ಮಡಿಕೇರಿ, ಜು. 29: ಬೇಸಿಗೆ ಬಂತೆಂದರೆ ಕೊಡಗಿನಾದ್ಯಂತ ವಿವಿಧ ಜನಾಂಗೀಯ ಕ್ರೀಡೆಗಳದ್ದೇ ದರ್ಬಾರ್..., ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವ ವಿಶ್ವದ ಗಮನ ಸೆಳೆದಿರುವ ಕೌಟುಂಬಿಕ ಹಾಕಿ ಉತ್ಸವದ ಮೂಲಕ ಕೊಡಗಿನಲ್ಲಿ ಉಂಟಾದ ಜನಾಂಗೀಯ ಕ್ರೀಡಾ ಸಂಚಲನ ಪ್ರಸ್ತುತ ಏಪ್ರಿಲ್ - ಮೇ ತಿಂಗಳಿನಲ್ಲಿ ಇಡೀ ಜಿಲ್ಲೆಯ ಉದ್ದಗಲದಲ್ಲೂ ಪಸರಿಸಿದೆ. ಜಿಲ್ಲೆಯಲ್ಲಿ ಬದುಕು ಕಾಣುತ್ತಿರುವ ಬಹುತೇಕ ಎಲ್ಲಾ ಜನಾಂಗ ಬಾಂಧವರು ಒಂದಲ್ಲಾ ಒಂದು ಕ್ರೀಡಾ ಕೂಟವನ್ನು ಆಯೋಜಿಸುವ ಮೂಲಕ ಎಲ್ಲರೂ ಒಂದಾಗಿ ಬೆರೆಯುತ್ತಿದ್ದಾರೆ.
ಹಾಕಿ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಮತ್ತಿತರ ಕ್ರೀಡೆಗಳ ಸಂಭ್ರಮ ಇತ್ತೀಚಿನ ವರ್ಷದಲ್ಲಿ ಕಂಡುಬರುತ್ತಿರುವ ಬೇಸಿಗೆಯ ಸಂದರ್ಭದ ಚಿತ್ರಣವಾದರೆ, ಮಳೆಗಾಲದಲ್ಲೂ ಕೊಡಗು ಕ್ರೀಡೆಯ ಸಂಭ್ರಮದಿಂದ ಹೊರತಾಗಿ ಉಳಿಯದು. ಮಳೆಗಾಲದಲ್ಲಿ ಕೊಡಗು ಮತ್ತೊಂದು ವಿಶೇಷತೆಯ ಮೂಲಕ ಗಮನ ಸೆಳೆಯುತ್ತದೆ. ಇದೇ ಕೆಸರಿನೋಕುಳಿಯೊಂದಿಗೆ ಗ್ರಾಮೀಣ ಸಂಸ್ಕøತಿಯ ಸೊಗಡನ್ನು ಪ್ರತಿಬಿಂಬಿಸುವ ಕೆಸರು ಗದ್ದೆ ಕ್ರೀಡೋತ್ಸವ....
ಈ ಹಿಂದೆ ಗ್ರಾಮ ಗ್ರಾಮಗಳಲ್ಲಿ ಇಡೀ ಗ್ರಾಮದವರನ್ನು ಮಳೆಗಾಲದ ಚಳಿಯ ನಡುವೆ ಮೈ ಬಿಸಿಯೇರಿಸುವಂತೆ ನಡೆದುಕೊಂಡು ಬರುತ್ತಿದ್ದ ಸಾಂಪ್ರದಾಯಿಕ ನಾಟಿ ಓಟ, ಕೆಸರು ಗದ್ದೆ ಕ್ರೀಡೆ ಆಧುನೀಕತೆಯ ಭರಾಟೆಯ ನಡುವೆ ಬಹುತೇಕ ಮರೆಯಾಗುತ್ತಾ ಬಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕ್ರೀಡೆ ಗ್ರಾಮ ಗ್ರಾಮಗಳಲ್ಲಿ ನಡೆಯದಿದ್ದರೂ, ಜಿಲ್ಲೆಯ ಹಲವೆಡೆ ಸಾರ್ವತ್ರಿಕವಾಗಿ ನಡೆಯುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿರುವದು ವಿಶೇಷವಾಗಿದೆ. ಜನತೆಯ ಯುವಪೀಳಿಗೆಯ ಆಸಕ್ತಿಗೆ ಪೂರಕವೆಂಬಂತೆ ಒಂದೆರಡು ಕಡೆಗಳಲ್ಲಿ ಮಾತ್ರ ನಡೆಯುತ್ತಿದ್ದ ಈ ಕೆಸರು ಗದ್ದೆ ಕ್ರೀಡಾಕೂಟ ಇದೀಗ ಜಿಲ್ಲೆಯ ಎಂಬತ್ತು ಕಡೆಗಳಿಗೆ ಪಸರಿಸಿದೆ.
