ಮಡಿಕೇರಿ, ಆ. 9: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿಗಳಾದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳ ವಿರುದ್ಧ ಸೆ. 2 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಪೂರಕವಾಗಿ ಪ್ರತಿಭಟನೆಯನ್ನು ಸಂಘಟಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಕಾರ್ಮಿಕರಷ್ಟೇ ಜನಸಾಮಾನ್ಯರು ಸಹ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ದಿನನಿತ್ಯ ಬೆಲೆಗಳು ಗಗನಕ್ಕೇರುತ್ತಿವೆ. ನಿರುದ್ಯೋಗ ತಾಂಡವವಾಡು ತ್ತಿದೆ. ಸಾಮಾನ್ಯ ಜನರಿಗೆ ಉನ್ನತ ಶಿಕ್ಷಣ ಕನಸಿನ ಮಾತಾಗಿದೆ. ಸಾಂಸ್ಕøತಿಕವಾಗಿ ಇಡೀ ಸಾಮಾಜಿಕ ಜೀವನ ಕಲುಷಿತಗೊಂಡಿದೆ. ಯುವ ಜನತೆಗೆ ದಿಕ್ಕು ತಪ್ಪಿದಂತಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರಗಳು ಯಾವದೇ ಅಡೆತಡೆ ಇಲ್ಲದೆ ಸಾಗಿದೆ. ಇಡೀ ಸಾಮಾಜಿಕ ಜೀವನ ಬಿಕ್ಕಟ್ಟು ಎದುರಿಸುತ್ತಿದೆ.
ಅಸಂಘಟಿತ ವಲಯದಲ್ಲಿ ಕನಿಷ್ಟ ವೇತನವನ್ನು ಜಾರಿಗೊಳಿಸುವದು ರಾಜ್ಯ ಸರಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಸ್ಕೀಂ ನೌಕರರಿಗೆ ಯಾವದೇ ಸಾಮಾಜಿಕ ಭದ್ರತೆಗಳಿಲ್ಲ.
ಬೇಡಿಕೆಗಳು: ಬೆಲೆ ಏರಿಕೆಯನ್ನು ತಡೆಗಟ್ಟುವದು, ನಿರುದ್ಯೋಗ ಪರಿಸ್ಥಿತಿಯನ್ನು ನಿಯಂತ್ರಿಸುವದು, ಕಾರ್ಮಿಕಪರ ಕಾಯ್ದೆಗಳನ್ನು ಗಂಭೀರವಾಗಿ ಜಾರಿ ಮಾಡುವದು, ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸುವದು. ತಿಂಗಳಿಗೆ ಕನಿಷ್ಟ ವೇತನ ರೂ. 18 ಸಾವಿರ ನಿಗದಿಗೊಳಿಸುವದು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಿ ಪಿಂಚಣಿ ನೀಡುವದು, ಕಾರ್ಮಿಕ ಸಂಘಟನೆಗಳ ನೋಂದಣಿ ಪ್ರಕ್ರಿಯೆಯನ್ನು 45 ದಿನದೊಳಗೆ ಪೂರ್ಣಗೊಳಿಸುವದು, ಕಾರ್ಮಿಕ ವಿರೋಧಿ ಹಾಗೂ ಪ್ರತಿಗಾಮಿ ಲೇಬಲ್ ಕಾಯ್ದೆಗಳ ತಿದ್ದುಪಡಿಯನ್ನು ನಿಲ್ಲಿಸುವದು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಷೇರು ಬಂಡವಾಳ ಹಿಂತೆಗೆಯುವದನ್ನು ನಿಲ್ಲಿಸುವದು.
ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯೊಂದಿಗೆ ಚರ್ಚೆ ಮಾಡಿ ಬೇಡಿಕೆಗಳನ್ನು ಈಡೇರಿಸುವದು, ಕಾಡಾನೆ ಹಾವಳಿಯಿಂದ ಕಾರ್ಮಿಕರನ್ನು ಹಾಗೂ ರೈತರ ಬೆಳೆಯನ್ನು ರಕ್ಷಿಸಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಹಾಗೂ ಕೊಡಗಿನಲ್ಲಿ ಕಾರ್ಮಿಕ ನ್ಯಾಯಾಲಯವನ್ನು ಪುನರ್ ಆರಂಭಿಸಬೇಕು ಹಾಗೂ ಕಾರ್ಮಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.