ಮಡಿಕೇರಿ, ಸೆ. 6: ಕೊಡಗಿನಲ್ಲಿ ಕೆಲವರ ಕುಮ್ಮಕ್ಕಿನಿಂದ ಮಾವೋವಾದಿ ನಕ್ಸಲರು ‘ರೆಡ್ಕಾರಿಡಾರ್' ವಿಸ್ತರಣೆ ನಡೆಸುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೂಪೇಶ್ ಎನ್ನುವ ಕೇರಳದ ಕೊಚ್ಚಿನ್ ಮೂಲದ ನಕ್ಸಲೀಯನನ್ನು ಕೊಯಮತ್ತೂರಿನಲ್ಲಿ ಬಂಧಿಸಿ, ಕೊಡಗಿನ ನ್ಯಾಯಾಲಯಕ್ಕೆ ಕಳೆದ ಒಂದು ವರ್ಷದಿಂದ ಸತತವಾಗಿ ಹಾಜರು ಪಡಿಸುತ್ತಿರುವ ವಿಚಾರವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ರೂಪೇಶ್ ತಾನಾಗಿ ಕೊಡಗಿಗೆ ಬಂದವನಲ್ಲ. ಇದಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಈ ದುಷ್ಟ ಪರಂಪರೆಯನ್ನು ಕೊಡಗಿನೊಳಗೆ ಕರೆ ತಂದವರು ಕೆಲವರಿದ್ದಾರೆ ಎಂದಿದ್ದಾರೆ. ಕೊಡಗಿನ ಮೂಲ ನಿವಾಸಿಗಳಾದ ಕೊಡವ ಕ್ಷಾತ್ರ ಬುಡಕಟ್ಟು ಜನರು ಕಟ್ಟಾ ರಾಷ್ಟ್ರಪ್ರೇಮಿಗಳು, ರಾಷ್ಟ್ರೀಯವಾದಿಗಳು ಮತ್ತು ಅಪ್ರತಿಮ ದೇಶಭಕ್ತರು ಹಾಗೂ ಸೇನಾ ಹಿನ್ನೆಲೆ ಇರುವವರು. ಈ ಜನಾಂಗ ಎಡ ಪಂಥ ಯಾ ನಕ್ಸಲಿಸಮ್ಗೆ ಒಲವು ತೋರಿದವರಲ್ಲ. 1969ರಲ್ಲಿ ಕೇರಳದ ಅಜಿತಾ ಎನ್ನುವ ಮಹಿಳೆಯ ನೇತೃತ್ವದಲ್ಲಿ ಕೇರಳ ಕೊಡಗು ಗಡಿಗಳಾದ ವಯನಾಡಿನ ಮಾನಂದವಾಡಿ, ಕುಟ್ಟ, ಕಾಸರಗೋಡು, ಕರಿಕೆಗಳಲ್ಲಿ ಚಟುವಟಿಕೆ ನಡೆಯುತ್ತಿದ್ದರೂ ಅದನ್ನು ಭದ್ರತಾ ಪಡೆಗಳೊಂದಿಗೆ ಸೇರಿಕೊಂಡು ಕೊಡವರು ಎಡೆಮುರಿ ಕಟ್ಟಿದರು.
