ಮಡಿಕೇರಿ, ಜ.5 : ನೋಟು ಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಸರ್ಜಿಕಲ್ ಧಾಳಿ ನಡೆಸಿ, ಹಣವನ್ನು ಲೂಟಿ ಮಾಡುವ ಕಾರ್ಯ ಮಾಡಿದೆ ಎಂದು ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ನೋಟುಗಳನ್ನು ನಿಯಂತ್ರಣ ಮಾಡುತ್ತೇವೆ ಎಂದು ಹೇಳಿಕೊಂಡ ಕೇಂದ್ರ ಸರಕಾರ ನ.8 ರಂದು ನೋಟುಗಳನ್ನು ಅಮಾನ್ಯೀಕರಣ ಗೊಳಿಸಿತು. ಆದರೆ, ಮಾರನೇ ದಿನವೇ ರೂ. 2 ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆÉಗೊಂಡವು ಎಂದು ಟೀಕಿಸಿದರು. ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೂತನ ನೋಟುಗಳು ಬಿಜೆಪಿ ನಾಯಕರ ಬಳಿಯಲ್ಲೆ ಪತ್ತೆಯಾಗಿವೆ. ಗುಜರಾತ್‍ನ ಸಹಕಾರಿ ಬ್ಯಾಂಕ್‍ವೊಂದರಲ್ಲಿ ಬಿಜೆಪಿಗೆ ಸೇರಿದ 500 ಕೊಟಿ ರೂ. ಕೇವಲ 3 ದಿನಗಳಲ್ಲಿ ಜಮೆಯಾಗಿದೆ. ಇದು ಕೇಂದ್ರ ಸರ್ಕಾರದ ಲೂಟಿ ಮಾಡುವ ಸಂಚಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೊಡಗಿನಂತಹ ಪ್ರದೇಶದಲ್ಲಿ ಬೆಳೆÉಗಾರರು ಹಾಗೂ ಕಾರ್ಮಿಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. “ನನ್ನ ಹಣ, ನನ್ನ ಖರ್ಚು” ಎನ್ನುವ ನೀತಿ ಪಾಲನೆಯಾಗಬೇಕೇ ಹೊರತು, ದುಡಿದ ಹಣದ ಮೇಲೆ ಯಾರ ನಿಯಂತ್ರಣವೂ ಇರಬಾರದು. ದೇಶದ ಜನರ ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಪ್ರಧಾನ ಮಂತ್ರಿಗಳಿಂದ ಮಹಿಳಾ ವರ್ಗಕ್ಕೂ ಸಂಕಷ್ಟ ಎದುರಾಗಿದೆ. ಕಷ್ಟದ ದಿನಗಳಿಗಾಗಿ ಹಣವನ್ನು ಕೂಡಿಡುವದು ಈ ದೇಶದ ಮಹಿಳೆಯರ ಸಂಸ್ಕøತಿಯಾಗಿದ್ದು, ಇದಕ್ಕೂ ಕೇಂದ್ರ ಸರ್ಕಾರ ಅಡ್ಡಿಯಾಗಿದೆ ಎಂದು ಉಷಾ ನಾಯ್ಡು ಟೀಕಿಸಿದರು.

ದೇಶದಲ್ಲಿರುವ ಅವಿದ್ಯಾವಂತರ ಬಳಿ ಯಾವದೇ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳಿಲ್ಲ. ಆದರೂ ಕ್ಯಾಶ್ ಲೆಸ್ ವ್ಯವಹಾರವೆನ್ನುವ ಆತುರದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಆರ್ಥಿಕ ಸ್ಥಿತಿ ಸುಧಾರಿಸಲು ಇನ್ನೂ 9 ತಿಂಗಳು ಬೇಕೆಂದು ಈಗಾಗಲೆ ಆರ್‍ಬಿಐ ತಿಳಿಸಿದೆ. ಇದರಿಂದ ಆರ್ಥಿಕ ಕ್ಷೇತ್ರದ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮಗಳು ಎದುರಾಗಬಹುದೆಂದು ಅಭಿಪ್ರಾಯ ಪಟ್ಟ ಉಷಾ ನಾಯ್ಡು, ಜನರಿಂದ ಆಯ್ಕೆಯಾಗಿ ಬಂದ ಪ್ರಧಾನಿ ಮೋದಿ ಅವರು ಏಕ ನಿರ್ಧಾರವನ್ನು ತೆಗೆದುಕೊಳ್ಳದೆ, ಜನರ ಭಾವನೆಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಹುಸೇನ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಯಾವುದೇ ಆರ್ಥಿಕ ತಜ್ಞರು ಸ್ವಾಗತ ಮಾಡಿಲ್ಲವೆಂದು ಅಭಿಪ್ರಾಯಪಟ್ಟ ಅವರು, ನೋಟು ಅಮಾನ್ಯೀಕರಣ ಗೊಂಡು 50 ದಿನ ಕಳೆದ ನಂತರ ಜನರಲ್ಲಿದ್ದ ವಿಶ್ವಾಸ ಹುಸಿಯಾಗಿದೆ ಎಂದರು. ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡುವದಕ್ಕಾಗಿ ಡಿಜಿಟಲ್ ವ್ಯವಹಾರವನ್ನು ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹುಸೇನ್ ಟೀಕಿಸಿದರು.