ಮಡಿಕೇರಿ: ಇಲ್ಲಿನ ಜಿಲ್ಲಾ ಬಿ.ಜೆ.ಪಿ. ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಗರ ಬಿ.ಜೆ.ಪಿ. ಅಧ್ಯಕ್ಷ ಮಹೇಶ್ ಜೈನಿ ಧ್ವಜಾರೋಹಣ ನೆರವೇರಿಸಿದರು. ಇತರ ಪ್ರಮುಖರು ಹಾಜರಿದ್ದರು.

ಆಲೂರು-ಸಿದ್ದಾಪುರ: ಇಲ್ಲಿಯ ವಿಘ್ನೇಶ್ವರ ಆಟೋ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸ್ಥಳೀಯ ಪೊಲೀಸ್ ಸಹಾಯಕ ಠಾಣಾಧಿಕಾರಿ ಶಿವಪ್ಪ ನೆರವೇರಿಸಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ವೀರಭದ್ರ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಜೆ. ದೇವೇಂದ್ರ ನೆರವೇರಿಸಿದರು. ಈ ಪ್ರಯುಕ್ತ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಮಾದಪ್ಪ, ಮಾಚಯ್ಯ, ಜಾನಕಿ ಗಂಗಾಧರ್ ಮುಂತಾದವರಿದ್ದರು.

ಶನಿವಾರಸಂತೆಯ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯವರೆಗೆ ಮೆರಣಿಗೆಯಲ್ಲಿ ಸಾಗಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳಿಗೆ ಸ್ಥಳೀಯ ಕರವೇ ಹೋಬಳಿ ಸಂಘಟನೆಯ ವತಿಯಿಂದ ಸಿಹಿ ಹಂಚಲಾಯಿತು.

ಕಾಟಕೇರಿ: ಕಾಟಕೇರಿಯ ಕೂರನಬಾಣೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸೇರಿ ಆಚರಿಸಿದರು. ಮದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನ ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿಯಾಗಿ 26 ವರ್ಷ ಸೇವೆ ಸಲ್ಲಿಸಿದ ಪುಟ್ಟಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಸಿ. ಗಿರಿಜ ಹಾಗೂ ಅಂಗನವಾಡಿ ಕಾರ್ಯಕರ್ತೆ ನಳಿನಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಚೆಟ್ಟಳ್ಳಿ: ಚೆಟ್ಟಳ್ಳಿ ನೆಹರೂ ವಾಹನ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪಂಚಾಯಿತಿ ಸದಸ್ಯ ಹಾಗೂ ವಾಹನ ಚಾಲಕರ ಸಂಘದ ಹಿರಿಯ ಸದಸ್ಯ ನಾರಾಯಣ ಧ್ವಜಾರೋಹಣ ಮಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.