ಐಸಿಸ್ ಉಗ್ರ ಸಂಘಟನೆಯಿಂದ ಹತ್ಯಾ ಪಟ್ಟಿ ಬಿಡುಗಡೆ

ಲಂಡನ್, ಜೂ.10 : ಪೈಶಾಚಿಕ ಭಯೋತ್ಪಾದಕ ಕೃತ್ಯಗಳಿಗೆ ವಿಶ್ವದಲ್ಲೇ ಕುಖ್ಯಾತವಾಗಿರುವ ಐಸಿಸ್ ಇಸ್ಲಾಮಿಕ್ ಉಗ್ರ ಸಂಘಟನೆ ಸಹಸ್ರಾರು ಜನರನ್ನು ಒಳಗೊಂಡ ಹತ್ಯಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಜನರು ವಿವಿಧ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಐಸಿಸ್ ಪರ ಹ್ಯಾಕರ್ ಸಮೂಹವೊಂದು ಬಿಡುಗಡೆ ಮಾಡಿರುವ ಸುದೀರ್ಘ ಐಸಿಸ್ ಹತ್ಯಾ ಪಟ್ಟಿಯಲ್ಲಿ ಸುಮಾರು ಎಂಟು ಸಾವಿರ ಅಮೇರಿಕನ್ ಪ್ರಜೆಗಳಿದ್ದಾರೆ. ಜತೆಗೆ ಭಾರೀ ಸಂಖ್ಯೆಯ ಕೆನಡಿಯನ್ನರು, ಆಸ್ಟ್ರೇಲಿಯನ್ನರು ಮತ್ತು ಯುರೋಪಿಯನ್ನರು ಕೂಡ ಈ ಹತ್ಯಾ ಪಟ್ಟಿಯಲ್ಲಿದ್ದಾರೆ. ಐಸಿಸ್ ಉಗ್ರ ಸಂಘಟನೆಯ ಪರವಾಗಿರುವ ಯುನೈಟೆಡ್ ಸೈಬರ್ ಖಲೀಫತ್ ಹ್ಯಾಕರ್ ಗ್ರೂಪ್ ಬಿಡುಗಡೆ ಮಾಡಿರುವ ಐಸಿಸ್ ಹತ್ಯಾ ಪಟ್ಟಿಯಲ್ಲಿ 8,318 ಜನರಿದ್ದಾರೆ. ವಿಶೇಷವೆಂದರೆ ಈ ಎಲ್ಲ್ಲಾ 8,318 ಮಂದಿಯ ಹೆಸರಿನೊಂದಿಗೆ ಅವರ ವಿಳಾಸ, ಇಮೇಲ್ ಸಂಪರ್ಕ ವಿವರ ಇತ್ಯಾದಿಗಳು ಎಲ್ಲವೂ ಇವೆ. ಐಸಿಸ್ ಪರ ಹ್ಯಾಕರ್ ಸಮೂಹವು ಈ ಹತ್ಯಾ ಪಟ್ಟಿಯನ್ನು ರಹಸ್ಯ ಮೆಸೇಜಿಂಗ್ ಆ್ಯಪ್‍ನಲ್ಲಿ ಬಿಡುಗಡೆ ಮಾಡಿದೆ.

ಕಾಬೂಲ್‍ನಲ್ಲಿ ಭಾರತೀಯ ಮಹಿಳೆಯ ಅಪಹರಣ

ಹೊಸದಿಲ್ಲಿ, ಜೂ.10 : ಜುಡಿತ್ ಡಿ'ಸೋಜಾ ಎಂದು ಗುರುತಿಸಲ್ಪಟ್ಟಿರುವ ಭಾರತೀಯ ಮಹಿಳೆಯನ್ನು ಕಾಬೂಲ್‍ನಲ್ಲಿ ಅಪಹರಿಸಲಾಗಿದೆ. ಜುಡಿತ್ ಡಿ'ಸೋಜಾ ಅವರು ಕಾಬೂಲ್‍ನಲ್ಲಿ ಆಘಾ ಖಾನ್ ಅಂತಾರಾಷ್ಟ್ರೀಯ ಸರಕಾರೇತರ ಸೇವಾ ಸಂಘಟನೆಯಲ್ಲಿ ದುಡಿಯುತ್ತಿರುವ ಮಹಿಳೆ. ಜುಡಿತ್ ಅವರ ಅಪಹರಣ ಕುರಿತಾಗಿ ತಾನು ಹಿರಿಯ ಅಫ್ಘಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವದಾಗಿ ಭಾರತೀಯ ದೂತಾವಾಸ ಹೇಳಿದೆ. ಇದೇ ವೇಳೆ ಸರಕಾರ ಕೂಡ ತಾನು ಜುಡಿತ್ ಡಿ'ಸೋಜಾ ಅವರ ಕೋಲ್ಕತದಲ್ಲಿನ ಕುಟುಂಬದೊಂದಿಗೆ ಸಂಪರ್ಕದಲ್ಲಿರುವದಾಗಿ ತಿಳಿಸಿದೆ.

ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕನ ಅತಿರೇಕ

ನವದೆಹಲಿ, ಜೂ.10 : ದೆಹಲಿ ವಿಧಾನಸಭೆಯಲ್ಲಿ ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಶಾಸಕರೊಬ್ಬರು ಬೆಂಚ್ ಮೇಲೆ ನಿಂತು ಸ್ಪೀಕರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಇಂದು ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ವಿಜೇಂದ್ರ ಗುಪ್ತಾ ಅವರು ತನಗೆ ಮಾತನಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೆ ಸ್ಪೀಕರ್ ರಾಮ್ ನಿವಾಸ್ ಅವರು ಗುಪ್ತಾಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಗುಪ್ತಾ, ಏಕಾಏಕಿ ಬೆಂಚ್ ಮೇಲೆ ಹತ್ತಿ ಮಾತನಾಡಲು ಆರಂಭಿಸಿದರು. ಪ್ರತಿಪಕ್ಷದ ನಾಯಕನ ಈ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ಇದು ತುಂಬಾ ಅಪಮಾನಕಾರಿ ವರ್ತನೆ, ಸದಸ್ಯರೊಬ್ಬರು ಬೆಂಚ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಾರೆ ಎಂಬದನ್ನು ಊಹಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.

ಮೋದಿ ಸಿದ್ದಾಂತವನ್ನು ಶ್ಲಾಘಿಸಿದ ಅಮೆರಿಕ

ವಾಷಿಂಗ್ಟನ್ ಜೂ.10 : ಭಾರತ-ಅಮೆರಿಕ ಸಂಬಂಧ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು “ಮೋದಿ ಸಿದ್ಧಾಂತ” ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಸ್ ನಾಮಕರಣ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಧಾನಿ ಮೋದಿಯವರು ಅಮೇರಿಕಾಕ್ಕೆ ಭೇಟಿ ನೀಡಿದ್ದನ್ನು ಐತಿಹಾಸಿಕ ಭೇಟಿ ಎಂದು ಬಣ್ಣಿಸಿದ ಅವರು, ಅಮೇರಿಕಾ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವದಕ್ಕೆ ಮುನ್ನ ಮೋದಿಯವರಲ್ಲಿ ಸ್ಪಷ್ಟ ಮತ್ತು ಬಲವಾದ ದೂರದೃಷ್ಟಿಯಿತ್ತು ಎಂದು ಹೇಳಿದ್ದಾರೆ. ಅವರ ಈ ದೂರದೃಷ್ಟಿಯನ್ನು ಮೋದಿ ಸಿದ್ಧಾಂತ ಎಂದು ಕರೆಯಲು ಬಯಸುತ್ತೇನೆ. ಇದು ಇತಿಹಾಸದ ಹಿಂಜರಿಕೆಯನ್ನು ನಿವಾರಿಸಿ ಎರಡೂ ದೇಶಗಳ ನಡುವೆ ಸಾಮಾನ್ಯ ಹಿತಾಸಕ್ತಿ ಹಂಚಿಕೊಳ್ಳಲು ವಿದೇಶಾಂಗ ನೀತಿಯ ಅಡಿಪಾಯ ಹಾಕುತ್ತದೆ ಎಂದರು.

