ಹುತ್ತರಿ ಹಬ್ಬ ಕೊಡಗಿನಲ್ಲಿ ಎಲ್ಲಿ ನೋಡಿದರೂ ಹುತ್ತರಿ ಸಡಗರ, ಮಕ್ಕಳಿಗೆ ಪಟಾಕಿ ಸಿಡಿಸುವ ಕಾತರ, ಎಲ್ಲಿಲ್ಲದ ಉತ್ಸಾಹ.

ಹುತ್ತರಿ ಎಂದರೆ ರೈತರು ತಾವು ವರ್ಷಪೂರ್ತಿ ಬೆಳೆದ ಧಾನ್ಯಲಕ್ಷ್ಮಿಯನ್ನು ತಮ್ಮ ಮನೆಗೆ ತಂದು ಪೂಜಿಸುವ ಒಂದು ಆಚರಣೆ. ಈ ಧಾನ್ಯಲಕ್ಷ್ಮಿಯ ಪೂಜೆಯನ್ನು ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಗಳಿಂದ, ಕ್ರಮಗಳಿಂದ, ಆಚಾರ ವಿಚಾರಗಳಿಂದ, ಹೆಸರಿನಿಂದ ಬೇರೆ ಬೇರೆ ಕಾಲಗಳಲ್ಲಿ ಆಚರಿಸಲಾಗುತ್ತದೆ. ಕೊಡಗಿನಾದ್ಯಂತ ಈ ಹಬ್ಬವನ್ನು ಏಕಕಾಲಕ್ಕೆ ನವೆಂಬರ್ ಅಥವಾ ಡಿಸಂಬರ್ ತಿಂಗಳಿನಲ್ಲಿ ಬರುವ ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯಂದು ಹುತ್ತರಿ ಹಬ್ಬವೆಂದು ಆಚರಿಸಲಾಗುತ್ತದೆ. (ಹುತ್ತರಿ ಎಂದರೆ ಕೊಡವ ಭಾಷೆಯಲ್ಲಿ ಪುತ್ತರಿ ಪುದಿಯ-ಅರಿ ಹೊಸ ಅಕ್ಕಿ ಎಂದರ್ಥ)

ಕೊಡಗಿನಲ್ಲಿ ಆಚರಿಸಲಾಗುವ ಕೆಲವು ಹಬ್ಬಗಳು ಪ್ರತ್ಯೇಕ ಜಾತಿ, ಧರ್ಮ, ಜನಾಂಗಕ್ಕೆ ಮಾತ್ರ ಸೀಮಿತವಾಗಿರುವದನ್ನು ಕಾಣಬಹುದಾಗಿದೆ. ಆದರೆ ಹುತ್ತರಿ ಹಬ್ಬ ಯಾವದೇ ಜಾತಿ, ಧರ್ಮ, ಜನಾಂಗ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬೆರೆತು ಆಚರಿಸುವ ಹಬ್ಬವೆಂದು ಹೆಸರುವಾಸಿಯಾಗಿದೆ.

ಹುತ್ತರಿ ಹಬ್ಬ ಬೇರೆ ಹಬ್ಬಗಳಂತೆ ಒಂದು ದಿನಕ್ಕೆ ಮಾತ್ರ ಸೀಮಿತವಾದ ಹಬ್ಬವಲ್ಲ. ಇದು 10-12 ದಿನಗಳ ಕಾಲ ಅತೀ ವಿಜೃಂಭಣೆಯಿಂದ ಆಚÀರಿಸಲ್ಪಡುತ್ತದೆ.

ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ನಿಗದಿಪಡಿಸುವ ಒಂದು ವಿಶೇಷ ಕ್ರಮವಿದೆ. ಕೊಡಗಿನ ಕುಲದೈವವೆಂದೇ ಪ್ರಸಿದ್ಧಿ ಪಡೆದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಹುತ್ತರಿ ಹಬ್ಬಕ್ಕೆ 15 ದಿನ ಮುಂಚಿತವಾಗಿ ನಿಗದಿಪಡಿಸಿದ ದಿನದಂದು ಹಿಂದಿನ ಆಚರಣೆಯಂತೆ ಅದಕ್ಕೆ ಸಂಬಂಧಿಸಿದ ಕುಟುಂಬಸ್ಥರಿಂದ ಗುರುತಿಸಲ್ಪಟ್ಟವರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಜೋತಿಷ್ಯಶಾಸ್ತ್ರದ ಸಹಾಯದಿಂದ ದಿನ, ಸಮಯ, ಘಳಿಗೆಯನ್ನು ನಿಶ್ಚಯಿಸುತ್ತಾರೆ. ಅದರಂತೆ ಆ ದಿನ ಸಮಯಕ್ಕೆ ಸರಿಯಾಗಿ ಮೊದಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಕೃತಿಕಾ ನಕ್ಷತ್ರದಂದು ಹುತ್ತರಿ ಕಲಾಡ್ಚ ಹಬ್ಬವನ್ನು ನಡೆಸಲಾಗುತ್ತದೆ. ಅನಂತರ ನಿಗದಿತ ಸುಮುಹೂರ್ತದಲ್ಲಿ ರೈತರು ಬೆಳೆದ ಭತ್ತದ ತೆನೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಕತ್ತರಿಸಿ ತಂದು ದೇವಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.

ಇಲ್ಲಿ ಪೂಜಿಸಿದ ಅನಂತರ ನಿಗದಿಪಡಿಸಿದ ಸಮಯದಲ್ಲಿ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ಮನೆಯ ಯಜಮಾನ ತಮ್ಮ ಸಾಂಪ್ರದಾಯಕ ಉಡುಪು ಧರಿಸಿ, ಕುಪ್ಪಸ ತೊಟ್ಟು, ರೇಷ್ಮೆಯ ನಡುಪಟ್ಟಿ ಬಿಗಿದು ಅದರಲ್ಲಿ ಪೀಚೆ ಕತ್ತಿಯನ್ನು ಸಿಕ್ಕಿಸಿ, ರಾಜ ಗಾಂಭೀರ್ಯದಿಂದ ಇಷ್ಟ ದೇವತೆಗಳನ್ನು ಪ್ರಾರ್ಥಿಸುತ್ತಾರೆ. ಅನಂತರ ಮಾವು, ಅಶ್ವತ್ಥ, ಗೇರು ಸೇರಿ 5 ಮರದ ಎಲೆ ಹಾಗೂ ನಿರ್ದಿಷ್ಟ ಜಾತಿಯ ಮರದಿಂದ ಸಿಗುವ ನಾರನ್ನು ತಂದು ನೆರೆ(ಸುರುಳಿ) ಕಟ್ಟುತ್ತಾರೆ. ಇದಾದ ಅನಂತರ ನೆಲ್ಲಕ್ಕಿಬಾಡೆ (ಮನೆಯ ನಡು ಕೋಣೆ) ಯಲ್ಲಿ ಮನೆ-ಮಂದಿಯೆಲ್ಲ ಸೇರಿ ಕುಲದೇವರನ್ನು ಆರಾಧಿಸಿ ಭತ್ತದ ಗದ್ದೆಗೆ ತೆರಳುತ್ತಾರೆ. ಪ್ರಥಮ ಕುಯ್ಲಿಗೆಂದು ಮೀಸಲಿಟ್ಟ ಗದ್ದೆಯಲ್ಲಿ ಕುಟುಂಬದ ಹಿರಿಯ ಭತ್ತದ ಪೈರನ್ನು ಪೂಜಿಸಿ ಅದಕ್ಕೆ ಹಣ್ಣು-ಕಾಯಿ, ಹಾಲು-ಜೇನು ಮುಂತಾದವುಗಳನ್ನು ಸಮರ್ಪಿಸುತ್ತಾರೆ. “ಪೆÇಲಿ ಪೆÇಲಿ ದೇವಾ” ಎಂಬ ಏರಿದ ದನಿಯಲ್ಲಿ ಕೂಗುತ್ತ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯಲ್ಲಿಟ್ಟು ಪೂಜಿಸಿ ತೆನೆಯಲ್ಲಿದ್ದ ಭತ್ತವನ್ನು ಸುಲಿದು ಪಾಯಸಕ್ಕೆ ಹಾಕಿ ಎಲ್ಲರೂ ಸೇರಿ ಸವಿಯುಣ್ಣುವದೇ ಹುತ್ತರಿ ಹಬ್ಬದ ಪ್ರಮುಖ ಅಂಶ.

