*ಗೋಣಿಕೊಪ್ಪಲು, ಡಿ. 29 : ಜನಪ್ರತಿನಿಧಿಗಳನ್ನು, ಸ್ಥಳೀಯ ಜನರನ್ನು ದಿಕ್ಕರಿಸಿ ಕೊಂಗಣ ಹೊಳೆ ತಿರುವು ಯೋಜನೆಗೆ ಮುಂದಾಗಿರುವದನ್ನು ವಿರೋಧಿಸಲು ವೀರಾಜಪೇಟೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ತಾಲೂಕು ಬರ ಪ್ರದೇಶವೆಂದು ಘೋಷಣೆಯಾಗಿದೆ. ಈ ಸಂದರ್ಭ ಕೊಡಗು ಜಿಲ್ಲೆಯ ಉಪಯೋಗಕ್ಕಾಗಿ ಇಲ್ಲಿನ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟುಮಾಡುವ ಸಲುವಾಗಿ ರೂಪಿಸಿದ ಕೊಂಗಣ ಹೊಳೆ ತಿರುವು ಯೋಜನೆಯಿಂದ ಸ್ಥಳೀಯರಿಗೆ ಉಪಯೋಗವಿಲ್ಲ.

ಕೊಂಗಣ ಹೊಳೆ ನೀರನ್ನು ಸ್ಥಳೀಯರ ಕೃಷಿ ಉಪಯೋಗಕ್ಕೆ ಬಳಸುವ ಯೋಜನೆ ರೂಪಿತ ವಾಗಬೇಕು. ಹೊರಜಿಲ್ಲೆಗೆ ಉಪ ಯೋಗವಾಗುವ ಯೋಜನೆಯನ್ನು ವಿರೋಧಿಸಬೇಕು ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಸಭೆಯ ಗಮನಕ್ಕೆ ತಂದರು. ಇದನ್ನು ಅನುಮೋದಿಸಿದ ಸಭೆ ಯೋಜನೆಯನ್ನು ವಿರೋಧಿಸುವ ನಿರ್ಣಯ ಕೈಗೊಂಡಿತ್ತು.

ತಾ.ಪಂ. ಸಾಮಾನ್ಯ ಸಭೆಗೆ ಹಾಜರಾಗದೆ

(ಮೊದಲ ಪುಟದಿಂದ) ಸಭೆಗೆ ಅಗೌರವ ತೋರುತ್ತಿರುವ ಸರ್ವೆ, ತಾಳೆ ಬೆಳೆ, ಆಹಾರ, ಪೊಲೀಸ್, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶೋಕಸ್ ನೋಟೀಸ್ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.

ಆರೋಗ್ಯ ಇಲಾಖೆ: ಫೆಬ್ರವರಿ 7 ರಿಂದ 28ರ ತನಕ 9 ತಿಂಗಳಿನಿಂದ 15 ವರ್ಷದ ಮಕ್ಕಳಿಗೆ ರುಬೇಲಾ ಹಾಗೂ ದಡಾರ ಖಾಯಿಲೆಗೆ ಲಸಿಕೆಯನ್ನು ಹಾಕಲಾಗುವದು. ಪೆಬ್ರವರಿ ಮೊದಲ ವಾರದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗುವದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿದರು.

ಅಬಕಾರಿ ಇಲಾಖೆ: ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇಲಾಖೆ ಮದ್ಯಮಾರಾಟದ ದಾಖಲೆ ಹೆಚ್ಚಿಸಲು ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಅಬಕಾರಿ ಅಧಿಕಾರಿ ಲಕ್ಷ್ಮೀಶ, ಅಕ್ರಮ ಮಧ್ಯ ಮಾರಾಟದ ಹಿನ್ನಲೆ ತಾಲೂಕಿನಲ್ಲಿ 7 ಜನರಿಗೆ ಒಂದು ವರ್ಷ ಸಜೆ, 10 ಸಾವಿರ ದಂಡ ವಿಧಿಸಲಾಗಿದೆ. ಮನೆಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಶಿಕ್ಷಣ ಇಲಾಖೆ: ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ನಡೆಯುತ್ತಿದೆ. 60ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಮರುದಾಖಲಾಗಿದ್ದಾರೆ. ಬಹಳಷ್ಟು ಮಕ್ಕಳು ವಲಸೆ ಹೋಗಿದ್ದಾರೆ. ತಾಲೂಕಿನ ಎಲ್ಲಾ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಪೂರ್ಣಗೊಂಡಿದೆ. ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲೆಗಳ ದುರಸ್ಥಿ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿದ್ದು, ಶೇಕಡ 60ರಷ್ಟು ಅರ್ಜಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಲ್ಲ ಎಂದು ತಾಲೂಕು ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು ಸಭೆಯಲ್ಲಿ ಮಾಹಿತಿ ನೀಡಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ: ಬುಡಕಟ್ಟು ಜನರಿಗೆ ನೀಡುವ ಪೌಷ್ಟಿಕ ಆಹಾರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ನೈಜ ಫಲಾನುಭವಿಗಳು ಇದರಿಂದ ದೂರ ಉಳಿದಿದ್ದಾರೆ ಎಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು. ಆಹಾರ ವಿತರಣೆಯಲ್ಲಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ದೊರಕುತ್ತಿಲ್ಲ. ಹಿಂದಿನ ಫಲಾನುಭವಿಗಳಿಗೆ ಆಹಾರ ವಿತರಿಸಲಾಗುತ್ತಿದೆ. ಆದರೆ ಫಲಾನುಭವಿಗಳು ಬಹಳಷ್ಟು ಮಂದಿ ಸ್ಥಳೀಯ ಪ್ರದೇಶದಲ್ಲಿ ವಾಸವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಭೆ ಸೂಚಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಅಧಿಕಾರಿ ನೈಜ ಫಲಾನುಭವಿಗಳಿಗೆ ಆಹಾರ ವಿತರಿಸುವ ಕ್ರಮಕ್ಕೆ ಮುಂದಾಗುವದಾಗಿ ಭರವಸೆ ನೀಡಿದರು.

