ಗೋಣಿಕೊಪ್ಪಲು, ಡಿ. 24 : ಕೊಂಗಣ ಹೊಳೆಗೆ ಅಣೆಕಟ್ಟು ನಿರ್ಮಿಸಿ ಹೊರಜಿಲ್ಲೆಗೆ ನೀರು ಹರಿಸಲು ಯೋಜನೆ ರೂಪಿಸುತ್ತಿರುವ ದನ್ನು ವಿರೋಧಿಸಿ ತಾ. 30 ರಂದು ಹುದಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಡೇಮಾಡ ಅಶೋಕ್ ಚಿಟ್ಯಪ್ಪ ತಿಳಿಸಿದ್ದಾರೆ.
ದಕ್ಷಿಣ ಕೊಡಗಿನ ಸುಮಾರು 18 ಗ್ರಾ ಪಂ ವ್ಯಾಪ್ತಿಯ ಸಾರ್ವಜನಿಕರನ್ನು ಸೇರಿಸಿ, ಶಾಸಕರುಗಳು, ಜಿ ಪಂ, ತಾ ಪಂ ಹಾಗೂ ಗ್ರಾ ಪಂ ಸದಸ್ಯರುಗಳ ಸಮ್ಮುಖದಲ್ಲಿ ಸಭೆ ನಡೆಸಿ ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸ ಲಾಗುವದು ಎಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಕೆಲವು ಅಧಿಕಾರಿಗಳಿಂದ ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಯೋಜನೆಯಿಂದ ಬಿ ಶೆಟ್ಟಿಗೇರಿ, ಕುಂದ, ಹಾತೂರು, ಹುದಿಕೇರಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ಮುಳುಗಡೆಯಾಗಲಿದೆ. ಮೊದಲು ಸಣ್ಣ ಪ್ರಮಾಣದಲ್ಲಿ ಅಣೆಕಟ್ಟೆ ನಿರ್ಮಿಸಿ ನಂತರ ದೊಡ್ಡ ಅಣೆಕಟ್ಟು ನಿರ್ಮಾಣದ ಸಾಧ್ಯತೆ ಹೆಚ್ಚಿದೆ ಎಂದರು.
ಜಿ. ಪಂ. ಸದಸ್ಯ ಸಿ ಕೆ ಬೋಪಣ್ಣ ಮಾತನಾಡಿ, ರಾಜಕೀಯ ರಹಿತವಾಗಿ ಸಭೆ ನಡೆಸಿ ಈ ಭಾಗಕ್ಕೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿಕೊಳ್ಳುವ ಚರ್ಚೆ ನಡೆಯಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಅಜಿತ್ ಅಯ್ಯಪ್ಪ ಮಾತನಾಡಿ, ಸಭೆಯಲ್ಲಿ ಮಾಹಿತಿ ಕಲೆ ಹಾಕಿ ಯೋಜನೆಯನ್ನು ರದ್ದುಗೊಳಿಸಲು ಬೇಕಾದ ಕಾರ್ಯಕ್ರಮ ಹಾಗೂ ಸಮಿತಿ ರಚನೆ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವದು ಎಂದರು.
ಹುದಿಕೇರಿಯ ಬೆಳೆಗಾರ ಚೆಕ್ಕೇರ ಕುಟ್ಟಪ್ಪ ಮಾತನಾಡಿ, ಇಂತಹ ಯೋಜನೆಗಳು ಬೆಳೆಗಾರರಿಗೆ ನಷ್ಟವನ್ನುಂಟು ಮಾಡುತ್ತಿದೆ. ಲಕ್ಷಾಂತರ ರೂ. ಬೆಲೆಬಾಳುವ ಜಾಗಗಳು ನೀರಿನಲ್ಲಿ ಮುಳುಗಡೆಯಾಗುವ ಮೂಲಕ ಭೂಮಿ ಕಳೆದುಕೊಳ್ಳುವ ಆತಂಕವಿದೆ ಎಂದರು.