ಕಾಲೂರು, ಭಾಗಮಂಡಲ, ದೇವರಕೊಲ್ಲಿ, ಬಿರುನಾಣಿ, ನ್ೀಟ್ಕುಂದ್, ಯವಕಪಾಡಿ, ಚೇಲವಾರ, ಬಿ.ಶೆಟ್ಟಿಗೇರಿ, ಕುಟ್ಟ, ತಿತಿಮತಿ, ಕೊಡಗು ಸಕಲೇಶಪುರ ಗಡಿಯಾದ ಬಿಸಿಲೆ, ಪುಷ್ಪಗಿರಿ ಮತ್ತು ಎಡವನಾಡು ಇತ್ಯಾದಿ ಕಡೆಗಳಲ್ಲಿ ಗುಪ್ತ ಸಭೆಗಳು ನಡೆದ ವರದಿ ಮತ್ತು ಅಪರಿಚಿತರು ಸುಳಿದಾಡಿದ ವರದಿಗಳು ಇಲಾಖೆಯಲ್ಲಿದೆ. ಅಲ್ಲದೆ 2012 ರಲ್ಲಿ ದಕ್ಷಿಣ ಭಾರತದ ನಕ್ಸಲೀಯ ಕಮಾಂಡರ್ ತಮಿಳುನಾಡು ಮೂಲದ ವ್ಯಕ್ತಿ ಕುಟ್ಟದ ಹೂವಿನ ಕಾಡ್ ಎಸ್ಟೇಟ್ನಲ್ಲಿ ಕೆಂಬಾವುಟ ನೆಟ್ಟು ರಾತ್ರಿ ಗುಪ್ತ ಸಭೆ ನಡೆಸಿದ ವರದಿಯೂ ಬಂದಿತ್ತು. ಇದಕ್ಕೆಲ್ಲಾ ಸಿ.ಎನ್.ಸಿ ಪ್ರತಿಕ್ರಿಯೆ ನೀಡಿ ಎಚ್ಚರಿಸುತ್ತಾ ಬಂತು. ಮುಂದೆ ದಕ್ಷಿಣ ಭಾರತದ ನಕ್ಸಲೀಯ ಕಮಾಂಡರ್ಗಳನ್ನು ಕರೆಯಿಸಿ ಗುಪ್ತ ಸಭೆ ನಡೆಸಿದ ಫಲವೇ ಈ ರೂಪೇಶ್ ಕೊಡಗಿಗೆ ಒಕ್ಕರಿಸಿ ಇಲ್ಲಿ ಭಾರೀ ಸ್ಪೋಟಕ ಮತ್ತು ಮದ್ದುಗುಂಡುಗಳನ್ನು ತಯಾರಿಸಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಿದ. ಇದರಲ್ಲಿ ಸ್ಥಳೀಯ ಕೆಲವರನ್ನು ಸ್ಟ್ರಾಟಜಿಕ್ ಮತ್ತು ಲಾಜಿಸ್ಟಿಕ್ ಬೆಂಬಲಕ್ಕಾಗಿ ಅವಲಂಭಿಸತೊಡಗಿದರು. ಇದರೊಂದಿಗೆ ಜಗತ್ತಿಗೆ ಮಾರಕವಾಗಿರುವ “ಇಸಿಸ್” / “ಇಸಿಲ್” ನ ಕಬಂದ ಬಾಹುಗಳಾದ ಇಂಡಿಯನ್ ಮುಜಾಹಿದ್ದೀನ್ ಮತ್ತು ಸಿಮಿ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಅಬ್ದುಲ್ ನಾಸಿರ್ ಮದನಿಗೂ ಇಲ್ಲಿ ತಾಣ ನಿರ್ಮಿಸಿ ಈ ಪ್ರಶಾಂತ ಕೊಡಗಿನ ವ್ಯೂಹಾತ್ಮಕ ಸ್ಥಳಗಳನ್ನು ಚೀನಾದ ಸಿಲ್ಕ್ ರೂಟ್ ಮಾದರಿ (ಸೆಂಟ್ರಲ್ ಏಷ್ಯ ಮತ್ತು ಯುರೋಪ್ ಗೆ ಸಂಪರ್ಕ ಸೇತುವೆ) ಮಾದರಿ ರೆಡ್ ಕಾರಿಡಾರ್ + “ಇಸಿಸ್” ಡಾರ್ಕ್ ಕಾರಿಡಾರ್ ಮಾಡಲು ರೂಪು ರೇಷೆ ನಿರ್ಮಾಣ ಮಾಡಿದ್ದು ನಕ್ಸಲ್ ಪದಾರ್ಪಣೆಗೆ ದಾರಿ ಮಾಡುವ ಮೂಲಕ “ಇಸಿಲ್” ಬೆಳವಣಿಗೆಗೆ ಲಾಂಚ್ ಪ್ಯಾಡ್ ಆಗಿದ್ದಾರೆ ಎಂದು ನಾಚಪ್ಪ ದೂರಿದ್ದಾರೆ.
