂಗಲದ ರೈತ ಪ್ರಮುಖ ಐಪುಮಾಡ ಸಂಜು ಮಾತನಾಡಿ ಲಕ್ಷ್ಮಣ ತೀರ್ಥ ಉಗಮ ಪ್ರದೇಶವಾದ ಶ್ರೀಮಂಗಲ ವ್ಯಾಪ್ತಿಯಲ್ಲಿ ಸೋಮವಾರ ಮುಂಜಾನೆಯಿಂದ ವಿಮಾನಗಳ ಹಾರಾಟ ಸದ್ದು ಕೇಳಿಸುತ್ತಿದ್ದು, ಶಬ್ದ ಕೇಳಿಸಿದ ಸ್ವಲ್ಪ ಸಮಯದಲ್ಲೆ ದಿಢೀರಾಗಿ ಮಳೆ ಸುರಿಯುತ್ತಿದೆ. ಇದು ಸ್ವಾಭಾವಿಕ ಮಳೆಯಂತೆ ಭಾಸವಾಗುತ್ತಿಲ್ಲ ಇದು ಮೋಡ ಬಿತ್ತನೆಯ ಪರಿಣಾಮದಿಂದ ಕೃತಕ ಮಳೆಯಾಗುತ್ತಿದೆ ಎನ್ನುವ ಸಂಶಯ ಉಂಟಾಗುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ನಾಲ್ಕೇರಿ ಗ್ರಾಮದ ಮಾಯಣಮಾಡ ಮೋಹನ್, ಕುಮಟೂರು ಗ್ರಾಮದ ಕೊಟ್ರಂಗಡ ಹರೀಶ್ ಹಾಜರಿದ್ದರು.