ಕೊಡಗು ಜಿಲ್ಲೆಯಲ್ಲಿ ಹುಟ್ಟಿಕೊಂಡಿರುವ, ಮುಂದೆ ಹುಟ್ಟಲಿರುವ ಕೆಲವು ಸಂಘಟನೆಗಳ ಮುಖಂಡರು ಜಿಲ್ಲೆಯ ವಾಸ್ತವ ಸಮಸ್ಯೆಗಳನ್ನು ಅರ್ಥೈಸಿಕೊಳ್ಳದೆ ಮುಂದೆ ಆಗಲಿರುವ ಆತಂಕಗಳ ಬಗ್ಗೆ ಚಿಂತಿಸದೆ ಸಮಾನ ಮನಸ್ಕರೊಂದಿಗೆ ಚರ್ಚಿಸದೆ ಬೀಸುತ್ತಿರುವ ಮೂಗುದಾರದಿಂದ ಆನೆಗಳು ಖೆಡ್ಡಾಕ್ಕೆ ಬೀಳುವ ರೀತಿಯಲ್ಲಿ ಶ್ರೀಸಾಮಾನ್ಯರು ಬಲೆಗೆ ಬೀಳುತ್ತಿರುವರು. ಇದರ ಪರಿಣಾಮ ಕೊಡಗು ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರುವಂತಹ ಲಕ್ಷಣ ಕಂಡು ಬರುತ್ತಿದೆ. ಸಂಘಟಿಸಿದ ಮುಖಂಡರು ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲೆ ಮೂರಾಬಟ್ಟೆ ಹರಿದು ಹಂಚಿಹೋಗುವದು ಖಚಿತ.

ಜಿಲ್ಲೆಯಲ್ಲಿರುವ ಬುದ್ಧಿಜೀವಿಗಳು, ಸಮಾನ ಮನಸ್ಕರು, ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು, ವಿಚಾರವಂತರು, ಹಾಲಿ ಮುಖಂಡರೆನಿಸಿಕೊಂಡವರು ಒಂದೆಡೆ ಕಲೆತು ಚರ್ಚಿಸದೆ ಇದ್ದಲ್ಲಿ-ಜಿಲ್ಲೆಯ ಮಾನ ಹರಾಜಾಗಲಿದೆ. ಇದರಿಂದ ಮುಂದಿನ ಜನಾಂಗದ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಚ್ಚರ. ಮೇಲಿನ ನಾಲ್ಕೈದು ವರ್ಗಗಳು ಒಂದಾಗಿ ಚರ್ಚಿಸುವಂತಾಗಬೇಕು. ಕೊಡಗಿನ ಸಂಸ್ಕøತಿ, ಆಚಾರ-ವಿಚಾರ ನೀತಿ-ನಿಯಮಗಳ ನಡವಳಿಕೆ ಬಗ್ಗೆ ಹೊರಗಿನ ಜನರಿಗೆ ಅಸಡ್ಡೆ ಮನೋಭಾವ ಹುಟ್ಟುವ ಮುನ್ನ ಜಿಲ್ಲೆಯ ಹಿರಿಯ, ಕಿರಿಯ ಮುಖಂಡರು, ಸುದೀರ್ಘವಾಗಿ ಮುಂದಾಲೋಚನೆಯಿಟ್ಟು ಸಹಕರಿಸಬೇಕಾಗಿರುವದು ಅತ್ಯಗತ್ಯ.

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ದೇಶದ ಗಡಿಯಲ್ಲಿ ನಿಂತು ಭಾರತ ದೇಶವನ್ನು ರಕ್ಷಿಸಿ ಸೇವೆ ಸಲ್ಲಿಸಿದ ನಿವೃತ್ತ ಸೇನಾಧಿಕಾರಿಗಳು ಮುಂದಾಳತ್ವ ವಹಿಸಿ ಜಿಲ್ಲೆಯನ್ನು ರಕ್ಷಿಸಬೇಕಾಗಿದೆ. ಆಯ್ಕೆಯಾದÀ ಪ್ರತಿನಿಧಿಗಳು, ಮಾಜಿ ಪ್ರತಿನಿಧಿಗಳು ಒಟ್ಟುಗೂಡಿ ಬಿರುಕು ಬಿಡುತ್ತಿರುವ ಕೊಡಗಿನ ನೆಲವನ್ನು ಅಳಿಸದೆ ಉಳಿಸುವ ಮತ್ತು ತಮ್ಮ ಆತ್ಮವನ್ನು ತಾವೇ ಪ್ರಶ್ನಿಸಿಕೊಂಡು ಉರಿಯುವ ಬೆಂಕಿಗೆ ಬೀಳುವ ತುಪ್ಪವನ್ನು ನಿಯಂತ್ರಿಸಿ ತಂಪಾಗಿಸಲು ಒಂದಾಗಲಿ. ಬೆರಳೆಣಿಕೆಯ ಮುಖಂಡರ ಅರ್ಥಪರ್ಥವಿಲ್ಲದ ನಿರ್ಣಯಗಳಿಗೆ ಕಡಿವಾಣ ಬೀಳದಿದ್ದಲ್ಲಿ ಜಿಲ್ಲೆಯಲ್ಲಿ ಜಾತಿ ಜಾತಿಗಳ ಮಧ್ಯೆ ಕಲಹವುಂಟಾಗಲಿದೆ ಎಂಬ ವಿಷಯವನ್ನು ಮನವರಿಕೆ ಮಾಡಿ ಉತ್ತಮ ಭವಿಷ್ಯಕ್ಕೆ ಪಣ ತೊಡಬೇಕಾಗಿದೆ.

ಮಾತೆ ಕಾವೇರಿ ಹಾಗೂ ಜಿಲ್ಲೆಯ ದೇವಾನು ದೇವತೆಗಳ ಆಶೀರ್ವಾದ ಪಡೆದು ಕಾವೇರಿಯಲ್ಲಿ ಮಿಂದು ಶುದ್ಧ ಮನಸ್ಸಿನಿಂದ ಎದ್ದು ಸುಭದ್ರವಾದ ಜಿಲ್ಲೆಯನ್ನು ನಿರ್ಮಿಸಲಿ.

? ಎಂ. ಎ ವಸಂತ, ಸುಂಟಿಕೊಪ್ಪ-ಕೊಡಗು.