ಕೋವಿ ಹಕ್ಕು ಕಸಿಯುವ ಹುನ್ನಾರ
ಕೊಡವರ ಕೋವಿ ವಿನಾಯಿತಿ ಹಕ್ಕನ್ನು ಕಿತ್ತು ನಕ್ಸಲ್ವಾದಿಗಳ ಕೈಗೆ ಕೊಡುವ ಸಂಚು ನಡೆದಿದೆ. ಕೊಡವರಿಂದ ಆ ಹಕ್ಕು ಕಸಿಯಲ್ಪಟ್ಟರೆ ನಕ್ಸಲಿಸಂ ಬಿತ್ತಲು ಮಾರ್ಗ ಸುಲಭ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರವಿದೆ.
ಹಿಂದೆ ಎನ್ಕೌಂಟರ್ನಲ್ಲಿ ಮೃತರಾದ ನಕ್ಸಲ್ ನಾಯಕ ಸಾಕೇತ್ ರಾಜನ್, ಹಾಜಿಮ ಮುಂತಾದವರ ಶ್ರದ್ದಾಂಜಲಿ ಸಭೆಗಳಲ್ಲಿ ಕೊಡಗಿನಲ್ಲಿರುವವರೊಬ್ಬರು ಗೌರಿ ಲಂಕೇಶ್ ಜೊತೆ ಭಾಗವಹಿಸಿದುದನ್ನು ನೆನೆಯಲಾಗಿದೆ.
ಇನ್ನು ಕರ್ನಾಟಕದಲ್ಲಿ ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಚಿಕ್ಕಮಗಳೂರಿನಲ್ಲಿ ಎನ್ಕೌಂಟರ್ನಿಂದ ಬಚಾವಾಗಿ ಶರಣಾಗತನಾದ ನಕ್ಸಲ್ ವ್ಯಕ್ತಿಯೊಬ್ಬನನ್ನು ಕೊಡಗಿನೊಳಗೆ ಕರೆತರಲಾಗಿದೆ. ಆತನಿಗೆ ಖಾಯಂ ವಿಳಾಸ ನೀಡಿ ಎರಡನೇ ಭೂ ಹೋರಾಟವೆಂಬ ನಾಟಕವಾಡುತ್ತಾ ರಕ್ಷಣೆ ನೀಡಲಾಗುತ್ತಿದೆ ಎಂದಿದ್ದಾರೆ.