ಕೃಷಿ ಇಲಾಖೆ: ಮೂರು ಸಾವಿರದ ಆರು ನೂರು ಹೆಕ್ಟೇರ್ ಪ್ರದೇಶ ಭತ್ತ ಬೆಳೆದ ಕೃಷಿಕರು ಕಂಗಾಲಾಗಿದ್ದಾರೆ. ಮಳೆ ಕಡಿಮೆಯಾದುದ್ದರಿಂದ ಇಳುವರಿ ಕುಂಠಿತಗೊಂಡಿದೆ. ಬೆಳೆದ ಬೆಳೆಯಲ್ಲೂ ಜೊಳ್ಳು ಭತ್ತ ಹೆಚ್ಚಾಗಿ ಕಾಣಿಸಿಕೊಂಡಿದೆ. ನಷ್ಟ ಸಂಭವಿಸಿದ ಕೃಷಿಕರಿಗೆ ಪರಿಹಾರ ಧನವಾಗಿ ಒಂದು ಎಕರೆಗೆ ಆರು ಸಾವಿರದ ಎಂಟು ನೂರು ರೂಪಾಯಿ ನೀಡುವದಾಗಿ ಕೃಷಿ ಅಧಿಕಾರಿ ರೀನಾ ಮಾಹಿತಿ ನೀಡಿದರು.

ಪೊಲೀಸ್ ಇಲಾಖೆ: ಇತ್ತೀಚಿನ ದಿನಗಳಲ್ಲಿ ಗೋ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತಾಳಿದೆ. ಕಳೆದ ಹುತ್ತರಿ ದಿನದಂದು ಮೇಕತಂಡ ಪೊನ್ನಣ್ಣ ಅವರ 70 ರಿಂದ 80 ಸಾವಿರ ಬೆಲೆ ಬಾಳುವ ಜರ್ಸಿ ತಳಿಯ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಪೊಲೀಸರಲ್ಲಿ ಮಾಹಿತಿ ಬಯಸಿದರು. ಇದಕ್ಕೆ ಉತ್ತರ ನೀಡಿದ ಉಪನಿರೀಕ್ಷಕ ಸುಬ್ರಮಣಿ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಮೀನುಗಾರಿಕಾ ಇಲಾಖೆ: ಪಂಚಾಯ್ತಿಯಿಂದ ಮೀನು ಮಾರಾಟ ಪರವಾನಗಿ ಹೊಂದಿದವರಿಗೆ ನಾಲ್ಕು ಚಕ್ರದ ಆಟೋಕ್ಕೆ ಅನುದಾನ ನೀಡಲಾಗುವದು ಎಂದು ಅಧಿಕಾರಿ ಪ್ರಿಯಾ ಮಾಹಿತಿ ನೀಡಿದರು.

ನೀರಾವರಿ ಇಲಾಖೆ: ಕಳತ್ಮಾಡು ಗ್ರಾಮದ ಭೀಮನಕಲ್ಲು ಪೈಸಾರಿ ಜನರ ಕುಡಿಯುವ ನೀರು ಸಮಸ್ಯೆ ಪರಿಹರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 3 ವರ್ಷಗಳಿಂದ ಕಾಮಗಾರಿಗೆ ಅನುದಾನ ಬಿಡುಗಡೆಯಾದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯೋಜನೆ ಕಾರ್ಯಗತಗೊಳ್ಳುತ್ತಿಲ್ಲ ಎಂದು ಹೊಸೂರು ಪಂಚಾಯಿತಿ ಉಪಾಧ್ಯಕ್ಷ ಕೊಲ್ಲೀರ ಗೋಪಿ ಚಿನ್ನಪ್ಪ ಆರೋಪಿಸಿದರು.

ಪೈಸಾರಿ ಜನರ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು ಶೀಘ್ರ ಪ್ರಗತಿ ಸಾಧಿಸಲಿದೆ ಎಂದು ಅಧಿಕಾರಿ ಭರವಸೆ ನೀಡಿದರು.ಚೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇಲಾಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಅಧಿಕಾರಿಗಳು ಹಾಗೂ ತಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.