ಈ ಹಬ್ಬಕ್ಕೆಂದೇ ವಿಶೇಷ ತಯಾರಿ ನಡೆಸಲಾಗುತ್ತದೆ. ಹುತ್ತರಿ ಹಬ್ಬದ ಮೂರು ದಿನ ಮುಂಚಿತವಾಗಿ ಗ್ರಾಮಗಳ ಮಂದ್ ( ಕೋಲಾಟಕ್ಕೆಂದೇ ನಿಗದಿಪಡಿಸಿದ ಸ್ಥಳ) ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಊರಿನ ಪುರುಷರು ಸೇರಿ ದೇವರ ಹೆಸರಿನಲ್ಲಿ ಕೋಲಾಟ ನಡೆಸುವ ಕ್ರಮವಿದೆ. ಹುತ್ತರಿ ಹಬ್ಬದಂದು ತೆನೆ ತೆಗೆಯುವ ಸಮಯಕ್ಕೆ ದೇವರ ನೈವೇದ್ಯಕ್ಕೆಂದು ತಂಬಿಟ್ಟು ಎಂಬ ವಿಶೇಷ ತಿನಿಸು ತಯಾರಿಸಲಾಗುತ್ತದೆ. ಇದಕ್ಕೆ ಹುರಿದ ಕುಸಲಕ್ಕಿಯ ಹುಡಿ, ಬಾಳೆ ಹಣ್ಣು, ಎಳ್ಳು, ಹುರಿ ಗÀಡಲೆ, ಏಲಕ್ಕಿ ಪುಡಿ, ಬೆಲ್ಲದ ಜೋನಿಯೊಂದಿಗೆ ಸೇರಿಸಿ ಉಂಡೆಮಾಡಿ ಇಡಲಾಗುವುದು. ಹುತ್ತರಿ ಹಬ್ಬಕ್ಕೆ ಆಗಮಿಸುವ ಬಂಧು ಮಿತ್ರರಿಗೆ, ಸ್ನೇಹಿತರಿಗೆ ಎಲ್ಲರಿಗೂ ಇದು ಬಹಳ ಪ್ರಿಯವಾದ ತಿನಿಸು ಎಂದೇ ಪ್ರಸಿದ್ಧಿ ಪಡೆದಿದೆ.

ಧಾನ್ಯಲಕ್ಷ್ಮಿಯ ಪೂಜೆಯ ಅನಂತರ ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಪದ್ಧತಿಯಂತೆ 5 ಬಗೆಯ ಮರದ ಎಲೆಯ ಸುರುಳಿ ಮಾಡಿರುವ ಮಧ್ಯೆ ಈ ತೆನೆಯನ್ನು ಸೇರಿಸಿ ಕಟ್ಟಲಾಗುತ್ತದೆ. ಈ ತೆನೆಯನ್ನು ಮನೆ, ದೇವಾಲಯ, ದೇವಸ್ಥಾನ, ವಾಹನ, ತೋಟ, ಅಂಗಡಿ ಸೇರಿದಂತೆ ಮನುಷ್ಯನ ಅವಶ್ಯಕತೆಗಳ ಸ್ಥಳಗಳಲ್ಲಿ ಶುಭ ಸೂಚಕವಾಗಿ ಕಟ್ಟಲಾಗುತ್ತದೆ. ಹುತ್ತರಿ ಹಬ್ಬದಂದು ಸಾಮಾನ್ಯವಾಗಿ ಎಲ್ಲರೂ ಸಸ್ಯಾಹಾರದ ಅಡುಗೆಯನ್ನೆ ಅದ್ಧೂರಿಯಿಂದ ಸಿದ್ಧಪಡಿಸುತ್ತಾರೆ. ಹುತ್ತರಿ ಹಬ್ಬಕ್ಕೆಂದು ದೂರದ ಊರುಗಳಲ್ಲಿ ನೌಕರಿಯಲ್ಲಿರುವವರು, ಬೇರೆ ಬೇರೆ ಕಾರಣಗಳಿಂದ ಕುಟುಂಬ ವರ್ಗದಿಂದ ದೂರವಿರುವವರು ತಮ್ಮ-ತಮ್ಮ ಮನೆಗಳಿಗೆ ಬಂದು ಎಲ್ಲರೂ ಒಟ್ಟಿಗೆ ಸೇರಿ ಹಬ್ಬ ಆಚರಿಸುವದು ರೂಢಿ.