ಭಾರತ, ಅಮೇರಿಕಾ, ಜಪಾನ್ ಜಂಟಿ ಕವಾಯತು

ನವದೆಹಲಿ, ಜೂ.10 : ಮಿಲಿಟರಿ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಬಿಕ್ಕಟ್ಟಿನ ಮಧ್ಯೆ ವ್ಯಾಪಾರ, ವಹಿವಾಟುಗಳನ್ನು ವೃದ್ಧಿಗೊಳಿಸಲು ಚೀನಾ ಸಾಗರದ ಸಮೀಪ ಭಾರತ, ಅಮೇರಿಕಾ, ಜಪಾನ್ ಜಂಟಿಯಾಗಿ ನೌಕಾದಳ ಕವಾಯತು ನಡೆಸಲಿವೆ.ಭಾರತ ನೌಕಾಪಡೆಯ ಹಡಗುಗಳಾದ ಸತ್ಪುರ, ಸಹ್ಯಾದ್ರಿ, ಶಕ್ತಿ ಮತ್ತು ಕಿರ್ಚ್ 20ನೇ ನೌಕಾಪಡೆ ಕಸರತ್ತಿನಲ್ಲಿ ಮೂರೂ ದೇಶಗಳು ಭಾರತದ 'ಆಕ್ಟ್ ಈಸ್ಟ್ ಪಾಲಿಸಿ'ಯಡಿ ಭಾಗವಹಿಸಲಿವೆ. ಈ ನೌಕಾ ಕಸರತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನೌಕಾ ಕಡಲ ಭದ್ರತೆಗೆ ಮತ್ತು ಜಾಗತಿಕ ನೌಕಾ ಕಡಲ ತೀರದ ವ್ಯಾಪಾರ ವೃದ್ಧಿಗೆ ನೆರವು ನೀಡಲಿದೆ.

ಸೌದಿಯಲ್ಲಿ ಹೈದರಾಬಾದ್ ಮೂಲದ ಮಹಿಳೆಯ ರಕ್ಷಣೆ

ಹೈದರಾಬಾದ್, ಜೂ.10 : ಕೇಂದ್ರ ಸರ್ಕಾರ ವಿದೇಶದಲ್ಲಿರುವ ಭಾರತೀಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿದೆ ಎಂಬದು ಮತ್ತೊಮ್ಮೆ ಸಾಬೀತಾಗಿದ್ದು, ಸೌದಿಯಲ್ಲಿ ಕೆಲಸ ನೀಡಿದವರಿಂದ ಚಿತ್ರ ಹಿಂಸೆಗೊಳಗಾಗಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ರಕ್ಷಿಸಿದೆ. ಸೌದಿ ಅರೇಬಿಯಾದಲ್ಲಿ ಮನೆಕೆಲಸ ಮಾಡುತ್ತಿರುವ ಘಫ್ರುನ್ನೀಸಾ ಬೇಗಂ ಎಂಬ ಮಹಿಳೆಯನ್ನು ಕೆಲಸ ನೀಡಿದ್ದವರು ಉಪವಾಸ ಹಾಕಿ ಹಿಂಸೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಲು ಕ್ರಮ ಕೈಗೊಂಡಿದೆ. ಘಫ್ರುನ್ನೀಸಾ ಬೇಗಂಗೆ ಮಾಲೀಕರು ಹಿಂಸೆ ನೀಡುತ್ತಿರುವ ಬಗ್ಗೆ ಮೊಹಮ್ಮದ್ ನಸೀರ್ ಎಂಬ ವ್ಯಕ್ತಿ ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ವಿದೇಶಾಂಗ ಇಲಾಖೆ ಹಾಗೂ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಘಫ್ರುನ್ನೀಸಾ ಬೇಗಂ ರ ಬಿಡುಗಡೆಗೆ ಕ್ರಮ ಕೈಗೊಂಡಿದ್ದಾರೆ.

ತಿರುಪತಿಯಲ್ಲಿ ಲಡ್ಡು ಭಸ್ಮ

ತಿರುಪತಿ, ಜೂ. 10: ವಿಶ್ವ ವಿಖ್ಯಾತ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಲಡ್ಡು ತಯಾರಿಕಾ ಘಟಕದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಲಡ್ಡುಗಳು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವದೇ ತೊಂದರೆಯಾಗಿಲ್ಲ. ಇಂದು ಬೆಳಿಗ್ಗೆ ಲಡ್ಡುಗಳನ್ನು ತಯಾರಿಸುವ ಅಡುಗೆ ಮನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಡುಗೆ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಡ್ಡು ತಯಾರಿಸುವ ಮನೆಯಲ್ಲಿ ತುಪ್ಪ ತಯಾರಿಸುತ್ತಿದ್ದಾಗ ವಿಪರೀತ ಬಿಸಿಯಿಂದಾಗಿ ಗೋಡೆಗೆ ಬೆಂಕಿ ತಗುಲಿಕೊಂಡಿದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ಪಿಆರ್‍ಒ ತಲರಿ ರವಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬೆಂಕಿ ಆಕಸ್ಮಿಕದಿಂದಾಗಿ ಯಾವದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಅಂದಾಜು 20 ಲಕ್ಷ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.