ಸೋಮವಾರಪೇಟೆ, ಜು. 30: ಕಳೆದೊಂದು ವಾರದಿಂದ ಮಾಯವಾಗಿದ್ದ ಮಳೆ ಇಂದು ಜಿಟಿ ಜಿಟಿ ಬೀಳುತ್ತಿದ್ದರೆ, ಕೆಸರು ಗದ್ದೆಯಲ್ಲಿ ವಕ್ಕಲಿಗ ಜನಾಂಗಕ್ಕೆ ಸೇರಿದ ಮಕ್ಕಳು, ಪುರುಷರು ಮಹಿಳೆಯರಾದಿಯಾಗಿ ಎಲ್ಲಾ ವಯೋಮಾನದವರೂ ಮಿಂದೇಳುತ್ತಾ ಸಂಭ್ರಮಿಸಿದರು.
ಉಳುಮೆ ಕಾರ್ಯ ಪೂರ್ಣ ಗೊಂಡು ಇನ್ನೇನು ನಾಟಿ ಕಾರ್ಯಕ್ಕೆ ಸಿದ್ಧವಾಗಿದ್ದ ಗದ್ದೆಯಲ್ಲಿ ಕಾಲಿಟ್ಟರೆ ಮಂಡಿಯವರೆಗೂ ಕೆಳಜಗ್ಗುವ ಕೆಸರು. ಕೆಸರಿನ ಓಕುಳಿಯೊಂದಿಗೆ ಮಳೆ ಹನಿಗಳ ಸಿಂಚನ. ಮೈಯೆಲ್ಲಾ ಕೆಸರಾಗಿದ್ದರೂ ಕುಗ್ಗದ ಉತ್ಸಾಹದೊಂದಿಗೆ ಹಗ್ಗವನ್ನೆಳೆದ ಮಹಿಳೆಯರು-ಪುರುಷರು, ಕೆಸರಿನ ಮೇಲೆ ಒಂದು ಅಡಿ ನೀರು ನಿಂತಿದ್ದರಿಂದ ವಾಲಿಬಾಲ್ ಕೈಗೆ ಸಿಗದೆ ಕೆಸರಿನಲ್ಲಿ ಮುಳುಗಿದ ಮಂದಿ ಕೆಸರು ಗದ್ದೆ ಕ್ರೀಡಾಕೂಟದ ನಿಜವಾದ ಸವಿ ಅನುಭವಿಸಿದರು.
ವಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಕೂಡುರಸ್ತೆಯ ವೀರೇಶ್ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಕ್ಕಲಿಗ ಬಾಂಧವರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕ್ರೀಡಾಸ್ಫೂರ್ತಿಯೊಂದಿಗೆ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು.
ತಾಲೂಕಿನ ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ವಕ್ಕಲಿಗ ಬಾಂಧವರು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪುರುಷರು, ಮಹಿಳೆಯರು, ಯುವಕರು, ಯುವತಿಯರೂ ಸೇರಿದಂತೆ ಮಕ್ಕಳೂ ಸಹ ಕೆಸರಿನ ಸಿಂಚನದೊಂದಿಗೆ ಗದ್ದೆಯಲ್ಲಿ ಮಿಂದೆದ್ದರು.
ಬೆಳಿಗ್ಗೆ ಉದ್ಯಮಿ ಡಿ.ಕೆ. ಅರುಣ್‍ಕುಮಾರ್, ಹರಪಳ್ಳಿ ರವೀಂದ್ರ, ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ವಿಶ್ವ ವಕ್ಕಲಿಗರ ಬ್ರಿಗೇಡ್‍ನ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಸೇರಿದಂತೆ ಇತರರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಪುರುಷರಿಗೆ ಹಗ್ಗಜಗ್ಗಾಟ, ವಾಲಿ ಬಾಲ್, ಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್, ಗದ್ದೆ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.
ಕೆಸರು ಗದ್ದೆಯಲ್ಲಿ ಆಯೋಜಿಸುವ ಕ್ರೀಡಾಕೂಟಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರೀಯತೆ ಗಳಿಸುತ್ತಿವೆ. ಕೆಸರಿನಲ್ಲಿ ಆಟೋಟಗಳಲ್ಲಿ ಭಾಗವಹಿ ಸುವದರಿಂದ ದೈಹಿಕ ವಾಗಿಯೂ ಸದೃಢರಾಗಬಹುದು. ಕ್ರೀಡೆಗಳು ಆತ್ಮಸ್ಥೈರ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ ಎಂದು ಉದ್ಯಮಿ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ತಾಲೂಕಿನಲ್ಲಿರುವ ವಕ್ಕಲಿಗ ಬಾಂಧವರಲ್ಲಿ ಕ್ರೀಡಾ ಸ್ಫೂರ್ತಿ ತುಂಬುವ ಸಲುವಾಗಿ ಯುವ ವೇದಿಕೆ ವತಿಯಿಂದ ಕಳೆದ ಎರಡು ವರ್ಷದಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆಸಿರುವ ವಕ್ಕಲಿಗ ಬಾಂಧವರು ಹೆಚ್ಚಿನ ಉತ್ಸಾಹದೊಂದಿಗೆ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕ್ರೀಡೆಗಳಿಂದ ಪರಸ್ಪರ ಬಾಂಧವ್ಯವೂ ವೃದ್ಧಿಸುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಸಂದರ್ಭ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ವೇದಿಕೆಯ ಪದಾಧಿಕಾರಿ ಗಳಾದ ಹೆಚ್.ಕೆ. ಪ್ರಸಿ, ಎಸ್.ಐ. ಚೇತನ್, ದಯಾನಂದ್, ಸುರೇಶ್, ರವಿ, ಮಹೇಶ್, ಕಿಶೋರ್, ಅಶೋಕ್, ಯಡೂರು ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ತಾಲೂಕು ಪಂಚಾಯಿತಿಯ ಸದಸ್ಯೆಯರಾದ ತಂಗಮ್ಮ, ಸಬಿತಾ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ವಕ್ಕಲಿಗ ಬಾಂಧವರು ಕ್ರೀಡಾಕೂಟದಲ್ಲಿ ಭಾಗವಹಿಸಿ, ಕೆಸರು ಗದ್ದೆಯಲ್ಲಿ ಮಿಂದೆದ್ದು ಕ್ರೀಡಾ ಸ್ಫೂರ್ತಿ ಮೆರೆದರು.