* ಗೋಣಿಕೊಪ್ಪಲು, ಜೂ. 10 : ಮೇಯಲು ಬಿಟ್ಟಿದ್ದ ಎತ್ತಿನ ಮೇಲೆ ಹುಲಿ ಧಾಳಿ ನಡೆಸಿದ್ದು, ಗಾಡಿ ಎತ್ತು ಬಲಿಯಾಗಿವೆ. ರೈತ ಶ್ರೀಕಂಠಪ್ಪ ಅವರಿಗೆ ಸೇರಿದ ಎತ್ತು ಇದಾಗಿದ್ದು, ಸುಮಾರು ರೂ. 75,000ದÀಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸ ಲಾಗಿದೆ. ಶ್ರೀ ಕಂಠಪ್ಪ ಅವರು ಈ ಎತ್ತಿನಿಂದ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದರು.

ಕೊಟ್ಟಗೇರಿ ಹಾಗೂ ಬಾಳೆಲೆ ಗ್ರಾಮದಲ್ಲಿ ಇತ್ತೀಚೆಗೆ ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೂ ಸುಮಾರು 10ಕ್ಕೂ ಹೆಚ್ಚು ಜಾನುವಾರುಗಳನ್ನು ಬೇಟೆಯಾಡಿದೆ. ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವದೇ ಈ ಘಟನೆಗಳಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ವನ್ಯಜೀವಿ ವಿಭಾಗದ ಅಧಿಕಾರಿ ಪ್ರಸನ್ನ ಕುಮಾರ್ ಮತ್ತು ನಾಗರಹೊಳೆ ವನ್ಯ ಜೀವಿ ವಿಭಾಗದ ಆರ್.ಎಫ್.ಓ. ಭೇಟಿ ನೀಡಿದರು. ಈ ಸಂಧರ್ಭ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು ಕೂಡಲೇ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡಬೇಕೆಂದು ಪಟ್ಟು ಹಿಡಿದರು. ಹುಲಿ ಧಾಳಿಗೆ ನಿರಂತರವಾಗಿ ಜಾನುವಾರುಗಳು ಬಲಿಯಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಶ್ರೀಕಂಠ ಅವರ ಎತ್ತು ಸುಮಾರು ರೂ 75,000 ಬೆಲೆ ಬಾಳುವದಾಗಿದೆ. ಆದರೆ ಇಲಾಖೆ ಅಲ್ಪ ಮೊತ್ತದ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಹೆಚ್ಚಿನ ಪರಿಹಾರ ನೀಡಬೇಕೆಂದು ಜಿ.ಪಂ ಸದಸ್ಯ ಬಾನಂಡ ಪ್ರಥ್ಯು ಅಧಿಕಾರಿಗಳನ್ನು ಒತ್ತಾಯಿಸಿದರು. ಅಧಿಕಾರಿ ಪ್ರಸನ್ನ ಕುಮಾರ್ ರೂ.30,000 ಪರಿಹಾರ ನೀಡುವದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ನಷ್ಟವಾಗಿರುವ ದನ್ನು ಸ್ಥಳದಲ್ಲೇ ನೀಡುವಂತೆ ಮತ್ತು ಈ ಹಿಂದೆ ಹುಲಿ ಧಾಳಿಯಿಂದ ಜಾನುವಾರು ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಮತ್ತು ಹುಲಿ ಧಾಳಿಯಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಹುಲಿಯನ್ನು ಹಿಡಿದು ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ಬಾಳೆಲೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಈ ಹಿಂದೆ ಜಾನುವಾರುಗಳಿಗೆ ಕೇವಲ ರೂ. 10,000 ಪರಿಹಾರ ನೀಡಿದೆ. ಇದೇ ಹಸುವನ್ನು ಕೊಳ್ಳುವಾಗ ರೂ. 40,000 ಬೆಲೆ ಇರುತ್ತದೆ. ಮಾಪಂಗಡ ಮುದ್ದಯ್ಯ ಅವರ ಜರ್ಸಿ ತಳಿಗಳಿಗೆ ರೂ. 50,000 ಪರಿಹಾರ ನೀಡಬೇಕೆಂದು ಬಾಳೆಲೆ ಗ್ರಾ.ಪಂ. ಸದಸ್ಯ. ವಿನು ಉತ್ತಪ್ಪ ಒತ್ತಾಯಿಸಿದರು. ಈ ಸಂದರ್ಭ ಹಲವು ಗ್ರಾಮಸ್ಥರು ಹಾಜರಿದ್ದರು. ತಾ. 13 ರಂದು ಬಾಳೆಲೆ ಜೂನಿಯರ್ ಕಾಲೇಜಿನಲ್ಲಿ ಅರಣ್ಯ ಅಧಿಕಾರಿ ಗಳೊಂದಿಗೆ ಜನಸಂಪರ್ಕ ಸಭೆ ನಡೆಸಲಾಗುವದು ಎಂದು ಬಾನಂಡ ಪ್ರಥ್ಯು ಮಾಹಿತಿ ನೀಡಿದ್ದಾರೆ.