ಈ ಹಿಂದಿನಿಂದಲೂ ಯೂತ್ ಹಾಸ್ಟೆಲ್, ಯುವ ಒಕ್ಕೂಟದ ಆಶ್ರಯದಲ್ಲಿ ಸತತವಾಗಿ ಮುಂದುವರಿದುಕೊಂಡು ಬಂದಿರುವ ಕಗ್ಗೋಡ್ಲುವಿನಲ್ಲಿ ನಡೆಯುವ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟಕ್ಕೆ ಈ ಬಾರಿ 25ನೇ ವರ್ಷದ ಸಂಭ್ರಮ..., ಕಗ್ಗೋಡ್ಲು ಮಾತ್ರವಲ್ಲದೆ, ಕಡಂಗ, ಅರಪಟ್ಟು, ಅರಮೇರಿ, ಬಿಟ್ಟಂಗಾಲ, ನಾಪೋಕ್ಲು, ಮುತ್ತಾರ್ಮುಡಿ, ಗೋಣಿಕೊಪ್ಪಲು, ಗಾಳಿಬೀಡು, ನಂಜರಾಯಪಟ್ಟಣ ಮತ್ತಿತರ ಕಡೆಗಳಲ್ಲೂ ಈ ಕ್ರೀಡಾ ಕೂಟ ಇತ್ತೀಚಿನ ವರ್ಷಗಳಲ್ಲಿ ನಡೆದಿವೆ.
ಪ್ರಸಕ್ತ ವರ್ಷ ಈಗಾಗಲೇ ಕಡಂಗ ಹಾಗೂ ಅರಮೇರಿಯಲ್ಲಿ ಈ ಕ್ರೀಡಾ ಸಂಭ್ರಮ ನಡೆದಿದೆ. ಇದೀಗ ತಾ. 30ರಂದು(ಇಂದು) ಸೋಮವಾರಪೇಟೆ ಕಲ್ಕಂದೂರು ಗ್ರಾಮದಲ್ಲಿ ವಕ್ಕಲಿಗ ಯುವ ವೇದಿಕೆ ಯಿಂದ ವಕ್ಕಲಿಗ ಜನಾಂಗದವರಿಗೆ ಅಲ್ಲಿನ ವೀರೇಶ್ ಅವರ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿತಗೊಂಡಿದೆ.
ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ವತಿಯಿಂದ ಬಿಟ್ಟಂಗಾಲದಲ್ಲಿ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ ಅವರ ಗದ್ದೆಯಲ್ಲಿ ನಾಲ್ಕನೇ ವರ್ಷದ ಕ್ರೀಡೋತ್ಸವ ನಿಗದಿ ಯಾಗಿದ್ದು, ತಾ. 31ರಂದು (ನಾಳೆ) ಬಿಟ್ಟಂಗಾಲದಲ್ಲಿ ಕೆಸರಿನೋಕುಳಿ ಯಾಟ ಜರುಗಲಿದೆ.
ಕಗ್ಗೋಡ್ಲುವಿನಲ್ಲಿ ದಿ|| ಸಿ.ಡಿ. ದೇವಯ್ಯ ಅವರ ಗದ್ದೆಯಲ್ಲಿ ನಡೆದು ಕೊಂಡು ಬರುತ್ತಿರುವ ರಾಜ್ಯಮಟ್ಟದ ಕ್ರೀಡಾಕೂಟ ಈ ಬಾರಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಆಗಸ್ಟ್ 13ರಂದು ನಿಗದಿಯಾಗಿದೆ. ಇಲ್ಲಿ ಸಾಂಪ್ರದಾಯಿಕ ನಾಟಿ ಓಟವೂ ಪರಂಪರಾಗತವಾಗಿ ಮುಂದುವರಿದುಕೊಂಡು ಬರುತ್ತಿದೆ. ಕದನೂರು ಅರಮೇರಿಯಲ್ಲಿ ಅಲ್ಲಿನ ಉದಿಯಂಡ ಡಿ. ಚಂಗಪ್ಪ ಅವರ ಗದ್ದೆಯಲ್ಲಿ ಈ ವರ್ಷ ಪ್ರಥಮ ಬಾರಿಗೆ ಲಿಮ್ರಾ ಅರಫ್ ಫ್ರೆಂಡ್ಸ್ ವತಿಯಿಂದ ರಾಜ್ಯಮಟ್ಟದ ಕೆಸರುಗದ್ದೆ ಫುಟ್‍ಬಾಲ್ ಹಾಗೂ ವಾಲಿಬಾಲ್ ಪಂದ್ಯಾಟ ಏರ್ಪಡಿಸಲಾಗಿದ್ದು, ಆಗಸ್ಟ್ 