ಮಡಿಕೇರಿ, ಮೇ 23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಫೆಲೋಶಿಪ್ ಹಾಗೂ ಬ್ಯಾರಿ ಪುರಸ್ಕಾರ ಸಮಾರಂಭ ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆಯಿತು.ಇಲ್ಲಿನ ಸಮಾಜ ಮಂದಿರ ಸಭಾ ಭವನದಲ್ಲಿ ನಡೆದ ಈ ಸಮಾರಂಭವನ್ನು ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ ಬ್ಯಾರಿ ವಾರ್ತಾ ವಾಚಕಿಯಾಗಿರುವ ಪಾರಾಣೆಯ ಮಳ್ಳಡ ಡೇಝಿ ಸೋಮಯ್ಯ ಅವರನ್ನು ಬ್ಯಾರಿ ಭಾಷೆಯಲ್ಲಿನ ಸಾಧನೆಗಾಗಿ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭ ಸನ್ಮಾನ ಸ್ವೀಕರಿಸಿ ಬ್ಯಾರಿ ಭಾಷೆಯಲ್ಲೇ ಮಾತನಾಡಿದ ಡೇಝಿ, ಈ ಸನ್ಮಾನ ತನಗೆ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸಿದ್ದು, ಬ್ಯಾರಿ ಭಾಷೆಯ ಅಭಿವೃದ್ಧಿಗಾಗಿ ದುಡಿಯಬೇಕೆಂಬ ಅಭಿಲಾಷೆಯನ್ನು ತಂದುಕೊಟ್ಟಿದೆ ಎಂದರು.

ನಂತರ ನಡೆದ ಬ್ಯಾರಿ ಫೆಲೋಶಿಪ್ ಕಾರ್ಯಕ್ರಮದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಫಾಹಿಮಾಳಿಗೆ ಫೇಲೋಶಿಪ್ ನೀಡಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವ ಬಿ.ಎ.ಮೊಯ್ದಿನ್,ಬ್ಯಾರಿ ಅಕಾಡೆಮಿ ಸದಸ್ಯ ಎಂ.ಇ.ಮಹಮ್ಮದ್,ಗುರುಪುರದ ಗಡಿಕಾರ ವರ್ಧಮಾನ ದುರ್ಗಪ್ರಸಾದ್ ಶೆಟ್ಟಿ,ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಬಿ.ಎಸ್.ರಫೀಕ್ ಅಹ್ಮದ್,ಮತ್ತಿತರ ಪ್ರಮುಖರು ಹಾಜರಿದ್ದರು.