ವೀರಾಜಪೇಟೆ, ಅ. 26: ಹುಣಸೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಕೊಡಗಿನ ಒಬ್ಬರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಹದಿನಾರು ಮಂದಿ ಗಾಯಗೊಂಡಿದ್ದಾರೆ.

ಮಡಿಕೇರಿ, ವೀರಾಜಪೇಟೆ, ಮೈಸೂರು, ಮಂಗಳೂರು ಇನ್ನಿತರೆಡೆಗಳಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ವರುಷದ ಹಿಂದೆಯಷ್ಟೆ ನಿವೃತ್ತರಾಗಿದ್ದ ಪುಚ್ಚಿಮಂಡ ಪೂಣಚ್ಚ (61) ಅವರೂ ಅಸುನೀಗಿದ್ದು, ಮೃತರು ಮೈಸೂರಿನ ವಿದ್ಯಾವರ್ಧಕ ಕಾಲೇಜಿಗೆ ತೆರಳುತ್ತಿದ್ದರು. ಎರಡು ವರುಷದಿಂದ ಕಾನೂನಿನಲ್ಲಿ ಅಂಚೆ ಶಿಕ್ಷಣ ಪಡೆಯುತ್ತಿದ್ದ ಅವರು ವಾರಕ್ಕೊಮ್ಮೆ ಮೈಸೂರಿಗೆ ಅಲ್ಲಿನ ಕಾನೂನು ಉಪನ್ಯಾಸಕರ ಮಾರ್ಗದರ್ಶನಕ್ಕಾಗಿ ತೆರಳುತ್ತಿದ್ದರು. ಮೃತರು ವೀರಾಜಪೇಟೆ ಸನಿಹದ ಬಿಟ್ಟಂಗಾಲದ ನಿವಾಸಿ ಯಾಗಿದ್ದು, ಪತ್ನಿ ಶಕೀಲ ಹಾಗೂ 10ನೇ ತರಗತಿ ಓದುತ್ತಿರುವ ಪುತ್ರನನ್ನು ಅಗಲಿದ್ದಾರೆ. ಮೃತ ಪೂಣಚ್ಚ ಅವರ ಅಂತ್ಯಕ್ರಿಯೆ ಗುರುವಾರ (ಇಂದು) ಬಿಟ್ಟಂಗಾಲದಲ್ಲಿ ನೆರವೇರಲಿದೆ.