23ರಂದು ಈ ಕ್ರೀಡೆ ನಡೆಯಲಿದೆ. ಇನ್ನು ಗ್ರಾಮೀಣ ಪ್ರದೇಶದ ಹಲವೆಡೆ ಕೆಲವರು ತಮ್ಮ ಗದ್ದೆಯಲ್ಲಿ ಸ್ವಯಂ ಆಸಕ್ತಿಯಿಂದ ಊರಿನವರಿಗಾಗಿ ಕ್ರೀಡಾಕೂಟ ಏರ್ಪಡಿಸುತ್ತಿರುವದು ಮುಂದುವರಿದುಕೊಂಡು ಬಂದಿದೆ. ನಾಪೋಕ್ಲುವಿನ ಬೊಪ್ಪಂಡ ಕಾಶಿ ನಂಜಪ್ಪ ಅವರು ಕಳೆದ ಹಲವು ವರ್ಷ ಗಳಿಂದ ಈ ಕ್ರೀಡೆಯನ್ನು ಆಯೋಜಿಸಿ ಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಗೋಣಿಕೊಪ್ಪಲು ಕಳತ್ಮಾಡುವಿನಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವೃತ್ತಿನಿರತರಿಗೆ ಈ ಕ್ರೀಡಾ ಕೂಟವನ್ನು ಅಲ್ಲಿನ ಗೊಬ್ಬಡ ಬಾಲಕೃಷ್ಣ ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದ್ದು, ಈ ಕ್ರೀಡಾ ಕೂಟವು ಯಶಸ್ವಿಯಾಗಿತ್ತು. ಈ ಹಿಂದೆ ಮಾಯಾಮುಡಿಯ ಮಾನಿಲ್ ಅಯ್ಯಪ್ಪ ಸಂಘದಿಂದ ಗೋಣಿಕೊಪ್ಪಲುವಿನ ಮನೆಯಪಂಡ ಗದ್ದೆಯಲ್ಲಿ ಸುಮಾರು 10 ವರ್ಷ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಇದನ್ನು ಕಳೆದ ಮೂರು ವರ್ಷದಿಂದ ಪೊನ್ನಂಪೇಟೆ ಜೆ.ಸಿ.ಐ. ನಿಸರ್ಗದಿಂದ ಬಿಟ್ಟಂಗಾಲದಲ್ಲಿ ಮುಂದುವರಿಸಿ ಕೊಂಡು ಬರಲಾಗುತ್ತಿದೆ.
ಕೆಸರು ಮಣ್ಣು - ನೀರು ತುಂಬಿದ ಗದ್ದೆಯಲ್ಲಿ ಫುಟ್‍ಬಾಲ್, ವಾಲಿಬಾಲ್, ಹ್ಯಾಂಡ್‍ಬಾಲ್, ಓಟದ ಸ್ಪರ್ಧೆ, ಹಗ್ಗಜಗ್ಗಾಟ ಮತ್ತಿತರ ಪೈಪೋಟಿಗಳಲ್ಲಿ ಪ್ರಸ್ತುತ ಯುವ ಜನಾಂಗ ಅದರಲ್ಲೂ ಮಹಿಳೆಯರು ಕೂಡ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರು ವದು ಹಿರಿಯರಿಗೂ ಹಿಂದಿನ ಗತವೈಭವ ಮರುಕಳಿಸುತ್ತಿದೆ.
ಶಾಲಾ ಕಾಲೇಜುಗಳು, ವಿವಿಧ ಸಂಘ - ಸಂಸ್ಥೆ, ಕ್ಲಬ್‍ಗಳು ಕೇವಲ ಸಂಭ್ರಮ ಮಾತ್ರವಲ್ಲದೆ ಸ್ಪರ್ಧಾತ್ಮಕ ವಾಗಿಯೇ ಪೈಪೋಟಿ ನಡೆಸುವದು ನೋಡುಗರಿಗೂ ಮಳೆಗಾಲದಲ್ಲಿ ರಂಜನೆ ಒದಗಿಸುತ್ತದೆ. ಪ್ರಸಕ್ತ ವರ್ಷ ಮಳೆಯ ಪ್ರಮಾಣ ಕ್ಷೀಣ ಗೊಂಡಿದ್ದರೂ ಕೆಸರಿನೋಕುಳಿ ಯಾಟದ ಆಸಕ್ತಿ ಕಡಿಮೆಯಾಗಿಲ್ಲ. ಆಸಕ್ತರು ಕೆಸರಿನಾಟಕ್ಕೆ ಕಾಯುತ್ತಿದ್ದಾರೆ.