ಕೊಡಗಿನಲ್ಲಿ ಹಬ್ಬ ಹರಿದಿನಗಳ ಸಮಯದಲ್ಲಿ ಕಿರಿಯರು ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವ ಸಂಸ್ಕøತಿಯನ್ನು ಹೆಚ್ಚಾಗಿ ಕಾಣಬಹುದು. ಇದರಿಂದ ತಮ್ಮೊಳಗಿರುವ ದ್ವೇಷ, ಅಸೂಯೆ ಹೋಗಲಾಡಿಸಿ ಸಮಾಜದಲ್ಲಿ ಸಾಮರಸ್ಯ, ಒಗ್ಗಟ್ಟು ಮೂಡಿಸಲು ಸಹಕಾರಿಯಾಗಲಿದೆ ಎಂಬುದು ಹಿರಿಯರ ಅಭಿಪ್ರಾಯ.

ಹುತ್ತರಿ ಹಬ್ಬದ ಇನ್ನುಳಿದ ಭಾಗ ಕೋಲಾಟದ ಸಂಭ್ರಮ. ಹುತ್ತರಿ ಹಬ್ಬ ಕಳೆದ ಮೊದಲ ದಿನ ಆಯಾಯ ಗ್ರಾಮಗಳಿಗೆ ಸಂಬಂಧಪಟ್ಟ ನಿಗದಿತ ಸ್ಥಳಗಳಲ್ಲಿ (ಈ ಸ್ಥಳಗಳನ್ನು ಮಂದ್ ಎಂದು ಕರೆಯಲಾಗುವುದು. ಇವುಗಳಲ್ಲಿ ಸುತ್ತಮುತ್ತಲಿನ ಜನರು ಸೇರಿ ಕೋಲಾಟ ನಡೆಸುವುದು ಕೇರಿ ಮಂದ್, ಊರಿನ ಜನ ಸೇರಿ ಕೋಲಾಟ ನಡೆಸುವ ಸ್ಥಳ ಊರು ಮಂದ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಾಡಿನ ಜನ ಸೇರಿ ಕೋಲಾಟ ನಡೆಸುವ ಸ್ಥಳಕ್ಕೆ ನಾಡ್ ಮಂದ್ ಎಂದು ಕರೆಯಲಾಗುವದು.) ಎರಡನೇ ದಿನ ಊರು ಮಂದ್ ಮತ್ತು ಮೂರನೇ ದಿನ ನಾಡ್ ಮಂದ್‍ನಲ್ಲಿ ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಸೇರಿ ಕೋಲಾಟ ನಡೆಸುವ ಕ್ರಮವಿದೆ. ಈ ಕೋಲಾಟಗಳು ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯುವ ದುಂಟು. ಇಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಹೆಚ್ಚಿನ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಕೋಲಾಟದ ಮುಂದಿನ ಕಾರ್ಯವೇ ಕೋಲು (ಬೆತ್ತದ ಉದ್ದನೆಯ ಬಾರು ಕೋಲು) ಒಪ್ಪಿಸುವುದು. ಕೋಲು ಒಪ್ಪಿಸುವದೆಂದರೆ ಕೋಲಾಟಕ್ಕೆ ಬಳಸಿದ ಕೋಲುಗಳನ್ನು ತಮ್ಮ ತಮ್ಮ ಗ್ರಾಮಗಳಲ್ಲಿನ ದೇವಾಲಯಗಳಲ್ಲಿ ಪ್ರಾರ್ಥಿಸಿ ಶೇಖರಿಸಿಡುವದು. ಈ ಕೋಲುಗಳನ್ನು ಹುತ್ತರಿ ಹಬ್ಬದ ಕೋಲಾಟಕ್ಕೆ ಮಾತ್ರ ಬಳಸುವದರಿಂದ ಮುಂದಿನ ವರ್ಷದ ಹುತ್ತರಿ ಹಬ್ಬಕ್ಕೆ ಮಾತ್ರ ಇವುಗಳನ್ನು ಬಳಸಲಾಗುವದು. ಕೊಡಗಿನಲ್ಲಿ ನಡೆಯುವ ಹಬ್ಬಗಳು, ಆಚಾರ ವಿಚಾರಗಳು, ಪದ್ಧತಿ ಪರಂಪರೆಗಳನ್ನು ಹಿಂದಿನಂತೆ ಉಳಿಸಿ ಬೆಳೆಸಿಕೊಂಡು ಬಂದಿರುವದರಿಂದ ಕೊಡಗಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ಲಭಿಸಿದೆ ಎಂಬುದು ಊರಿನ ಹಿರಿಯರ ಅಭಿಪ್ರಾಯವಾಗಿದೆ.