ಮಡಿಕೇರಿ, ಅ. 28: ಸ್ವಾಮಿ ವಿವೇಕಾನಂದರ ಅಪ್ಪಟ ಶಿಷ್ಯೆಯಾಗಿ ಇಂಗ್ಲೆಂಡಿನಿಂದ ಬಂದು ನೆಲೆಸಿದ ಸಿಸ್ಟರ್ ನಿವೇದಿತಾ ಹಾಗೂ ಕೊಡಗಿನ ಮಹಿಳೆಯರಿಗೆ ಸಾಮ್ಯತೆಯಿದ್ದು, ಕೊಡಗಿನಲ್ಲಿ ಹೊಸ ಆಧ್ಯಾತ್ಮಿಕ ಜಾಗೃತಿ ಮೂಡುವಂತಾಗಲಿ ಎಂದು ಮುಂಬೈ ಶ್ರೀರಾಮಕೃಷ್ಣ ಮಠದ ಮುಖ್ಯಸ್ಥ ಸ್ವಾಮಿ ಮುಕ್ತಿದಾನಂದಜಿ ಆಶಯ ವ್ಯಕ್ತಪಡಿಸಿದರು.

ಇಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಸಿಸ್ಟರ್ ನಿವೇದಿತಾ ಅವರ 150ನೇ ಹುಟ್ಟುಹಬ್ಬ ಆಚರಣೆ ಸಂದರ್ಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗಿನ ಮಹಿಳೆಯರಂತೇ ಆಕೆಯಲ್ಲಿ ಆತ್ಮವಿಶ್ವಾಸ, ಸಂಸ್ಕøತಿಯ ಪ್ರೇಮ ಮತ್ತು ಪ್ರಕೃತಿ ಪ್ರೇಮವಿದ್ದು, ಕೊಡಗಿನಲ್ಲಿ ಆಧುನಿಕತೆ ಮತ್ತು ಸನಾತನ ಸಂಸ್ಕøತಿಯನ್ನು ಬೆಳಗಿಸುವ ಸತ್ಕಾರ್ಯ ಸಾಧ್ಯ ಎಂದು ಮುಕ್ತಿದಾನಂದಜಿ ಅಭಿಪ್ರಾಯಪಟ್ಟರು. ಸಿಸ್ಟರ್ ನಿವೇದಿತಾ ಸ್ವಾತಂತ್ರ್ಯಕ್ಕೂ ಮೊದಲೇ ಭೀಕರ ಪ್ಲೇಗ್ ಹರಡಿದ ಸಂದರ್ಭ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛ ಭಾರತದ ಜಾಗೃತಿ ಆರಂಭಿಸಿದ್ದರು ಎಂದು ಜ್ಞಾಪಿಸಿದರು.