ಮಡಿಕೇರಿ, ಜ. 21: ಕೊಡಗಿನಲ್ಲಿ ಕಿರು ಕೈಗಾರಿಕೆಗಳಿಗೆ ವಿಪುಲ ಅವಕಾಶವಿದ್ದು, ಅದನ್ನು ಬಳಸಿಕೊಳ್ಳುವಂತಾಗಬೇಕು ಎಂದು ಪೊನ್ನಂಪೇಟೆ ಸಿಐಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ ಹೇಳಿದರು.ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಫೊಬಿಕ್ಸ್ ಫುಡ್ಸ್ ಅಂಡ್ ಬಯೋಟೆಕ್ನಾಲಜಿ ಕನ್ಸಲ್ಟೆನ್ಸಿ ಸರ್ವಿಸಸ್, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್, ರೋಟರಿ ಪಶ್ಚಿಮ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊಡಗು ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳು, ಕೃಷಿ ಮತ್ತು ತೋಟಗಾರಿಕೆ ಆಧಾರಿತ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆ, ಚಾಕಲೇಟ್ ಮತ್ತು ಚಾಕಲೇಟ್ ಕನ್‍ಫೆಕ್ಷನರಿ ಕೈಗಾರಿಕೆ, ಕೊಕ್ಕೊ ಸಂಸ್ಕರಣೆ ಉದ್ದಿಮೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದೀಚೆಗೆ ಕೊಡಗು ಜಿಲ್ಲೆ ಪ್ರವಾಸಿಗರಿಗೆ ಹತ್ತಿರವಾಗಿದ್ದು, ಇಲ್ಲಿ ಸಣ್ಣ ಕೈಗಾರಿಕೆ ಆರಂಭಿಸಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಂಡಲ್ಲಿ ಪ್ರಗತಿ ಸಾಧ್ಯವಿದೆ ಎಂದರು. ಸರ್ಕಾರ ಪ್ರವಾಸೋದ್ಯಮದ ಅಭಿವೃದ್ಧಿಗೆ ಬದ್ಧವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಿದೆ. ಆದರೆ ಆ ದಿಸೆಯಲ್ಲಿ ನಮ್ಮದೇ ಆದ ಕೆಲವೊಂದು ಜವಾಬ್ದಾರಿಗಳನ್ನು ಪ್ರಾಮಾಣಿ ಕತೆಯಿಂದ ನಿರ್ವಹಿಸುವಂತಾಗಬೇಕು ಎಂದು ಬೆಳ್ಯಪ್ಪ ಕಿವಿಮಾತು ಹೇಳಿದರು.

(ಮೊದಲ ಪುಟದಿಂದ) ಫೊಬಿಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಎಂ.ಜಿ. ಬೈಂದೂರು ಅವರು ಮಾತನಾಡಿ, ಎರಡು ವರ್ಷದ ಹಿಂದೆ ಆರಂಭವಾದ ಫೊಬಿಕ್ಸ್ ಸಂಸ್ಥೆ ವಿವಿಧ ವಿಭಾಗಗಳ ನುರಿತ ಹಿರಿಯ ವಿಜ್ಞಾನಿಗಳನ್ನೊಳಗೊಂಡು ಆಹಾರ ಉತ್ಪಾದನೆ ಹಾಗೂ ಅಭಿವೃದ್ಧಿಪಡಿಸುವ ಆಸಕ್ತಿ ಹೊಂದಿರುವವರಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ. ಈ ದಿಸೆಯಲ್ಲಿ ಯಾವದೇ ಸಹಕಾರ ಅಗತ್ಯವಿದ್ದಲ್ಲಿ ಫೊಬಿಕ್ಸ್ ಒದಗಿಸಲಿದೆ ಎಂದು ತಿಳಿಸಿದರು.

