ಸೋಮವಾರಪೇಟೆ,ನ.30: ಕಾವೇರಿ ನದಿ ಸ್ವಚ್ಛತೆಯ ಕುರಿತು ಜನಜಾಗೃತಿ, ಸ್ವಚ್ಛತಾ ಆಂದೋಲನ ಮಾಡುವದಕ್ಕೂ ಮೊದಲು ಕಾವೇರಿ ನದಿ ಮೂಲವನ್ನು ರಕ್ಷಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ್ ಅಭಿಪ್ರಾಯಿಸಿದರು.

ತಾಲೂಕಿನ ಗಡಿಭಾಗ ಹೊಸೂರಿನಲ್ಲಿ ನಡೆದ ಕೌಟೆಕಾಯಿ ಜಾತ್ರಾ ಮಹೋತ್ಸವ, ಸಮೂಹ ನೃತ್ಯ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಕಾವೇರಿ ಕಲುಷಿತಗೊಳ್ಳುವ ಮೊದಲು ಎಚ್ಚೆತ್ತುಕೊಂಡರೆ ಮಾತ್ರ ಕಾವೇರಿ ನಮ್ಮನ್ನು ರಕ್ಷಿಸುತ್ತಾಳೆ. ಪಶ್ಚಿಮ ಘಟ್ಟದಲ್ಲಿರುವ ಹೇರಳವಾದ ಸಸ್ಯ ಸಂಪತ್ತು, ಅಸಂಖ್ಯಾತ ಜೀವ ಸಂಕುಲಗಳ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ. ಜೀವ ವೈವಿಧ್ಯದ ತಾಣವಾದ ಪಶ್ಚಿಮ ಘಟ್ಟವನ್ನು ಉಳಿಸುವದರೊಂದಿಗೆ ರೈತರು ತಮ್ಮ ಜಮೀನಿನಲ್ಲಿ ವೈವಿಧ್ಯಮಯವಾದ ಸಸ್ಯಗಳು, ಗಿಡಮೂಲಿಕೆಗಳನ್ನು ಬೆಳೆಸಬೇಕೆಂದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನಂಬಿಕೆಯ ಹಾದಿಯಲ್ಲಿ ನಡೆಯುವಾಗ ಅನೇಕ ಅಡೆತಡೆಗಳು, ಕೀಳರಿಮೆಗಳ ಪ್ರಹಾರ, ಟೀಕೆ ಟಿಪ್ಪಣಿ ಎದುರಾಗುವದು ಸಹಜ. ಇದನ್ನು ಮೆಟ್ಟಿ ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮತ್ತೋರ್ವ ಅತಿಥಿ, ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಗ್ರಾಮದಲ್ಲಿ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಜನರಲ್ಲಿ ಭಯ, ಭಕ್ತಿ, ದೇವರ ಮೇಲಿನ ನಂಬಿಕೆ ಇರಲು ಸಾಧ್ಯ. ನಾವು ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗವನ್ನಾದರೂ ಧಾರ್ಮಿಕ ಕಾರ್ಯಗಳು, ಅನ್ನದಾನಕ್ಕೆ ನೀಡಿದರೆ ಮನಸ್ಸಿಗೆ ತೃಪ್ತಿ ದೊರಕುತ್ತದೆ ಎಂದು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ದಾಕ್ಷಾಯಿಣಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆ ಉಜ್ಮಾ ರಿಜ್ವ, ಸಕಲೇಶಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತ ಪ್ರಸನ್ನ, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜರೀನಾ ಮಂಜುನಾಥ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಕಾವೇರಿ ಸೇನೆ ಸಂಚಾಲಕ ಹೊಸಬೀಡು ಶಶಿ, ಹೊಸೂರು ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಹೆಚ್.ಕೆ. ರಮೇಶ್, ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು.