ವೀರಾಜಪೇಟೆ, ಜ.3: ದಕ್ಷಿಣ ಕೊಡಗಿನ ಕೊಂಗಣ ನದಿಗೆ ಅಣೆಕಟ್ಟನ್ನು ಕಟ್ಟಲು ಯೋಜನೆಯನ್ನು ಜಾರಿಗೊಳಿಸುವದರಿಂದ ಕೊಡಗಿಗೆ ಮಾರಕವಾಗಿದ್ದ ಬರಪೊಳೆ ಯೋಜನೆಯನ್ನು ಹಿಂಬಾಗಿಲಿನ ಮೂಲಕ ಕಾರ್ಯರೂಪಗೊಳಿಸುವ ಕುತಂತ್ರವನ್ನು ಮಾಜಿ ಶಾಸಕರು ಮಾಡುತ್ತಿದ್ದಾರೆ ಎಂದು ಕೊಡಗು ಜನಜಾಗೃತಿ ಸಮಿತಿಯ ಮಾಜಿ ಕಾರ್ಯದರ್ಶಿ ಬಲ್ಯಮೀದೇರಿರ ಸುಬ್ರಮಣಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬರಪೊಳೆ ಯೋಜನೆ ಎಂಬದು ಅಣೆಕಟ್ಟುಗಳ ಸಮುಚ್ಚಯ. ಈ ಯೋಜನೆಯಲ್ಲಿ ದಕ್ಷಿಣ ಕೊಡಗಿನ ಉರುಟ್ಟಿ, ಚೋಮ, ಕಕ್ಕಟ್ಟುಕಡು, ಕೊಂಗಣ, ಸಾರಥ್ ಅಬ್ಬಿ, ಕೆದಮುಳ್ಳೂರಿನ ಕೀರ್ತಿ ಹೊಳೆಗಳಿಗೆ ಅಡ್ಡಲಾಗಿ ಸಣ್ಣ ಪ್ರಮಾಣದ ಅಣೆಕಟ್ಟುಗಳನ್ನು ನಿರ್ಮಿಸಿ 600 ಮೆಗಾವ್ಯಾಟ್ ವಿದ್ಯುತ್ ತಯಾರಿಸಿ ಉಳಿದ ನೀರನ್ನು ಲಕ್ಷ್ಮಣ ತೀರ್ಥ ಹೊಳೆಯ ಮೂಲಕ ಕೆ.ಆರ್.ಎಸ್‍ಗೆ ಹರಿಸುವ ಹುನ್ನಾರವಾಗಿದೆ. ಯೋಜನೆಯು ಕಾರ್ಯಗತವಾದರೆ ದಕ್ಷಿಣ ಕೊಡಗಿನ ಬಹುತೇಕ ಪ್ರದೇಶಗಳು ಮುಳುಗಡೆಗೊಳ್ಳಲಿದ್ದು ಕೊಡಗು ಅಂತರಾಜ್ಯ ಹೆದ್ದಾರಿಯ ಸಂಪರ್ಕವನ್ನು ಕಳೆದುಕೊಳ್ಳಲಿದೆ. ಈ ಯೋಜನೆಯ ವಿರುದ್ದ ಈ ಹಿಂದೆಯೇ ಜನಜಾಗೃತಿ ಸಭೆ ನಡೆಸಿ ಕಾರ್ಯಗತ ಗೊಳ್ಳದ ರೀತಿಯಲ್ಲಿ ನೋಡಿಕೊಳ್ಳ ಲಾಗಿತ್ತು. ಆದರೆ ಮಾಜಿ ಶಾಸಕರೊಬ್ಬರು ಮೈಸೂರು ಹಾಗೂ ಚಾಮರಾಜನಗರದಲ್ಲಿ ತನ್ನ ರಾಜಕೀಯ ಅಸ್ಥಿತ್ವವನ್ನು ಭದ್ರಪಡಿಸಿ ಕೊಳ್ಳುವ ಜಿಲ್ಲೆಗೆ ಮಾರಕವಾಗುವ ಪ್ರಯತ್ನ ಮಾಡುವದನ್ನು ಜಾಗೃತಿ ಸಮಿತಿ ವಿರೋಧಿಸುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಜಮ್ಮಾ ಜಾಗಕ್ಕೆ ಕಂದಾಯ ನಿಗದಿ ಮಾಡುವ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರ ಅಡಗಿದೆ. ಹಿಂದೆ ದೇವೆಗೌಡರ ಕಾಲದಲ್ಲಿ ಕಂದಾಯ ಸಚಿವರಾಗಿದ್ದ ಸಿದ್ದರಾಮಯ್ಯ ಅವರು ಇಂತಹ ಆದೇಶವನ್ನು ಹೊರಡಿಸಿದಾಗ ಪ್ರತಿಭಟನೆ ನಡೆಸಿ ಆದೇಶವನ್ನು ಹಿಂಪಡೆಯಲಾಗಿತ್ತು. ಜನ ಜಾಗೃತಿ ಸಮಿತಿ ಜಮ್ಮಾ ಜಾಗಕ್ಕೆ ಕಂದಾಯ ಹಾಗೂ ಕೊಂಗಣ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವದು ಅನಿವಾರ್ಯ ಎಂದರು.