ಹೊಸತೋಟದಲ್ಲಿ ಬಾಂಬ್ ಸ್ಪೋಟದ ರೂವಾರಿ ತಡಿಯಂಡವೀಡು ನಝೀರ್ ಕುಂಬೂರಿನಲ್ಲಿ ತನ್ನ ಅಡಗುತಾಣ ನಿರ್ಮಿಸಿಕೊಂಡು ಇಲ್ಲಿಯೇ ಬಾಂಬ್ ತಯಾರಿಸಿ ಸರಣಿ ಸ್ಪೋಟಕ್ಕೆ ಬಳಸಿದ್ದೇ ಅಲ್ಲದೇ ಇಲ್ಲಿನ ಸುಮಾರು 300 ಕ್ಕೂ ಅಧಿಕ ಜಿಹಾದಿಗಳಿಗೆ ತರಬೇತಿ ನೀಡಿರುವದು ಆತ ಬಾಂಗ್ಲ್ಲಾ ಗಡಿಯಲ್ಲಿ ಬಂಧಿತನಾದ ನಂತರ ಬಹಿರಂಗವಾಯಿತು. ಈತನ ಚಟುವಟಿಕೆಗೆ ಪೂರಕವಾಗಿದ್ದ ಮದನಿ ಮುಂತಾದವರ ಚಲನವಲನವೂ ಸೇರಿದಂತೆ ಸಾಕ್ಷಿಗಳಾಗಿದ್ದ ಸ್ಥಳೀಯ ಮಹೇಂದ್ರ ಮುಂತಾದವರನ್ನು ಬೆದರಿಸಿ ಸಾಕ್ಷಿ ನಾಶ ಮಾಡಲು ವರದಿಗಾರ್ತಿಯೊಬ್ಬಳು ಬಂದಾಗ ಇಲ್ಲಿನ ಪತ್ರಕರ್ತನೊಬ್ಬ ಆಕೆಯನ್ನು ಕರೆದುಕೊಂಡು ಕೊಡಗಿನಲ್ಲಿ ಓಡಾಡಿರುವದು ಆತಂಕಕಾರಿ ಎಂದಿದ್ದಾರೆ. ಅಲ್ಲದೇ ಆಕೆಗೆ ಜಾಮೀನು ನಿಂತವರು ಇಲ್ಲಿಯವರೇ ಮತ್ತಿಬ್ಬರು. ಆದ್ದರಿಂದ ಇವರ ಜಾಲದ ವಿಸ್ತಾರ ಮತ್ತು ಆಳದ ಬಗ್ಗೆ ಲಘುವಾಗಿ ನೋಡದೆ ಇವರ ಚಟುವಟಿಕೆ ಬಗ್ಗೆ ನಿಗಾ ವಹಿಸಬೇಕಾಗಿದೆ.
ಕೊಯಮತ್ತೂರಿನಲ್ಲಿ ಸೆರೆಯಾದ ರೂಪೇಶನಿಗೆ ಜಾಮೀನು ಅರ್ಜಿಯನ್ನು ಪೂರ್ವ ನಿಯೋಜನೆಯಂತೆ ಇಲ್ಲಿಯ ವಕೀಲರೇ ಸಲ್ಲಿಸಿದ್ದು ಆತನನ್ನು ಕೊಯಮತ್ತೂರು ಜೈಲಿನಿಂದ ವರ್ಗಾಯಿಸಿ ಕೊಡಗಿನ ಜೈಲಿನಲ್ಲಿರಿಸಿ ರಾಜಕೀಯ ಕೈದಿಯಂತೆ ನೋಡಿಕೊಳ್ಳಬೇಕೆಂದು 21-07-2016 ರಂದು ಅರ್ಜಿ ಸಲ್ಲಿಸಲಾಗಿದೆ.
ಇವರು 100 ವರ್ಷದ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ಕಸ್ತೂರಿರಂಗನ್ ವರದಿ ವಿರೋಧಿಸಿದರು. ಕಾರಣ ಕಸ್ತೂರಿ ರಂಗನ್ ವರದಿ ಜಾರಿಯಾದರೆ 365 ದಿವಸ 24x7 ಅರಣ್ಯ ಟಾಸ್ಕ್ ಫೋರ್ಸ್ ಕೊಡಗಿನ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ವ್ಯಾಪಕವಾಗಿ ಗಸ್ತು ತಿರುಗುತ್ತಾ ಭದ್ರತೆ ನೀಡುತ್ತದೆ.
