ಸುಂಟಿಕೊಪ್ಪ, ಸೆ. 6: ಅನೇಕ ವರ್ಷಗಳಿಂದ ತೀರಾ ಹದಗೆಟ್ಟು ಹಾಳಾಗಿ ಹೋಗಿದ್ದ ಕೊಡಗರಹಳ್ಳಿ-ಕಂಬಿಬಾಣೆ-ಚಿಕ್ಲಿಹೊಳೆ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕೊಡಗರಳ್ಳಿ ಚಿಕ್ಲಿಹೊಳೆ ರಸ್ತೆ ಡಾಮರೀಕರಣ ಕೆಲ ವರ್ಷಗಳ ಹಿಂದೆ ಮಾಡಲಾಗಿದ್ದು, ಆನಂತರ ಗುಣಮಟ್ಟವಿಲ್ಲದೇ, ಚರಂಡಿ ವ್ಯವಸ್ಥೆ ಕಲ್ಪಿಸದೇ ರಸ್ತೆ ಹಾಳಾಗಿತ್ತು.ಆನಂತರ ಈ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದ್ದರಿಂದ ಕಾವೇರಿ ನೀರಾವರಿ ನಿಗಮದವರು ರಸ್ತೆ ದುರಸ್ತಿಗೆ ಮೀನಾಮೇಷ ಎಣಿಸಿದ್ದರು. ಈಗ ಸರಕಾರದೊಂದಿಗೆ ಕಾವೇರಿ ನಿಗಮದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ ಮೇರೆಗೆ ಇಲ್ಲಿ ಕಾಂಕ್ರೀಟ್ ರಸ್ತೆಗೆ ರೂ. 2 ಕೋಟಿ ಬಿಡುಗಡೆಯಾಗಿದ್ದು, 3.5 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ. ಈ ವಿಭಾಗದ ಗ್ರಾಮಸ್ಥರು ಜಾಗವನ್ನು ಬಿಟ್ಟುಕೊಡುವದರ ಮೂಲಕ 2 ಕಡೆ ಚರಂಡಿ ಕಾಮಗಾರಿಗೆ ಅವಕಾಶ ಕಲ್ಪಸಿಕೊಡಬೇಕು. ಗುಣಮಟ್ಟದ ರಸ್ತೆ ನಿರ್ಮಾಣವಾಗಲು ಪಂಚಾಯಿತಿ ಅಧ್ಯಕ್ಷರು, ಗ್ರಾಮಸ್ಥರು, ಜನಪ್ರತಿನಿಧಿಗಳು ಕೈಜೋಡಿಸುವದರೊಂದಿಗೆ ಅಭಿವೃದ್ಧಿಯತ್ತ ಗಮನಹರಿಸಬೇಕೆಂದರು.

ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಎಂ.ಪಿ.ಸುನಿಲ್ ಸುಬ್ರಮಣಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ತಾಲೂಕು ಪಂಚಾಯಿತಿ ಸದಸ್ಯರುಗಳಾದ ಬಲ್ಲರಂಡ ಮಣಿ ಉತ್ತಪ್ಪ, ಹರದೂರು ತಾ.ಪಂ. ಸದಸ್ಯೆ ಹೆಚ್.ಡಿ.ಮಣಿ ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಅಬ್ಬಾಸ್, ಮಾಜಿ ಜಿ.ಪಂ. ಸದಸ್ಯ ಬಿ.ಬಿ. ಭಾರತೀಶ್, ಸುಂಟಿಕೊಪ್ಪ ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ಸೋಮವಾರಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ಎನ್.ಕೊಮರಪ್ಪ, ಹಿರಿಯ ಬಿಜೆಪಿ ಮುಖಂಡ ಪಿ.ಕೆ.ಶೇಷಪ್ಪ, ಚೆಟ್ಟಳ್ಳಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ, ಕಂಬಿಬಾಣೆ ಮಾಜಿ ಗ್ರಾ.ಪಂ. ಅಧ್ಯಕ್ಷ ಶಶಿಕಾಂತ ರೈ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚರಣ್, ಕೊಡಗರಹಳ್ಳಿ ಗ್ರಾ.ಪಂ.ಸದಸ್ಯರು ಇದ್ದರು.