ಮೈಸೂರು ರೋಟರಿಯ ಪಶ್ಚಿಮದ ಪ್ರಮುಖ ಜೋಸೆಫ್ ಮ್ಯಾಥಿವ್ ಅವರು ಮಾತನಾಡಿ, ‘ಫಾಸ್ಟ್‍ಫುಡ್' ಭರಾಟೆಯಲ್ಲಿ ಜನತೆ ಆಹಾರದ ಗುಣಮಟ್ಟವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಆರೋಗ್ಯ ಹದಗೆಡುವದರ ಜೊತೆಗೆ ಆಹಾರದ ಪೌಷ್ಟಿಕತೆಗೆ ಬೆಲೆ ಸಿಗದಂತಾಗಿದೆ ಎಂದು ಅಭಿಪ್ರಾಯಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಮಾತನಾಡಿ, ಆಹಾರ ಉತ್ಪಾದನೆ ಮತ್ತು ಸಂರಕ್ಷಣೆಗೆ ಆಸಕ್ತಿ ತೋರುವದರೊಂದಿಗೆ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇಲಾಖೆಯಲ್ಲಿರುವಂತಹ ಸೌಲಭ್ಯಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸೌಲಭ್ಯ ಪಡೆಯುವ ದಿಸೆಯಲ್ಲಿ ಯಾವದೇ ಅಡೆ - ತಡೆಗಳು ಎದುರಾದರೂ ನೇರವಾಗಿ ತನ್ನನ್ನು ಸಂಪರ್ಕಿಸುವಂತೆ ಹೇಳಿದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ, ಮುಳಿಯ ಕೇಶವಪ್ರಸಾದ್ ಮಾತನಾಡಿ, ಕೊಡಗಿನಲ್ಲಿ ಅಂತರ್ಜಲ ಪ್ರಮಾಣ ಕುಸಿಯುತ್ತಿದ್ದು, ಅಂತರ್ಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಳ್ಳಬೇಕಾದ ಅಗತ್ಯತೆಯಿದೆ ಎಂದರು.

ಕೆಸಿಟಿಯುನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಉಪ್ಪಿನ್ ಅವರು ಮಾತನಾಡಿ, ಪ್ರಸ್ತುತ ಜನತೆ ಗುಣಮಟ್ಟದ ಆಹಾರ ಖರೀದಿಸಲು ಪ್ರಾಮುಖ್ಯತೆ ನೀಡುತ್ತಿಲ್ಲ. ಕಡಿಮೆ ಬೆಲೆಯಲ್ಲಿ ಹೆಚ್ಚು ಗುಣಮಟ್ಟ ಹೊಂದಿರುವ ಆಹಾರವನ್ನು ಅಪೇಕ್ಷಿಸುತ್ತಾರೆ. ಗುಣಮಟ್ಟದ ಹಿಂದಿರುವ ಶ್ರಮವನ್ನು ಯಾರೊಬ್ಬರು ಮನವರಿಕೆ ಮಾಡಿಕೊಳ್ಳುವದಿಲ್ಲ ಎಂದರು.

ರಾಜೇಶ್ ನಿರೂಪಿಸಿ, ಕೌಶಿಕ್ ಪ್ರಾರ್ಥಿಸಿ, ಕೇಶವ ಪ್ರಸಾದ್ ವಂದಿಸಿದರು.

ಬಳಿಕ ಕೊಡಗಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಆಧಾರಿತ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳಿಗೆ ವಿಪುಲ ಅವಕಾಶಗಳು, ಕೊಕ್ಕೊ ಸಂಸ್ಕರಣೆ ಮತ್ತು ಕೊಕ್ಕೊ ಹಾಗೂ ಚಾಕಲೇಟ್‍ನಿಂದ ಮೌಲ್ಯವರ್ಧಿತ ಉತ್ಪನ್ನಗಳು ವಿಷಯಗಳ ಬಗ್ಗೆ ಸಿಎಫ್‍ಟಿಆರ್‍ಐನ ನಿವೃತ್ತ ವಿಜ್ಞಾನಿ ಟಿ.ಆರ್. ಪ್ರಭು ಉಪನ್ಯಾಸ ನೀಡಿದರು.

ಕನ್‍ಫೆಕ್ಷನರಿ ಪದಾರ್ಥಗಳು ಮತ್ತು ಅವುಗಳ ಗುಣಮಟ್ಟದ ಅಂಶಗಳು ವಿಷಯದ ಬಗ್ಗೆ ಸಿಎಫ್‍ಟಿಆರ್‍ಐ ನಿವೃತ್ತ ವಿಜ್ಞಾನಿ ಡಾ. ಎನ್.ಜಿ. ಮಲ್ಲೇಶಿ, ಆಹಾರ ಮತ್ತು ಜೈವಿಕ ತಂತ್ರಕ್ಕೆ ಸಂಬಂಧಿಸಿದ ಯಂತ್ರಗಳು ಮ್ಯೂರೊಪೈ ಸಂಸ್ಥೆಯ ಅನುಭವಗಳ ಬಗ್ಗೆ ಮ್ಯೂಕೋಪೈ ಸೈಂಟಿಫಿಕ್ ಕಂನ ಮಾಲೀಕ ಎಂ.ಜಿ. ಬೈದೂರು, ಚಾಕಲೇಟ್ ಕನ್‍ಫೆಕ್ಷನರಿ ಮತ್ತು ಬೇಕರಿ ಮತ್ತು ಹಿಟ್ಟಿನ ಕನ್‍ಫೆಕ್ಷನರಿ ಉತ್ಪನ್ನಗಳು ಕುರಿತು ವಿನಯಾ ಬೈಂದೂರು ಮಾತನಾಡಿದರು.