2002 ರಲ್ಲಿ ಕೊಡವ ಸಾಂಸ್ಕøತಿಕ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ತಡಿಯಂಡ ಮೋಳ್ ತಪ್ಪಲಿನಲ್ಲಿ ಸಿ.ಎನ್.ಸಿ ಸಂಘಟನೆ ಜಾಗ ಮಂಜೂರಾತಿಗೆ ಮುಂದಾದಾಗ ಈ ಕೂಟ ವಿರೋಧ ಮಾಡಿತು. ಒಂದು ವೇಳೆ ಅಲ್ಲಿ ಕೊಡವ ಸಾಂಸ್ಕøತಿಕ ಅಧ್ಯಯನ ಕೇಂದ್ರ (ವಿಶ್ವ ವಿದ್ಯಾನಿಲಯ) ತಲೆ ಎತ್ತುತ್ತಿದ್ದಿದ್ದರೆ ಅಲ್ಲಿ 24x7 ಕೊಡವರು ನಿರಂತರ ಚಟುವಟಿಕೆಯಿಂದ ಹದ್ದಿನ ಕಣ್ಣಿನ ಮೂಲಕ ನಕ್ಸಲೀಯ ಚಲನವಲನದ ಬಗ್ಗೆ ನಿಗಾ ಇಡುತ್ತಾರೆ.
ದೇವಟ್ ಪರಂಬ್ ಶ್ರದ್ದಾ ಕೇಂದ್ರ ಸ್ಮಾರಕ ವಿರೋಧಕ್ಕೆ ಕಾರಣ ಕೊಡವ ಪೂರ್ವಿಕರ ನರಮೇಧ ನಡೆದ ದುರಂತ ಸ್ಥಳದಲ್ಲಿ ಪೂಜೆ ಪುನಸ್ಕಾರಕ್ಕಾಗಿ ಕೊಡವರ ಚಟುವಟಿಕೆ ಅತಿಯಾದಷ್ಟು ರಾಷ್ಟ್ರ ಪ್ರೇಮಿ ಕೊಡವರ ಎದುರು ಈ ನಕ್ಸಲರು ಬಲಹೀನರಾಗುತ್ತಾರೆ. ಮುಂದೊಂದು ದಿನ ಇಸಿಸ್ ಮತ್ತು ನಕ್ಸಲ್ ವಾದವನ್ನು ರಾಜಾಶ್ರಯದಲ್ಲಿಯೇ ಹುಲುಸಾಗಿ ಬೆಳೆಸಲು ಟೊಂಕ ಕಟ್ಟಿ ನಿಂತಂತಿದೆ.
ಒಂದೆಡೆ ಇಸಿಸ್, ಇಸಿಲ್ ಮತ್ತು ದಾವೂದ್ನಿಂದ ರಾಷ್ಟ್ರ ವಿರೋಧಿ ಭಯೋತ್ಪಾದಕ ಕೃತ್ಯಗಳು ನಡೆದರೆ ಮತ್ತೊಂದೆಡೆ ಮಾವೋವಾದಿ ನಕ್ಸಲರು ರೆಡ್ ಕಾರಿಡಾರ್ ವಿಸ್ತರಣೆ ಮೂಲಕ ಬುಡಮೇಲು ಕೃತ್ಯ ನಡೆಸುತ್ತಾ ನಮ್ಮ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದು ಕೊಡಗಿಗೆ ಇದರ ಕಾವು ತಟ್ಟಿದ್ದು ಮುಂದೆ ಇದು ಭೀಕರ ಸ್ವರೂಪ ತಾಳುವ ಮೊದಲೇ ಸಂಬಂಧಿಸಿದವರನ್ನು ಎನ್.ಐ.ಎ (ನ್ಯಾಷನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ) ಮೂಲಕ ತನಿಖೆಗೊಳಪಡಿಸಿ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಮೂಲಕ ಬಂಧಿಸಿ ಜೈಲಿಗೆ ತಳ್ಳಬೇಕು ಮತ್ತು “ರಾ” &amdiv; ಎನ್.ಐ.ಎ ಏಜೆನ್ಸಿಗಳನ್ನು ಮಡಿಕೇರಿಯಲ್ಲಿ ಖಾಯಂ ಆಗಿ ನೆಲೆಗೊಳಿಸಬೇಕು ಮತ್ತು ಈಗಿಂದೀಗಲೇ ಇವರ ಚಟುವಟಿಕೆ ತೀವ್ರ ನಿಗಾವಹಿಸಬೇಕು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.