ಶ್ರೀಮಂಗಲ, ಡಿ. 28 : ಜನಪ್ರತಿನಿಧಿಗಳನ್ನು, ಸ್ಥಳೀಯ ಜನರನ್ನು ಕತ್ತಲೆಯಲ್ಲಿಟ್ಟು ಹೊರಜಿಲ್ಲೆಯ ಉಪಯೋಗಕ್ಕಾಗಿ ಸ್ಥಳೀಯ ಜನರ ಹಿತಾಸಕ್ತಿಯನ್ನು ಬಲಿಕೊಟ್ಟು ಇಲ್ಲಿನ ಕೃಷಿ ಭೂಮಿ ಯನ್ನು ಮುಳುಗಿಸುವ ಕೊಂಗಣ ನದಿ ತಿರುವು ಯೋಜನೆಯನ್ನು ವಿರೋಧಿಸಿ ಹುದಿಕೇರಿ ಗ್ರಾ.ಪಂ. ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು. ಮೈಸೂರು, ಮಂಡ್ಯ ಜಿಲ್ಲೆಯ ಉಪಯೋಗಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಹರಿಯುತ್ತಿರುವ ಕೊಂಗಣ ನದಿಯನ್ನು ಲಕ್ಷ್ಮಣ ತೀರ್ಥಕ್ಕೆ ಜೋಡಿಸುವ ಯೋಜನೆ ರೂಪು ಗೊಳ್ಳುತ್ತಿದೆ. ಎತ್ತರದಲ್ಲಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿಗೆ ತಗ್ಗು ಪ್ರದೇಶದಲ್ಲಿ ಹರಿಯುತ್ತಿರುವ ಕೊಂಗಣ ನದಿಯನ್ನು ಜೋಡಿಸಲು ಸಾಧ್ಯವಿಲ್ಲ. ಒಂದು ವೇಳೆ ನದಿ ಜೋಡಣೆ ನಡೆಸಲು ಭಾರೀ ಎತ್ತರದ ಅಣೆಕಟ್ಟು ನಿರ್ಮಿಸಬೇಕಾಗುತ್ತದೆ. ಈ ಸಂದರ್ಭ ಅಣೆಕಟ್ಟಿನ ಹಿನ್ನೀರಿಗೆ ನೂರಾರು ಎಕರೆ ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶ ಮುಳುಗಡೆಗೊಳ್ಳಲಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

ಜಿಲ್ಲೆಯಲ್ಲಿ ಕೃಷಿಗೆ ತೋಡು, ನದಿ, ಕೆರೆ ನೀರನ್ನು ಬಳಸಲು ತಡೆ ಮಾಡುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಜಿಲ್ಲೆಯ ಪರಿಸರವನ್ನು ರಕ್ಷಿಸಿ ತಾವು ತಮ್ಮ ಜಾಗದಲ್ಲಿ ತೋಡಿದ ಕೆರೆಗೆ ಮಳೆ ನೀರನ್ನು ಹಿಂಗಿಸಿ, ಬೇಸಿಗೆಯಲ್ಲಿ ಕೃಷಿ ಹಾಗೂ ತೋಟಗಳಿಗೆ ಉಪಯೋಗಿಸುವದಕ್ಕೆ ತಡೆ ಮಾಡುವದು ಸರಕಾರದ ಸರ್ವಾಧಿಕಾರಿ ಹಾಗೂ ರೈತ ವಿರೋಧಿ ಧೋರಣೆಯಾಗಿದೆ. ಹಾಗೆಯೇ ಸ್ಥಳೀಯ ನದಿ ತೋಡುಗಳ ನೀರನ್ನು ಕೃಷಿಗೆ ಬಳಸದಂತೆ ನಿರ್ಬಂಧಿಸುವದು ಸರಿಯಲ್ಲ. ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ನದಿ ನೀರನ್ನು ಕೆ.ಆರ್. ಎಸ್. ಅಣೆಕಟ್ಟಿನಲ್ಲಿ ಸಂಗ್ರಹಿಸಿ ಕಾಲುವೆಗಳ ಮೂಲಕ ಕೃಷಿಗೆ ಹರಿಸಲಾಗುತ್ತಿದೆ. ಆದರೆ ಅದೇ ನದಿಯ ನೀರನ್ನು ಜಿಲ್ಲೆಯಲ್ಲಿ ಕೃಷಿಗೆ ಬಳಸಬಾರದು ಎನ್ನುವದು ಜಿಲ್ಲೆಯ ರೈತರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಸರಕಾರ ಕಾಣುತ್ತಿರು ವದಕ್ಕೆ ಸಾಕ್ಷಿ ಎಂದು ಸದಸ್ಯರು ಆರೋಪಿಸಿದರು.

