ಪೊನ್ನಂಪೇಟೆ, ಡಿ. 15: ತಮಿಳುನಾಡು ಮುಖ್ಯಮಂತ್ರಿ ಯಾಗಿದ್ದ ಜಯಲಲಿತಾ ಅವರ ನಿಧನದಿಂದಾಗಿ ತಮಿಳುನಾಡು ರಾಜ್ಯಾದ್ಯಂತ ಅಭಿಮಾನಿಗಳು ಅಮ್ಮನಿಷ್ಠೆ ತೋರುತ್ತಿರುವಂತೆ ಕೊಡಗಿನಲ್ಲೂ ಅಮ್ಮನ ಅಭಿಮಾನಿಗಳು ತಮ್ಮ ಆರಾಧ್ಯರಾಗಿದ್ದ ಜಯಲಲಿತಾ ಅವರ ಸಾವಿಗೆ ವಿವಿಧ ರೀತಿಯಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ತಮಿಳುನಾಡು ಮೂಲದವರು ನೆಲೆಸಿರುವ ಜಿಲ್ಲೆಯ ವಿವಿಧೆಡೆ ಈ ಅಮ್ಮನಿಷ್ಠೆ ಪ್ರದರ್ಶನವಾಗುತ್ತಿದ್ದು ಅದರಲ್ಲೂ ದಕ್ಷಿಣ ಕೊಡಗಿನ ಕೆಲವೆಡೆ ತಮಿಳು ಮೂಲದವರು ಜಯಲಲಿತಾ ಅವರ ಸಾವಿಗೆ ಅತೀವ ದು:ಖ ತೋರ್ಪಡಿಸಿದ್ದಾರೆ. ತಮಿಳುನಾಡಿ ನವರು ಹೆಚ್ಚಾಗಿ ನೆಲೆಸಿರುವ ಹೈಸೊಡ್ಲೂರು ಸಮೀಪದ ಟಿ. ಎಸ್ಟೇಟ್‍ನಲ್ಲೂ ಅಮ್ಮನ ಅಭಿಮಾನಿಗಳು ಭಾರದ ಲೋಕಕ್ಕೆ ತೆರಳಿದ ತಮ್ಮ ಪ್ರೀತಿಯ ಅಮ್ಮನ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಕೆಲವರು ಅಮ್ಮನ ಭಾವಚಿತ್ರವನ್ನು ಮನೆಯಲ್ಲಿಟ್ಟು ಪೂಜಿಸಿದರೆ, ಮತ್ತೆ ಕೆಲವರು ಕೇಶಮುಂಡನ ನಡೆಸಿ ಅಮ್ಮನಿಷ್ಠೆ ತೋರಿಸಿದ್ದಾರೆ.
ಪೊನ್ನಂಪೇಟೆ ಸಮೀಪದ ತೂಚಮಕೇರಿ ಯಲ್ಲಿರುವ ತಮಿಳುನಾಡು ಮೂಲದ ಮಹಿಳೆ ಯೊಬ್ಬರು ಜಯಲಲಿತಾ ಅವರ ಕಟ್ಟಾಭಿಮಾನಿಯಾಗಿದ್ದು, ಅವರ ಸಾವಿನಿಂದಾಗಿ ಅತೀವ ದು:ಖಿತರಾಗಿದ್ದರು. ಅಮ್ಮನಿಗಾಗಿ ಅವರ ನಿಧನ ನಂತರ ತಾನು ಏನಾದರೂ ಮಾಡಬೇಕು ಎಂದು ಸಂಕಲ್ಪಿಸಿಕೊಂಡ ಇವರು ತಮ್ಮ ತಲೆ ಕೂದಲು ಬೋಳಿಸಿ ಕೊಂಡು ‘ಅಮ್ಮನಿಷ್ಠೆ’ ಮೆರೆದಿದ್ದಾರೆ. ತೂಚಮಕೇರಿಯಲ್ಲಿರುವ ಕಾವೇರಿ ಎಂಬ ಮಹಿಳೆಯೇ ಅಮ್ಮನಿಗಾಗಿ ಈ ರೀತಿ ಸಂತಾಪ ವ್ಯಕ್ತಪಡಿಸಿ ದವರಾಗಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಮೂಪರ್ ಜನಾಂಗಕ್ಕೆ ಸೇರಿದ ಕಾವೇರಿ ಅವರು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ತೂಚಮಕೇರಿಯಲ್ಲಿ ವಾಸವಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಮಿಳು ನಾಡು ತೊರೆದು ಕೊಡಗಿಗೆ ಬಂದಿದ್ದರೂ ಜಯಲಲಿತಾ ಅವರ ಬಗ್ಗೆ ಇವರಿಗೆ ವಿಶೇಷ ಅಭಿಮಾನ. ಕಾವೇರಿ ಅವರು ಅಪರೂಪ ವೆಂಬಂತೆ ತಮಿಳುನಾಡಿನಲ್ಲಿರುವ ಹುಟ್ಟೂರಿಗೆ ಹೋದ ಸಂದÀರ್ಭದಲ್ಲಿ ಚುನಾವಣಾ ಪ್ರಚಾರ ಸಭೆಗಳಿಗೆ ಮಧುರೈ ಭಾಗಕ್ಕೆ ಜಯಲಲಿತಾ ಅವರು ಬಂದಾಗ ಒಂದೆರೆಡು ಬಾರಿ ಅವರನ್ನು ಸಮೀಪದಿಂದ ನೋಡಿದ್ದನ್ನು ತಮ್ಮ ಜೀವಮಾನದ ‘ಭಾಗ್ಯದ ಕ್ಷಣ’ ಎಂದು ಹೇಳಿಕೊಳ್ಳುವ ಇವರು, ತಮಿಳುನಾಡಿನ ಬಡ ಜನತೆಯ ಪಾಲಿಗೆ ನಿಜರೂಪದಲ್ಲಿ ಅಮ್ಮನಾದ ಜಯಲಲಿತಾ ಅವರನ್ನು ತನಗೆ ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆರಂಭದಲ್ಲಿ ಅನಾರೋಗ್ಯದ ಕಾರಣ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ತೀವ್ರ ದು:ಖಿತರಾಗಿ ಕೂಲಿ ಕೆಲಸಕ್ಕೂ ತೆರಳದೆ ಅನ್ನ ನೀರು ಬಿಟ್ಟು ಅಮ್ಮನ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದ ಕಾವೇರಿ ಅವರು, ಅಮ್ಮ ಚೇತರಿಸಿ ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿಯನ್ನು ತಮಿಳು ವಾಹಿನಿಗಳಿಂದ ತಿಳಿದು ಸಂತೋಷಪಟ್ಟು ಮನೆಯಲ್ಲಿ ಪಾಯಸ ಮಾಡಿ ಹಂಚಿದ್ದರು. ಆದರೆ ಜಯಲಲಿತಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮತ್ತೆ ಅತೀವ ದುಃಖಿತರಾದ ಕಾವೇರಿ ಕಣ್ಣೀರು ಹಾಕುತ್ತಲೇ ಇಡೀ ದಿನ ಟಿ.ವಿ. ಮುಂದೆ ಕುಳಿತು ಕಾಲ ಕಳೆದರು.
ಮೂರು ದಿನಗಳ ಕಾಲ ಅಮ್ಮನಿಗಾಗಿ ಅನ್ನ ನೀರು ಬಿಟ್ಟು ದುಃಖದಲ್ಲೇ ದಿನದೂಡಿದ ಕಾವೇರಿ ಅವರು, 4ನೇ ದಿನ ತನ್ನ ತಲೆಕೂದಲನ್ನು ಸಮರ್ಪಿಸಿ ಅಮ್ಮನ ಸಾವಿಗೆ ಈ ರೀತಿಯಿಂದಾದರೂ ಸಂತಾಪ ಸಲ್ಲಿಸೋಣ ಎಂದು ನಿರ್ಧರಿಸಿದರು.
ಅಮ್ಮನಿಷ್ಠೆ ತೋರಿದ ಸಾಲಿನಲ್ಲಿ ಕಾವೇರಿಯಂತಹ ಕಟ್ಟಾಭಿಮಾನಿಗಳು ಸಾಕಷ್ಟಿದ್ದು, ಯಾವದೇ ಪ್ರಚಾರ ಬಯಸದೆ ಅಮ್ಮನ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.
- ರಫೀಕ್