ಕೃಷಿ ಹಾಗೂ ತೋಟಗಾರಿಕೆಗೆ ನೀರು ಬಳಸುವ ಮೂಲಕ ಪರಿಸರದ ಹಸಿರು ಉಳಿಯುತ್ತದೆ. ಹಾಗೆಯೇ ನೆಲದಲ್ಲಿ ತೇವಾಂಶವಿರುತ್ತದೆ. ಇದರಿಂದ ಪ್ರಾಣಿ ಪಕ್ಷಿಗಳು ಸಹ ರಕ್ಷಣೆಯಾಗುತ್ತದೆ. ರೈತರ ಬೆಳೆಯೂ ಸಂರಕ್ಷಣೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿ, ತೋಡು, ಕೆರೆ, ನದಿಗಳ ನೀರನ್ನು ಕೃಷಿಗೆ ಹಾಗೂ ಕಾಫಿ ತೋಟಕ್ಕೆ ಬಳಸಲು ತಡೆ ಮಾಡುವದಕ್ಕೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

ಭತ್ತ ಬೆಳೆಯುವ ರೈತರ ಹುಲ್ಲನ್ನು ಮಾರಾಟ ಮಾಡಲು ಸರಕಾರ ತಡೆ ಮಾಡಿರುವದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

(ಮೊದಲ ಪುಟದಿಂದ) ಭತ್ತ ಬೆಳೆಯಿಂದ ಯಾವದೇ ಲಾಭ ಇಲ್ಲ. ಇದರ ಹುಲ್ಲನ್ನು ಮಾರಾಟ ಮಾಡಿದಾಗ ಮಾತ್ರ ಅಸಲು ದಕ್ಕುತ್ತದೆ. ಹುಲ್ಲು ಮಾರಾಟಕ್ಕೆ ತಡೆ ಮಾಡಿದರೆ ಭತ್ತದ ಕೃಷಿ ಮಾಡಲು ರೈತರು ಹಿಂದೇಟು ಹಾಕುತ್ತಾರೆ. ಉತ್ತಮ ಬೆಳೆಗೆ ಸರಕಾರವೇ ಹುಲ್ಲು ಖರೀದಿಸಲು ಮುಂದಾಗಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುನಿತಾ ಮೋಹನ್, ಸದಸ್ಯರಾದ ಚಂಗುಲಂಡ ಸೂರಜ್, ಮತ್ರಂಡ ಸೋಮಣ್ಣ, ಮೀದೇರಿರ ನವೀನ್, ನೂರೇರ ಮನೋಜ್, ಮಲ್ಲಂಗಡ ತಿಮ್ಮಯ್ಯ, ಅಜ್ಜಿಕುಟ್ಟೀರ ಮಾದಪ್ಪ, ಕಳ್ಳೇಂಗಡ ಸುಧಾ, ಎಂ.ಟಿ. ಹರಿಣಿ, ಎಂ. ಬಿಂದು, ಜೆ.ಆರ್. ಗಂಗಮ್ಮ, ಹೆಚ್.ಆರ್.ಗೊಂಬೆ, ಜೇನುಕುರುಬರ ಕಾಳು, ಪಿ.ಡಿ.ಒ ಕೆ.ಎಂ.ಹರೀಶ್ ಉಪಸ್ಥಿತರಿದ್ದರು.